ನಗರದಲ್ಲಿ ಶೀಘ್ರ ಟ್ರಾಫಿಕ್ ಸಿಗ್ನಲ್

ಮಡಿಕೇರಿ: ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಸಂಚಾರ ಪೊಲೀಸರು ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ.

ದಿನೇ ದಿನೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಮತ್ತೊಂದೆಡೆ ಅಗಲಗೊಳ್ಳದ ರಸ್ತೆ, ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.

ಪ್ರಾಕೃತಿಕ ವಿಕೋಪಕ್ಕೂ ಮುನ್ನ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಮಡಿಕೇರಿ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಪ್ರವಾಸೋದ್ಯಮವನ್ನೇ ನಂಬಿರುವ ಮಡಿಕೇರಿ ಕ್ಷಿಪ್ರಗತಿಯಲ್ಲಿ ಸಾಗುತ್ತಿತ್ತು. ವಿಪರೀತ ಮಳೆಯಿಂದ ಜಿಲ್ಲೆ ನಲುಗಿದ ನಂತರ 6 ತಿಂಗಳ ಕಾಲ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖ ಕಂಡಿತ್ತು. ಸ್ಥಳೀಯ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಅಸೋಸಿಯೇಷನ್ ‘ಕೊಡಗು ಸೇಫ್’ ಎಂಬ ಅಭಿಯಾನ ಪ್ರಾರಂಭಿಸಿದ್ದವು. ಜಿಲ್ಲಾಡಳಿತ ಕೂಡ ಕೊಡಗು ಪ್ರವಾಸಿ ಉತ್ಸವ ಆಚರಿಸಿ ‘ಬನ್ನಿ ಕೊಡಗಿಗೆ’ ಎಂಬ ಸಂದೇಶ ರವಾನಿಸಿತು. ನಂತರ ಕೊಂಚ ಚೇತರಿಕೆ ಕಂಡ ಕೊಡಗಿನಲ್ಲಿ ಮತ್ತೆ ಪ್ರವಾಸಿಗರು ಏರಿಕೆ ಕಂಡಿದ್ದಾರೆ.

ಪ್ರವಾಸೋದ್ಯಮ ಸೇರಿದಂತೆ ನಿತ್ಯ ಸಂಚರಿಸುವ ಜನತೆಯಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್‌ಗೆ ಮುಕ್ತಿ ನೀಡಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಚಿಂತನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಸಭೆ ಕರೆದು ವಾಹನಗಳ ಆಗಮನದ ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಪೊಲೀಸ್ ಇಲಾಖೆ ಕೂಡ ಸಮೀಕ್ಷೆ ಕೈಗೊಂಡು ವಾಹನಗಳ ಸಂಖ್ಯೆ ಲೆಕ್ಕ ಹಾಕಿದೆ.

ಟ್ರಾಫಿಕ್ ಜಾಮ್ ಕಿರಿಕಿರಿ:
ಬೇಸಿಗೆ ರಜೆ ಹಿನ್ನೆಲೆ ರಾಜ್ಯ, ದೇಶಗಳಿಂದ ಹೆಚ್ಚಿನ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ನಡುವೆ ಟ್ರಾಫಿಕ್ ಜಾಮ್ ಕೂಡ ಸೃಷ್ಟಿಯಾಗಿದ್ದು ಕಿರಿಕಿರಿ ಅನುಭವಿಸುವಂತಾಗಿದೆ.

ವಾಹನಗಳ ಸಂಖ್ಯೆ ಲೆಕ್ಕ:
ಮಡಿಕೇರಿ ನಗರದ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ಪೊಲೀಸರು ಸಮೀಕ್ಷೆ ನಡೆಸಿದ್ದು, ದಿನವೊಂದಕ್ಕೆ ನಾಲ್ಕು ಚಕ್ರ ವಾಹನಗಳು ಗಂಟೆಗೆ ಸುಮಾರು 500 ಬರುತ್ತಿವೆ. ಇದರೊಂದಿಗೆ 49 ಬಸ್, 60 ಜೀಪ್, 300 ದ್ವಿಚಕ್ರ, 70 ಪಿಕ್‌ಅಪ್, 21 ಟ್ರಕ್, 40 ಟ್ರಾವೆಲರ್‌ಗಳು ಸಂಚಾರ ಮಾಡುತ್ತಿವೆ. ಶುಕ್ರವಾರ, ಶನಿವಾರ, ಭಾನುವಾರ ಹಾಗೂ ಸೋಮವಾರ ಹೆಚ್ಚಿನ ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇದು ಕೇವಲ ಮಡಿಕೇರಿ ನಗರಕ್ಕೆ ಪ್ರವೇಶವಾಗುವ ಸಂಖ್ಯೆಯಾಗಿದ್ದು, ಇದಲ್ಲದೆ ಮಡಿಕೇರಿ ಮೂಲಕ ಮಂಗಳೂರು, ವಿರಾಜಪೇಟೆ, ಕುಶಾಲನಗರ, ಸಿದ್ದಾಪುರಕ್ಕೆ ತೆರಳುವ ವಾಹನಗಳ ಸಂಖ್ಯೆ ಲೆಕ್ಕ ಹಾಕಿದರೆ ಗಂಟೆಗೆ 2 ಸಾವಿರ ವಾಹನಗಳು ಸಂಚರಿಸುತ್ತವೆ ಎಂದು ಹೇಳಲಾಗುತ್ತಿದೆ.

