ನಗರಸಭೆ ಪಂಪ್ ಮೋಟಾರ್ ಕಳವು

ಕೋಲಾರ: ನಗರಸಭೆ ವ್ಯಾಪ್ತಿಯ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪ್​ವೊಟಾರ್ ಕಳವಾಗಿದ್ದು, ಜುಲೈ ಅಂತ್ಯದೊಳಗೆ ಮಾಹಿತಿ ಒದಗಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಡಿಸಿ ಜೆ.ಮಂಜುನಾಥ್ ಎಚ್ಚರಿಸಿದರು.

ನಗರಸಭೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪಂಪ್ ಮೋಟಾರ್​ಗಳ ಕಳವಿನ ಬಗ್ಗೆ ಮಾಹಿತಿ ಕಲೆಹಾಕಿ, ನಗರಸಭೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಪ್ರತಿನಿತ್ಯ ಕರೆಗಳು ಬರುತ್ತಿವೆ. ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮುತುವರ್ಜಿಯಿಂದ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಮೋಟಾರ್ ಕುರಿತು ಮಾಹಿತಿ ನೀಡಲು ಇಂಜಿನಿಯರ್​ಗಳಾದ ಸುಧಾಕರಶೆಟ್ಟಿ ಮತ್ತು ಪೂಜಾರಪ್ಪ ತಡಬಡಾಯಿಸಿದಾಗ ಕುಪಿತರಾದ ಡಿಸಿ ನಿಮ್ಮಲ್ಲಿಯೇ ಮಾಹಿತಿ ಇಲ್ಲದಿದ್ದರೆ ಬೇರೆ ಯಾರನ್ನು ಪ್ರಶ್ನಿಸಬೇಕು? ತಿಂಗಳ ಅಂತ್ಯದಲ್ಲಿ ವರದಿ ಸಲ್ಲಿಸದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಗುಡುಗಿದರು.

ಕೆಲ ವಾರ್ಡ್​ಗಳಲ್ಲಿ ಮಾಜಿ ಸದಸ್ಯರು ಬೋರ್​ವೆಲ್ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆಂದು ಇಂಜಿನಿಯರ್​ಗಳು ತಿಳಿಸಿದಾಗ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ಮಾಜಿ ಸದಸ್ಯರು ಕಾಮಗಾರಿ ಅಡ್ಡಿಪಡಿಸುವುದರಲ್ಲಿ ಅರ್ಥವಿಲ್ಲ. ನಿಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಏಕೆ ದೂರು ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಸಬೂಬು ಹೇಳುವುದನ್ನು ಬಿಟ್ಟು ಜನಪರ ಕೆಲಸ ಮಾಡಿ, ಯಾರಾದರೂ ಅಡ್ಡಿಪಡಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.

ಕೊಳವೆಬಾವಿ ದುರಸ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಿದಲ್ಲಿ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ವೇತನಕ್ಕೆ ಕತ್ತರಿ ಬೀಳಲಿದೆ ಎಂದು ಎಚ್ಚರಿಸಿದರು.

ಕುಡಿಯುವ ನೀರು, ಕಸ ವಿಲೇವಾರಿ ಸಂಬಂಧಿಸಿದಂತೆ ಸಾಕಷ್ಟು ಬಾರಿ ತಿಳಿವಳಿಕೆ ನೀಡಿದ್ದರೂ ಸುಧಾರಣೆ ಆಗುತ್ತಿಲ್ಲ. ಇದು ನನ್ನ ಕೊನೇ ಎಚ್ಚರಿಕೆ. ತಕ್ಷಣದಿಂದಲೇ ಮನಸ್ಥಿತಿ ಬದಲಿಸಿಕೊಳ್ಳದಿದ್ದಲ್ಲಿ ಮುಲಾಜಿಲ್ಲದೆ ನಿಮ್ಮನ್ನು ಬದಲಿಸಬೇಕಾಗುತ್ತದೆ ಎಂದು ತಿಳಿಸಿದರು.

ನಗರಸಭೆಯಲ್ಲಿ ಏನಾಗುತ್ತಿಗೆ ಎಂಬುದರ ಬಗ್ಗೆ ಪೌರಾಯುಕ್ತರಿಗೆ ಅರಿವು ಇರಬೇಕು. ಎಲ್ಲ ಜವಾಬ್ದಾರಿಯನ್ನು ಸಿಬ್ಬಂದಿಗೆ ವಹಿಸಿ ಕೈ ಕಟ್ಟಿ ಕುಳಿತರೆ ಪ್ರಯೋಜನವಾಗುವುದಿಲ್ಲ. ಸಾರ್ವಜನಿಕರಿಂದ ದೂರು ಬಂದಲ್ಲಿ ಸಹಿಸಿಕೊಳ್ಳುವುದಿಲ್ಲ ಎಂದು ಪೌರಾಯುಕ್ತ ಟಿ.ಆರ್.ಸತ್ಯನಾರಾಯಣಗೆ ಚಾಟಿ ಬೀಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ರಂಗಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *