ನಗರದ ತುಂಬ ಬೇಡರವೇಷಗಳ ಕುಣಿತ

ಶಿರಸಿ: ಶಿರಸಿ ನಗರ ಈಗ ಸರಿ ರಾತ್ರಿ ಕಳೆದರೂ ನಿದ್ರೆಗೆ ಜಾರುತ್ತಿಲ್ಲ. ರಾತ್ರಿ 12 ಗಂಟೆ ಆದರೂ ಮಹಿಳೆಯರು, ಮಕ್ಕಳು ನಿದ್ರೆಯನ್ನು ಸನಿಹಕ್ಕೂ ತಂದುಕೊಳ್ಳದೇ ಬೇಡರ ವೇಷವನ್ನು ಆಸಕ್ತಿಯಿಂದ ನೋಡುತ್ತಿದ್ದಾರೆ.

ರಾಜ್ಯದ ಬೇರೆಲ್ಲೂ ಕಾಣಸಿಗದ, ಅಪರೂಪದ ಕಲೆ ಬೇಡರ ವೇಷ ಈಗ ನಗರದಲ್ಲಿ ಗರಿಗೆದರಿದೆ. ಹೋಳಿ ಹುಣ್ಣಿಮೆ ಹಬ್ಬದ ಅಂಗವಾಗಿ ಆಚರಿಸಲಾಗುವ ಈ ಸಾಂಪ್ರದಾಯಿಕ ಕಲೆ ಭಾನುವಾರ ರಾತ್ರಿಯಿಂದ ಆರಂಭಗೊಂಡಿದ್ದು, ಮಾ. 20ರ ರಾತ್ರಿಯವರೆಗೂ ನಡೆಯಲಿದೆ.

ಹಾನಗಲ್ ಭಾಗದ ಕಳ್ಳನ್ನನು ರಾಜ ಭಟರು ಹಿಡಿದ ಕಥೆಯನ್ನಾಧರಿಸಿದ ಈ ಕಲೆಯಲ್ಲಿ ಬೇಡರ ವೇಷಧಾರಿ ರೋಷಾವೇಶ ಪ್ರದರ್ಶಿಸುತ್ತಾರೆ. ಕಳೆದ ಒಂದು ತಿಂಗಳಿಂದ ತಾಲೀಮು ನಡೆಸಿದ ನಗರದ ಯುವಕರು ಈಗ ವೇಷಧಾರಿಯಾಗಿ ನಗರದ ವಿವಿಧೆಡೆ ತಿರುಗಿ ತಡ ರಾತ್ರಿಯಾದ ಮೇಲೆ ಮಾರಿಕಾಂಬೆ ಎದುರು ತಮ್ಮ ಪ್ರದರ್ಶನ ನೀಡುತ್ತಿದ್ದಾರೆ. ಭಯ ಮೂಡಿಸುವ ಮಾದರಿಯಲ್ಲಿ ಮುಖಕ್ಕೆ ಕೆಂಪು ಬಣ್ಣ, ಬಿಳಿಯ ಪಟ್ಟಿಗಳು, ಬೆನ್ನಿಗೆ ನವಿಲುಗರಿ ಕಟ್ಟಿಕೊಂಡ ವೇಷಧಾರಿಯನ್ನು ನಿಯಂತ್ರಿಸಲು ಹಗ್ಗ ಹಿಡಿದವರು ಹೆಣಗಾಡುತ್ತಿರುವ ಸನ್ನಿವೇಶ ಸಾಮಾನ್ಯವಾಗಿ ಕಾಣಸಿಗುತ್ತಿದೆ. ಮರದ ಕತ್ತಿಯನ್ನು ಬೀಸುತ್ತ ಜನರ ಮಧ್ಯೆಯೇ ನುಗ್ಗಿ ಪ್ರದರ್ಶಿಸುವ ನೃತ್ಯಕ್ಕೆ ಮಕ್ಕಳು ಭಯಭೀತರಾಗುತ್ತಿದ್ದಾರೆ, ಯಾವ ತಂಡಕ್ಕಿಂತ ಯಾವುದು ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಸಾರ್ವಜನಿಕರು ಪರಸ್ಪರ ರ್ಚಚಿಸುತ್ತಿದ್ದಾರೆ.

