ನಗರ ಸಾರಿಗೆಗೆ ಗಮನ ಹರಿಸಲಿ

ಹುಬ್ಬಳ್ಳಿ: ದೇಶದಾದ್ಯಂತ ಮೆಟ್ರೊ ಸಾರಿಗೆ ಅಭಿವೃದ್ಧಿಗಷ್ಟೇ ಹಣ ಸುರಿಯದೇ ರಸ್ತೆ ಸಾರಿಗೆ ಅಭಿವೃದ್ಧಿಯತ್ತಲೂ ಸರ್ಕಾರ ಗಮನ ಹರಿಸಬೇಕು ಎಂದು ವಿಶ್ವಬ್ಯಾಂಕ್​ನ ಹಿರಿಯ ಅಧಿಕಾರಿ ನೂಪುರ ಗುಪ್ತಾ ಹೇಳಿದರು.

ಹು-ಧಾ ಬಿಆರ್​ಟಿಎಸ್ ವತಿಯಿಂದ ನಗರದ ಖಾಸಗಿ ಹೋಟೆಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ಪ್ರದೇಶದಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆ ನಿರ್ಮಾಣ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಪ್ರತಿ ವರ್ಷ ಮೆಟ್ರೊಕ್ಕಾಗಿ 25 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಇದರೊಂದಿಗೆ ರಸ್ತೆ ಸುಧಾರಣೆ, ಗುಣಮಟ್ಟದ ಫುಟ್​ಪಾತ್ ನಿರ್ವಣ, ವ್ಯವಸ್ಥಿತ ಸಾರಿಗೆಯಂಥ ಸೌಲಭ್ಯಗಳನ್ನು ಒದಗಿಸಲೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಮೂಹ ಸಾರಿಗೆ ವ್ಯವಸ್ಥೆ ಬಳಸುವವರ ಸಂಖ್ಯೆ ಕಡಿಮೆ ಇದೆ. ಕಾರು, ಆಟೊ, ಮಿನಿ ಬಸ್, ಬೈಕ್​ಗಳ ಉಪಯೋಗ ಹೆಚ್ಚುತ್ತಿದೆ. ಇದರಿಂದಾಗಿ ಇಂಧನ ಹೆಚ್ಚು ಬಳಕೆಯಾಗುವ ಜೊತೆಗೆ ಪರಿಸರದ ಮೇಲೆಯೂ ಪರಿಣಾಮ ಉಂಟಾಗುತ್ತಿದೆ. ರಾಷ್ಟ್ರೀಯ ಸರಾಸರಿಯಂತೆ 1 ಸಾವಿರ ಜನರಿಗೆ 20 ಕಾರುಗಳಿರಬೇಕಿತ್ತು. ಆದರೆ ಕಾರುಗಳ ಸಂಖ್ಯೆ 50 ಕ್ಕೆ ಏರಿದ್ದು, 2050ನೇ ವರ್ಷಕ್ಕೆ ಪ್ರತಿ 1 ಸಾವಿರ ಜನರಿಗೆ 200 ಕಾರುಗಳು ಬಳಕೆಯಾಗುವ ನಿರೀಕ್ಷೆ ಇದೆ. ಇದರಿಂದ ಪರಿಸರದ ಮೇಲೆ ಮತ್ತಷ್ಟು ದುಷ್ಪರಿಣಾಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಶ್ವ ಬ್ಯಾಂಕಿನ ಶೋಮಿಕ್ ಮೆಂದಿರತ್ತಾ ಮಾತನಾಡಿ, ನಗರ ಸಾರಿಗೆ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂದರು.

ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್ ವ್ಯವಸ್ಥೆಯನ್ನು ವಿಶ್ವಕ್ಕೆ ಮಾದರಿಯನ್ನಾಗಿಸಬೇಕು ಎಂದು ಸಲಹೆ ನೀಡಿದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಆರ್​ಟಿಎಸ್​ನಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಇಂಟಲಿಜೆಂಟ್ ಟ್ರಾನ್ಸ್​ಪೋರ್ಟ್ ಸಿಸ್ಟ್ಟå್ನಡಿ ಮೈಸೂರಿನಲ್ಲಿ ಪ್ರಾರಂಭಿಸಿರುವ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಿದ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಸುದೇಶ ಕುಮಾರ, ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ ಹಾಗೂ ಛತ್ತಿಸಘಡನ ನಯಾ ರಾಯಪುರ ಬಿಆರ್​ಟಿಎಸ್​ನ ವಿವರ ನೀಡಿದರು.

ವಿಶ್ವ ಬ್ಯಾಂಕಿನ ಜಾಗತಿಕ ಸಾರಿಗೆ ವಿಭಾಗದ ಹಿರಿಯ ನಿರ್ದೇಶಕ ಗ್ಯುಂಗಝೆ ಚೆನ್ ಮಾತನಾಡಿ, ಸಮೂಹ ಸಾರಿಗೆ ಬಳಕೆ ಹೆಚ್ಚಾಗಬೇಕು. ಇದರಿಂದ ಪರಿಸರ ಮಾಲಿನ್ಯ ತಡೆಯಬಹುದಾಗಿದೆ ಎಂದರು.

ಪಿಂಪ್ರಿ-ಚಿಂಚವಾಡ ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ನಯನಾ ಗುಂಡೆ, ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

ಸ್ಮಾರ್ಟ್​ಕಾರ್ಡ್ ವಿತರಣೆ ಮಾ.1ರಿಂದ: ಎಚ್​ಡಿಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ಅವಳಿನಗರ ಮಧ್ಯದ ಬಿಆರ್​ಟಿಎಸ್ ಪ್ರಯಾಣಿಕರಿಗೆ ಮಾ.1ರಿಂದ ಸ್ಮಾರ್ಟ್​ಕಾರ್ಡ್ ವಿತರಿಸುವುದಾಗಿ ತಿಳಿಸಿದರು. ಎಚ್​ಡಿಬಿಆರ್​ಟಿಎಸ್ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಜನವರಿಯಲ್ಲಿ ಪ್ರತಿ ದಿನಕ್ಕೆ 6ರಿಂದ 7 ಲಕ್ಷ ರೂ. ಆದಾಯವಾಗಿದೆ. ಈಗಾಗಲೇ 100 ಚಿಗರಿ ಬಸ್​ಗಳು ಸಂಚರಿಸುತ್ತಿದ್ದು, ಬೇಂದ್ರೆ ಸಾರಿಗೆ ಹಾಗೂ ವಾಯವ್ಯ ರಸ್ತೆ ಸಾರಿಗೆಯ ಕೆಲ ಬಸ್​ಗಳ ಸಂಚಾರ ಸ್ಥಗಿತಗೊಂಡ ನಂತರ ಚಿಗರಿ ಬಸ್​ಗಳ ಸಂಚಾರ ಹೆಚ್ಚಿಸಲಾಗುವುದು ಎಂದು ಹೇಳಿದರು.