ಇದುವರೆಗಿನ ಸಮೀಕ್ಷೆಯಲ್ಲಿ ದಾಖಲಾದ ಪ್ರಕಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 12ರ ತನಕ ಮತ್ತೆ 2 ಗಂಟೆಯಿಂದ ರಾತ್ರಿ 8ರ ತನಕ ಹೆಚ್ಚಿನ ವಾಹನಗಳು ಸಂಚರಿಸುತ್ತಿವೆ ಎಂದು ತಿಳಿದು ಬಂದಿದೆ. ಜಿಲ್ಲಾಡಳಿತ ಕೂಡ ಶೀಘ್ರವೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಿದ್ದು ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತಾ ಎಂದು ಕಾದು ನೋಡಬೇಕಾಗಿದೆ.

ಸಿಗ್ನಲ್ ಅಳವಡಿಕೆಗೆ ಪರಿಶೀಲನೆ
ಸಮೀಕ್ಷೆ ಆಧಾರದ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳೀಯ ಅಧಿಕಾರಿಗಳು, ಮೈಸೂರು ಕಮೀಷನರ್, ನುರಿತರು ಮಡಿಕೇರಿಗೆ ಆಗಮಿಸಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜನರಲ್ ತಿಮ್ಮಯ್ಯ ವೃತ್ತ (ಟೋಲ್ ಗೇಟ್), ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಸಿಗ್ನಲ್ ಅಳವಡಿಸಬೇಕೆಂದು ಪ್ರಸ್ತಾಪ ಕೂಡ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

ಟ್ರಾಫಿಕ್ ಸಿಗ್ನಲ್
ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸಂಬಂಧಪಟ್ಟವರ ಸಭೆ ಕೂಡ ನಡೆಸಿರುವ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಲು ಸೂಚಿಸಿದ್ದರು. ಅದರಂತೆ ಪೊಲೀಸರು ವಾಹನಗಳ ಸಮೀಕ್ಷೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸರು ಸಮೀಕ್ಷೆ ನಡೆಸಿದ ಸಂದರ್ಭ ಗಂಟೆಗೆ ಸುಮಾರು ಸಾವಿರ ವಾಹನಗಳು ಮಡಿಕೇರಿಗೆ ಲಗ್ಗೆ ಇಡುತ್ತಿವೆ ಎಂದು ತಿಳಿದು ಬಂದಿದೆ.

ಮುಗಿಯದ ಖಾಸಗಿ ಬಸ್ ನಿಲ್ದಾಣ ಸಮಸ್ಯೆ
ನಗರದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರೂ, ಪ್ರಯಾಣಿಕರು ತಂಗುದಾಣವಿಲ್ಲದೆ ಬಸ್‌ಗೆ ಕಾಯುವ ಪರಿಸ್ಥಿತಿ ಇನ್ನೂ ತಪ್ಪಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಕೃತಿ ವಿಕೋಪದ ಪರಿಣಾಮ ನಗರದ ಹಳೇ ಖಾಸಗಿ ಬಸ್ ನಿಲ್ದಾಣ ತೆರವುಗೊಳಿಸಿ ಬಸ್‌ಗಳು ಹೊಸ ಬಸ್ ನಿಲ್ದಾಣ ಸೇರುವಂತೆ ನಗರಸಭೆ ಸೂಚಿಸಿತ್ತು. ಆದರೆ, ಹೊಸ ನಿಲ್ದಾಣದಲ್ಲಿ ಬಸ್ ಸೌಲಭ್ಯ ಕಡಿಮೆಯಿರುವುದರಿಂದ ಇತ್ತ ಪ್ರಯಾಣಿಕರು ಮಾತ್ರ ಹಳೇ ನಿಲ್ದಾಣದ ಜಾಗದಲ್ಲೇ ಸುಡು ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ಇದೂ ಕೂಡ ಒಂದೆಡೆ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ.

ದಿನಕ್ಕೆ 6000 ಪ್ರವಾಸಿಗರು ಭೇಟಿ
ನಗರದ ರಾಜಸೀಟ್ ಉದ್ಯಾನಕ್ಕೆ ದಿನವೊಂದಕ್ಕೆ ಸುಮಾರು 6,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬೇಸಿಗೆ ರಜೆ ಹಾಗೂ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೆಚ್ಚಾಗಿ ತಮಿಳುನಾಡು ಹಾಗೂ ಆಂದ್ರಪ್ರದೇಶ, ಕೇರಳ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

Leave a Reply

Your email address will not be published. Required fields are marked *