ಭಾನುವಾರ ರಾತ್ರಿ ಮಾರಿಕಾಂಬಾ ದೇವಾಲಯದ ಬಾಬುದಾರರ ತಂಡ, ಮಾರಿಕಾಂಬಾ ನಗರದ ಭೂತೇಶ್ವರ ಮಂಡಳಿ, ಶಿರಡಿ ಸಾಯಿ ಗೆಳೆಯರ ಬಳಗ, ಗಾಯತ್ರಿನಗರದ ಬೀರಪ್ಪ ನಾಗದೇವತೆ ಯುವಕ ಮಂಡಳಿ ತಂಡಗಳು ಬೇಡರ ವೇಷ ಪ್ರದರ್ಶಿಸಿವೆ. ಸೋಮವಾರ ರಾತ್ರಿ ಮಾರಿಕಾಂಬಾ ದೇವಸ್ಥಾನದ ಯುವಕರು, ವೀರಭದ್ರ ಗಲ್ಲಿಯ ಗೆಳೆಯರ ಬಳಗ, ಶ್ರೀರಾಮ ಕಾಲೋನಿಯ ತಂಡ, ಖಾಜಿಗಲ್ಲಿಯ ಮಾರಿಕಾಂಬಾ ಪ್ರೆಂಡ್ಸ್ ಸರ್ಕಲ್, ಭೀಮನಗುಡ್ಡ ತಂಡ, ಡ್ರೖೆವರ್ ಕಟ್ಟೆಯ ಶಿರಸಿ ಅಭಿಮಾನಿ ಬಳಗ, ದೇವಿಕೆರೆ ಭೂತಪ್ಪ ದೇವಸ್ಥಾನದ ತಂಡ, ಬಾಪೂಜಿ ನಗರದ ತಂಡ, ಇಂದಿರಾನಗರದ ತಂಡ, ಬಚಗಾಂವ್​ನ ಲಾಲಗೌಡ ನಗರದ ತಂಡ ಹಾಗೂ ಲಿಡ್ಕರ್ ಕಾಲನಿ ತಂಡ ತಮ್ಮ ಪ್ರದರ್ಶನ ನೀಡಿವೆ.

ಮಂಗಳವಾರ ಅಂಬಾಗಿರಿ, ಹುಬ್ಬಳ್ಳಿ ರಸ್ತೆ ಕೋಟೆಕೆರೆ ತಂಡ, ಪೋಸ್ಟ್ ಸರ್ಕಲ್ ತಂಡ, ರಾಮನಬೈಲ್ ಹೋಳಿ ಸಮಿತಿ, ಕಸ್ತೂರಬಾನಗರದ ಯಲ್ಲಮ್ಮನ ಓಣಿ ತಂಡ, ಗಣೇಶನಗರದ ಮಾರುತಿ ದೇವಾಲಯ ತಂಡ, ಮರಾಠಿಕೊಪ್ಪದ ಶಿವ ಬಾಯ್್ಸ ಗೆಳೆಯರ ಬಳಗ, ಅಂಜನಾದ್ರಿ ಗೆಳೆಯರ ಬಳಗ, ಕೊಪ್ಪರಗಿ ಕೆಂಡ ಮಹಾಸತಿ ತಂಡ, ಹನುಮಗಿರಿ ತಂಡ, ವಿವೇಕಾನಂದ ನಗರ ಗೆಳೆಯರ ಬಳಗ, ಕಸ್ತೂರಬಾ ನಗರದ ಚೌಡಿಕಟ್ಟೆ ತಂಡ, ಬಾಪೂಜಿನಗರ, ರಾಘವೇಂದ್ರ ಸರ್ಕಲ್, ಹೊಸಪೇಟೆ ರಸ್ತೆ ಏಕದಂತ ಗೆಳೆಯರ ಬಳಗ, ಧುಂಡಶಿನಗರದ ಗೆಳೆಯರ ಬಳಗ ಹಾಗೂ ಮಾರಿಗುಡಿ ಯುವಕ ಮಂಡಳಿ ಬೇಡರ ವೇಷ ಪ್ರದರ್ಶಿಸಲಿವೆ.

ಪ್ರತಿ ವರ್ಷವೂ ಬೇಡರವೇಷದ ಕಲೆಯನ್ನು ಸಾರ್ವಜನಿಕರು ಮೆಚ್ಚುತ್ತಿದ್ದರಾದರೂ ಡಿಜೆ ಶಬ್ದದಿಂದಾಗಿ ಬೇಸರ ವ್ಯಕ್ತಪಡಿಸುತ್ತಿದ್ದರು. ಈ ವರ್ಷ ಪೊಲೀಸರ ಸೂಚನೆಗೆ ಎಲ್ಲ ಬೇಡರ ವೇಷ ತಂಡಗಳು ಒಪ್ಪಿಗೆ ಸೂಚಿಸಿದ್ದು, ಡಿಜೆ ಬದಲಿಗೆ ತಮಟೆಯ ಸದ್ದು, ಸಾರ್ವಜನಿಕರ ಚಪ್ಪಾಳೆ ಕೇಳುತ್ತಿದೆ.