ನಗರಸಭೆಯಲ್ಲಿನ ಅಕ್ರಮ ತನಿಖೆ

ಕೋಲಾರ: ನಗರಸಭೆಯಿಂದ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲನೆಯೊಂದಿಗೆ ತನಿಖೆ ನಡೆಸಿದ್ದಾರೆ.

ಕೇಂದ್ರ ಪುರಸ್ಕೃತ ಅಮೃತಸಿಟಿ ಯೋಜನೆ ಕಾಮಗಾರಿ, ಟ್ಯಾಂಕರ್ ನೀರು ಸರಬರಾಜು, ಸ್ವಚ್ಛತೆ, ವಾಹನಗಳಿಗೆ ಡಿಸೇಲ್ ಹಾಕಿಸಿದ್ದರಲ್ಲಿ ಗೋಲ್​ವಾಲ್, ಕಾನೂನು ಉಲ್ಲಂಘಿಸಿ ಬಹುಮಹಡಿ ಕಟ್ಟಡಗಳಿಗೆ ಪರವಾನಗಿ ನೀಡಿಕೆ ಸೇರಿ ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಮಾಜಿ ಸದಸ್ಯ ಎಸ್.ಆರ್.ಮುರಳಿಗೌಡ, ಮುಖಂಡ ಕಾಡಹಳ್ಳಿ ಲೋಕೇಶ್ ಇತರರು ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕ ಪ್ರಸಾದ್ ನೇತೃತ್ವದ ತನಿಖಾಧಿಕಾರಿಗಳ ತಂಡ ಮಧ್ಯಾಹ್ನ ನಗರಸಭೆ ಕಾರ್ಯಾಲಯಕ್ಕೆ ಆಗಮಿಸಿದೆ.

ಈ ವೇಳೆ ಹಾಜರಿದ್ದ ಮಾಜಿ ಉಪಾಧ್ಯಕ್ಷ ವಿ.ಕೆ. ರಾಜೇಶ್ ದೂರುಗಳ ಸುರಿಮಳೆಗರೆದರು. ಚಿಕ್ಕ ಚನ್ನಂಜಪ್ಪ ಪಾರ್ಕ್ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದರೂ ಇಂಜಿನಿಯರ್ ಸ್ಥಳ ಪರಿಶೀಲಿಸದೆ ಬಿಲ್ ಪಾವತಿಸಿದ್ದಾರೆ. ಕುವೆಂಪು ಪಾರ್ಕ್​ನಲ್ಲಿ ನಡೆಸಿರುವ ಕಾಮಗಾರಿ ತಿಂಗಳಲ್ಲೇ ಕಿತ್ತು ಬಂದಿದೆ. ಇ ಖಾತೆಗೆ ಅರ್ಜಿ ಹಾಕಿದರೆ ತಿಂಗಳಾನುಗಟ್ಟಲೆ ಅಲೆದಾಡಿಸುತ್ತಾರೆ ಎಂದು ದೂರಿದರು.

ಮಾಜಿ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆ ವಾಹನಗಳಿಗೆ ಡಿಸೇಲ್ ಹಾಕಿಸಿದ್ದಕ್ಕೆ ಆರೋಗ್ಯ ನಿರೀಕ್ಷಕರು ಸಮರ್ಪಕವಾಗಿ ಬಿಲ್ ಕೊಡದೆ ನಕಲಿ ಬಿಲ್ ಕೊಟ್ಟು ಹಣ ಡ್ರಾ ಮಾಡುತ್ತಿದ್ದಾರೆ. ಕೌನ್ಸಿಲ್ ಹಿಂದಿನ ಅವಧಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬೋರ್​ವೆಲ್ ದುರಸ್ತಿ, ಬೀದಿದೀಪ ನಿರ್ವಹಣೆಯಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಟಮಕ ಬಡಾವಣೆಯಲ್ಲಿ ಪ. ಜಾತಿಗೆ ಮೀಸಲಿರಿಸಿದ ಸ್ಮಶಾನ ಅಭಿವೃದ್ಧಿ ಕಾಮಗಾರಿ ನಡೆಸದಿದ್ದರೂ ಇಂಜಿನಿಯರ್​ಗಳು ಶಾಮೀಲಾಗಿ ಗುತ್ತಿಗೆದಾರನಿಗೆ ಬಿಲ್ ಪಾವತಿಸಿದ್ದಾರೆ ಎಂದು ಲೋಕೇಶ್ ದೂರಿದರು.

ಕಡತ ಪರಿಶೀಲಿಸಿ ತನಿಖೆ ನಡೆಸುತ್ತೇವೆ. ಅಕ್ರಮ ಎಸಗಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತನಿಖಾಧಿಕಾರಿ ಪ್ರಸಾದ್ ಹೇಳಿದರು.

ನಂತರ ನಗರದಲ್ಲಿ ಅಮೃತಸಿಟಿ ಯೋಜನೆಯನ್ವಯ ನಡೆದಿರುವ ಕಾಮಗಾರಿ, ಚಿಕ್ಕಚನ್ನಂಜಪ್ಪ ಪಾರ್ಕ್ ಕಾಮಗಾರಿ, ಟಮಕದಲ್ಲಿನ ಸ್ಮಶಾನ ಕಾಮಗಾರಿ ವೀಕ್ಷಿಸಿ ಕಳಪೆ ಕಾಮಗಾರಿಗೆ ನಗರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪೌರಾಡಳಿತ ಇಲಾಖೆ ಅಧಿಕಾರಿ ಮಂಜೇಶ್, ಕೋಲಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ. ರಂಗಸ್ವಾಮಿ, ಪೌರಾಯುಕ್ತ ಸತ್ಯನಾರಾಯಣ ಹಾಜರಿದ್ದರು.

Leave a Reply

Your email address will not be published. Required fields are marked *