More

  ನಗರದಲ್ಲಿ ಗುಂಡಿಗೆ ಇಬ್ಬರು ಬಲಿ:ವ್ಯವಹಾರದ ವಿಷಯದಲ್ಲಿ ಶೂಟೂಟ್ ಆಗಿರುವ ಶಂಕೆ

  ಹಾಸನ: ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಹಾಡಹಗಲೇ ಗುಂಡಿನ ಸದ್ದು ಕೇಳಿಬಂದಿದ್ದು, ಗುರುವಾರ ಮಧ್ಯಾಹ್ನ ಶೂಟೂಟ್‌ನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಸ್ನೇಹಿತನ ಮೇಲೆ ಗುಂಡು ಹಾರಿಸಿ ಕೊಂದು ಕೊನೆಗೂ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
  ಬೆಂಗಳೂರು ಮೂಲದ ಆಸೀಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ (52) ಮೃತರು. ಇವರಿಬ್ಬರೂ ಸ್ನೇಹಿತರಾಗಿದ್ದು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
  ಆಸಿಫ್ ಮತ್ತು ಶರಾಫತ್ ಅಲಿ ಇಬ್ಬರು ಕಾರಿನಲ್ಲಿ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಹೊಯ್ಸಳ ನಗರ ಬಡಾವಣೆಯಲ್ಲಿರುವ ನಿವೇಶನದ ಜಾಗಕ್ಕೆ ಬಂದಿದ್ದಾರೆ. ಇದೇ ವೇಳೆ ಹಣಕಾಸು ಅಥವಾ ನಿವೇಶನದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಬಳಿಕ ಆಸಿಫ್, ಹಾಸನದ ಶರಫತ್ ಅಲಿಗೆ ರಿವಾಲ್ವಾರ್‌ನಿಂದ ಶೂಟ್ ಮಾಡಿ, ನಂತರ ತಾನೂ ಕಾರಿನೊಳಗೆ ಕೂತು ಶೂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗುಂಡಿನ ಶಬ್ದ ಕೇಳಿದ ಸ್ಥಳೀಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
  ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೀತಾ, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ವೆಂಕಟೇಶ್ ನಾಯ್ಡು, ತಮ್ಮಯ್ಯ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಎಫ್‌ಎಎಸ್‌ಎಲ್ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಗರದ ಕೆಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತ ದೇಹಗಳನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.

  ತನಿಖೆಯಿಂದ ವಾಸ್ತವಾಂಶ ತಿಳಿದುಬರಲಿದೆ ಎಂದ ಎಸ್‌ಪಿ
  ಘಟನೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ. ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿದ್ದ ಕಾರು ಮೈಸೂರು ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ. ಜತೆಗೆ ಹತ್ಯೆಗೆ ಬಳಸಲಾದ ಆಯುದ್ಧ ಕೂಡ ಸ್ಥಳದಲ್ಲಿಯೇ ಲಭ್ಯವಾಗಿದೆ. ಕಾರಿನ ಹೊರಗಿರುವ ಶವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಮಾಹಿತಿ ಇದೆ. ಆದರೆ, ವಾಸ್ತವ ಏನೆಂಬುದು ತನಿಖೆಯ ನಂತರ ತಿಳಿಯಬೇಕಿದೆ ಎಂದು ತಿಳಿಸಿದರು.

  See also  ವಿದ್ಯುತ್ ತಗುಲಿ ಸಾವು

  ಕುಟುಂಬಸ್ಥರ ಆಕ್ರಂದನ:
  ಶರಾಫತ್ ಅಲಿ ಎಂಬುವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಅವರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿರುವ ವ್ಯಕ್ತಿಯನ್ನು ನೋಡಿ ದಿಗ್ಭ್ರಮೆಗೊಂಡರು. ಆಗಷ್ಟೇ ಮನೆಯಿಂದ ಬಂದಿದ್ದ ವ್ಯಕ್ತಿ ಸಾವನ್ನಪ್ಪಿರುವ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲ ಮುಟ್ಟಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಆಗಮಿಸಿದ್ದರಿಂದ ಮೃತದೇಹದ ಬಳಿಗೆ ಯಾರನ್ನೂ ಬಿಡಲಿಲ್ಲ. ಆಗ ಕುಟುಂಬ ಸದಸ್ಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

  ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ
  ಆಸೀಫ್ ಮತ್ತು ಶರಾಫತ್ ಅಲಿ ಇಬ್ಬರು ಸ್ನೇಹಿತರಾಗಿದ್ದು ಹಲವು ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರು ರಿಯಲ್ ಎಸ್ಟೇಟ್ ಮತ್ತು ಶುಂಠಿ ವ್ಯಾಪಾರದಲ್ಲಿಯೂ ಕೂಡ ಪಾಲುದಾರರು ಎಂದು ಹೇಳಲಾಗುತ್ತಿದೆ. ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು. ಗುರುವಾರ ಹಾಸನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿವೇಶನವೊಂದರ ನೋಂದಣಿಯಿತ್ತು. ಆ ವ್ಯವಹಾರದಲ್ಲಿ ಇಬ್ಬರೂ ಪಾಲುದಾರರಾಗಿದ್ದರು. ಬೆಳಗ್ಗೆ ಶರಾಫತ್ ನಿವಾಸದಲ್ಲಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿ ಮನೆಯಿಂದ ಹೊರಟಿದ್ದರು. ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಬೇಕಿದ್ದ ಇಬ್ಬರೂ ನಿವೇಶನದ ಬಳಿ ಹೋಗಿದ್ದು ಏಕೆ? ಅಲ್ಲಿ ತಲೆದೋರಿದ ವೈಮನಸ್ಯ ಏನು ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts