ಸಿನಿಮಾ

ನಗರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರ

ಹಾಸನ: ಇಡೀ ರಾಜ್ಯದ ಗಮನ ಸೆಳೆದಿರುವ ಹಾಸನ ವಿಧಾನಸಭಾ ಕ್ಷೇತ್ರ ಚುನಾವಣೆಯ ಮತದಾನಕ್ಕೆ ದಿನಗಣನೆ ಬಾಕಿ ಇದ್ದು, ದಳ, ಕಮಲ, ಕೈ ಅಭ್ಯರ್ಥಿಗಳು ಬುಧವಾರ ಭರ್ಜರಿ ಪ್ರಚಾರ ನಡೆಸಿದರು.
ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಅವರು ತಾಲ್ಲೂಕಿನ ಅತ್ತಿಹಳ್ಳಿ, ಶಂಖ, ಶಂಖದಕೊಪ್ಪಲು, ಆಲದಹಳ್ಳಿ, ಸಾಲಗಾಮೆ, ಕಡಗ ಭಾಗದಲ್ಲಿ ಪ್ರಚಾರ ನಡೆಸಿದರು. ನಗರದಲ್ಲಿಯೂ ಕೂಡ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ವಾರ್ಡ್‌ಗಳಲ್ಲಿ ಮಿಂಚಿನ ಸಂಚಾರ ಮಾಡಿದರು. ಹಾಸನ ಜಿಲ್ಲೆಯ ವಕೀಲರ ಸಂಘದಲ್ಲಿ ಸ್ವರೂಪ್ ಮತ್ತು ಭವಾನಿ ರೇವಣ್ಣ ಅವರು ಮತಯಾಚಿಸಿದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ಹಾಗೂ ಸಂಘದ ಪದಾಧಿಕಾರಿಗಳು, ವಕೀಲರುಗಳು ಉಪಸ್ಥಿತರಿದ್ದರು.
ಇತ್ತ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ, ಶಾಂತಿನಗರ, ರಾಜ್‌ಕುಮಾರ್ ನಗರ, ಪಿ ಆಂಡ್ ಟಿ ಕಾಲೋನಿಯಲ್ಲಿ ಪ್ರಚಾರ ನಡೆಸಿದರು. ‘ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ನೋಡಿ ನನಗೆ ಮತ ನೀಡಿ,’ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಂಖಡರಾದ ಮಣಿಕಂಠ, ತಮ್ಮಯ್ಯ, ವಿಜಯಲಕ್ಷ್ಮೀ, ಗೋಪಿ, ಸತೀಶ್ ಹಾಗೂ ಇತರರು ಇದ್ದರು.
ಬಿಜೆಪಿ ಮತ್ತು ದಳ ಅಭ್ಯರ್ಥಿಗಳ ಅಬ್ಬರದ ಪ್ರಚಾರದ ನಡುವೆ ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೈ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರು ತಾಲೂಕಿನ ಸೀಗೆ, ಮಾದಿಹಳ್ಳಿಯಲ್ಲಿ ಭರ್ಜರಿ ಪ್ರಚಾರ ಮಾಡಿದರು. ಇತ್ತ ನಗರದಲ್ಲಿ ಮುಖಂಡರು ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಮತ ಯಾಚನೆ ಮಾಡಿದರು. ಈ ವೇಳೆ ಪಕ್ಷದ ಮುಖಂಡರಾದ ವಿಷ್ಣು , ರಾಜು, ವೆಂಕಟೇಗೌಡ, ಜಗನ್ನಾಥ್, ಮಲ್ಲೇಶ ಇತರರು ಇದ್ದರು.

Latest Posts

ಲೈಫ್‌ಸ್ಟೈಲ್