ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ 29ರಂದು

ಕಾರವಾರ: ಒಂದು ಚುನಾವಣೆ ಮುಕ್ತಾಯವಾಗುತ್ತದೆ ಎಂಬ ಹೊತ್ತಿನಲ್ಲೇ ಮತ್ತೊಂದು ಚುನಾವಣೆಗೆಗೆ ಸಿದ್ಧತೆ ನಡೆದಿದೆ. ಅವಧಿ ಮುಕ್ತಾಯವಾದ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿದೆ. ಮೇ 29 ರಂದು ಮತದಾನ ನಡೆಯಲಿದೆ. ಮೇ 9 ರಂದು ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸುವರು. ಅಂದಿನಿಂದ ಮೇ 16 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 20 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. 31 ರಂದು ಮತ ಎಣಿಕೆ ನಡೆಯಲಿದೆ.

ಪುರಸಭೆಗಳಿಗೆ ಒಬ್ಬ ಅಭ್ಯರ್ಥಿ 1.50 ಲಕ್ಷ ರೂ. ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದೆ. ನೋಟಾ ಆಯ್ಕೆಗೆ ಅವಕಾಶವಿದ್ದು, ಮತ ಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರವನ್ನೂ ಇದೇ ಮೊದಲ ಬಾರಿಗೆ ಪ್ರಕಟಿಸಲಾಗುತ್ತಿದೆ. ಅಭ್ಯರ್ಥಿ ತನ್ನ ಆಸ್ತಿ ಕ್ರಿಮಿನಲ್ ಪ್ರಕರಣಗಳ ಕುರಿತು ಅಫಿಡವಿಟ್ ನೀಡುವುದು ಕಡ್ಡಾಯವಾಗಿದೆ.

ಎಲ್ಲೆಲ್ಲಿ ಚುನಾವಣೆ?
ಭಟ್ಕಳ ಪುರಸಭೆಯ 23 ವಾರ್ಡ್​ಗಳು, ಹೊನ್ನಾವರ ಪಪಂನ 20 ಮತ್ತು ಸಿದ್ದಾಪುರ ಪಟ್ಟಣ ಪಂಚಾಯಿತಿಯ 15 ವಾರ್ಡ್​ಗಳು ಸೇರಿ ಒಟ್ಟು 58 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. ಭಟ್ಕಳದಲ್ಲಿ 27, ಹೊನ್ನಾವರದಲ್ಲಿ 20 ಹಾಗೂ ಸಿದ್ದಾಪುರದಲ್ಲಿ 15 ಮತಗಟ್ಟೆಗಳನ್ನು ತೆರೆಯಲಾಗುವುದು.

ಆಡಳಿತಾಧಿಕಾರಿಗಳೇ ಬಾಸ್
ಉತ್ತರ ಕನ್ನಡ ಜಿಲ್ಲೆಯ ಮೂರು ನಗರಸಭೆಗಳು, ಮೂರು ಪುರಸಭೆಗಳು, ಎರಡು ಪಟ್ಟಣ ಪಂಚಾಯಿತಿಗಳ 199 ವಾರ್ಡ್​ಗಳಿಗೆ ಆ.3 ರಂದು ಮತದಾನ ನಡೆದಿತ್ತು. ಸೆ. 3 ರಂದು ಮತ ಎಣಿಕೆ ನಡೆದು ಅಭ್ಯರ್ಥಿಗಳ ಘೊಷಣೆಯಾಗಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯಲ್ಲಿ ಆದ ಗೊಂದಲಗಳಿಂದ ಇದುವರೆಗೂ ಸಮಿತಿ ರಚನೆಯಾಗಿಲ್ಲ. ಆಡಳಿತಾಧಿಕಾರಿಗಳು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಭಟ್ಕಳ, ಹೊನ್ನಾವರ ಹಾಗೂ ಸಿದ್ದಾಪುರ ನಗರ ಸಂಸ್ಥೆಗಳ ಸಮಿತಿ ಅವಧಿ ಮಕ್ತಾಯವಾಗಿ ಎರಡು ತಿಂಗಳು ಕಳೆದಿದ್ದು, ಈಗಾಗಲೇ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.