ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ

ಗದಗ: ಜಿಲ್ಲೆಯ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸುವ ಕುರಿತು ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲನ್ ಆದಿತ್ಯ ಬಿಸ್ವಾಸ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲೆಯ ಬರ ನಿರ್ವಹಣೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಯಮ, ಸಮಸ್ಯೆಗಳು ಅಡ್ಡಿ ಬಂದರೂ ಜಿಲ್ಲಾಧಿಕಾರಿಗಳು ಅವುಗಳನ್ನು ಮೀರಿ ನೀರು ಪೂರೈಕೆಗೆ ಆದೇಶ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ ಕುಡಿಯುವ ನೀರಿನ ಡಿಬಿಒಟಿ ಯೋಜನೆಯಿಂದಾಗಿ ಹೊಸ ಕೊಳವೆಬಾವಿ ಕೊರೆಯದೇ ನೀರು ಪೂರೈಕೆಗೆ ಸಾಧ್ಯವಾಗಿರುವುದು ಒಳ್ಳೆಯ ಸಂಗತಿ. ಆದಾಗ್ಯೂ ಮುಂಗಾರುಪೂರ್ವ ಮಳೆ ಕೊರತೆ ಇರುವುದರಿಂದ ಪೂರೈಸುವ ನೀರು, ಭವಿಷ್ಯದ ದೃಷ್ಟಿಯಿಂದ ಅಗತ್ಯಕ್ಕೆ ಅನುಸಾರವಾಗಿ ಮಿತವ್ಯಯ ಮಾಡಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂಗಳು ಜನಜಾಗೃತಿಗೆ ಮುಂದಾಗಬೇಕು ಎಂದು ಸೂಚಿಸಿದರು.

ಮುಂಗಾರು ಮಳೆಯಾದಾಗ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾದ 28 ಮೇವು ಬ್ಯಾಂಕ್​ಗಳಿಂದ ಗುಣಮಟ್ಟದ ಮೇವು ವಿತರಿಸಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಡಿಬಿಒಟಿ ಮೂಲಕ ನೀರು ಪೂರೈಕೆಯಾಗುತ್ತಿದ್ದು, ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1,629 ಕೊಳವೆಬಾವಿಗಳು ಕಾರ್ಯಾಚರಣೆಯಲ್ಲಿವೆ. ನರೇಗಲ್, ಗಜೇಂದ್ರಗಡ ಹಾಗೂ ರೋಣ ಪಟ್ಟಣದಲ್ಲಿ 20 ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಸಾರ್ವಜನಿಕರಿಗೆ ನೀರನ್ನು ಪೂರೈಸಲಾಗುತ್ತಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತದ ಬಳಿ ಒಟ್ಟು 16.16 ಕೋಟಿ ರೂ. ಲಭ್ಯವಿದೆ ಎಂದರು.

ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಉದ್ಯೊಗ ಖಾತ್ರಿ ಯೋಜನೆಯಡಿ ಈವರೆಗೆ 54.46 ಕೋಟಿ ರೂ. ವೆಚ್ಚದಲ್ಲಿ 9.58 ಲಕ್ಷ ಮಾನವ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಮುಂಡರಗಿ ತಾಲೂಕು ಡಂಬಳ ಗ್ರಾಮದಲ್ಲಿ ಗೋಶಾಲೆಯನ್ನು ತೆರೆಯಲಾಗಿದ್ದು, 95 ಜಾನುವಾರುಗಳು ದಾಖಲಾಗಿವೆ. 11,530 ಮೆ.ಟನ್ ಮೇವು ದಾಸ್ತಾನಿಡಲಾಗಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾಗಿರುವ ಜಿಲ್ಲೆಯ 35 ಗ್ರಾಮಗಳಲ್ಲಿ ಉದ್ದೇಶಿತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಸಮನ್ವಯ ಸಾಧಿಸಲು ಸಾಧ್ಯವಿರುವೆಡೆ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳಬೇಕು. ಅಂಗನವಾಡಿ, ಗ್ರಂಥಾಲಯ, ವ್ಯಾಯಾಮ ಶಾಲೆ ಮುಂತಾದ ಕಟ್ಟಡಗಳು ಜನಸ್ನೇಹಿ ಆಗಿರುವಂತೆ ಆದ್ಯತೆ ನೀಡಬೇಕು.
| ಆಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Leave a Reply

Your email address will not be published. Required fields are marked *