ನಗರದಲ್ಲಿ ಬಿಜೆಪಿಯಿಂದ ಸ್ವಚ್ಛತಾ ಹೀ ಸೇವಾ

ರಾಮನಗರ: ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ರಾಮನಗರ ಬಿಜೆಪಿ ಘಟಕದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

25ನೇ ವಾರ್ಡ್​ನ ಹನುಮಂತನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಶ್ರಮದಾನ ನಡೆಸಿದರು.

ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ವರದರಾಜುಗೌಡ ಮಾತನಾಡಿ, ಜಿಲ್ಲಾದ್ಯಕ್ಷ ಎಂ.ರುದ್ರೇಶ್ ಸೂಚನೆಯಂತೆ ಬಿಜೆಪಿ ಕಾರ್ಯಕರ್ತರು ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾ ಆವರಣ ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುತ್ತಿದ್ದು, 15 ದಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅಭಿಯಾನ ನಡೆಸಲಾಗುವುದು ಎಂದರು.

ಭದ್ರತೆ ಇಲ್ಲದ ಶಾಲಾ ಆವರಣ ಕುಡುಕರ ಅಡ್ಡೆಯಾಗಿದ್ದು, ಖಾಲಿ ಬಾಟಲ್ ಸೇರಿ ಈ ಪ್ರದೇಶ ಮಲೀನವಾಗಿದೆ. ಶಾಲೆಯ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಆವರಣದಲ್ಲಿ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಕಲ್ಲು ಬಂಡೆಗಳಿಂದ ಕೂಡಿದೆ. ಈ ಪ್ರದೇಶ ಕಲುಷಿತವಾಗಿದೆ. ಈ ಪ್ರದೇಶವನ್ನು ಸ್ವಂತ ಖರ್ಚಿನಲ್ಲಿ ಸ್ವಚ್ಛಗೊಳಿಸುವುದರ ಜತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ, ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು ಮಾತನಾಡಿ, ಆರೋಗ್ಯ ಸುಧಾರಣೆಯಾಗಬೇಕಾದರೆ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಬೇಕು. ಈ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧಿ ಸ್ವಚ್ಛ ಭಾರತದ ಕನಸು ಕಂಡಿದ್ದರು. ಇದನ್ನು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಸ್ವಚ್ಛಭಾರತ ಅಭಿಯಾನ ಆರಂಭಿಸಿದರು. ಮುಂದುವರಿದ ಭಾಗವಾಗಿ ಸ್ವಚ್ಛತಾ ಹಿ ಸೇವಾ ಜಾರಿಗೆ ತರಲಾಗಿದೆ. ಪ್ರಧಾನಿ ಆಶಯದಂತೆ ಬಿಜೆಪಿ ಕಾರ್ಯಕರ್ತರು ಪರಿಸರ ಶುಚಿತ್ವಕ್ಕೆ ಶ್ರಮಿಸಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ರಮೇಶ್, ಬಿಜೆಪಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಭೂಪತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗೇಶ್, ಸುನೀಲ್, ತಾಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಅನಿಲ್, ಯುವ ಮುಖಂಡರಾದ ರಾಘವೇಂದ್ರ, ಚಂದನ್ ಮೋರೆ, ಕಿರಣ್, ಬಿಜೆಪಿ ಮಂಜು ಇದ್ದರು.