ನಗರಕ್ಕೆ ಇಂದು ಪ್ರಧಾನಿ ಆಗಮನ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.9ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ. ಇದಕ್ಕಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ.

ಚಿತ್ರದುರ್ಗದಿಂದ ವಿಶೇಷ ವಿಮಾನದ ಮೂಲಕ ಸಂಜೆ 4.50ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸುವರು. ಅಲ್ಲಿಂದ ರಸ್ತೆ ಮಾರ್ಗವಾಗಿ ಮಹಾರಾಜ ಕಾಲೇಜು ಮೈದಾನ ತಲುಪುವರು. ಈ ವೇಳೆ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗಿದೆ. ಸಂಜೆ 5.50ಕ್ಕೆ ಕಾರ್ಯಕ್ರಮ ಮುಗಿಸಿ ಮತ್ತೆ ರಸ್ತೆ ಮೂಲಕ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಕೊಯಮತ್ತೂರಿಗೆ ತೆರಳಲಿದ್ದಾರೆ.

ಕಾರ್ಯಕ್ರಮ ಸ್ಥಳದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಗಾಗಿ ಒಂದು ಕಚೇರಿ ಸ್ಥಾಪನೆ ಮಾಡಲಾಗಿದೆ. ಅಲ್ಲದೆ, 7 ಎಸ್‌ಪಿ ದರ್ಜೆಯ ಅಧಿಕಾರಿಗಳು, 22 ಎಸಿಪಿ, 50ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು ಸೇರಿ ಒಂದೂವರೆ ಸಾವಿರದಷ್ಟು ಪೊಲೀಸರ ಭದ್ರಕೋಟೆ ನಿರ್ಮಿಸಲಾಗಿದೆ.

ಪ್ರಧಾನಿಯವರ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ಈಗಾಗಲೇ ಪರಿಶೀಲನೆ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಇಡೀ ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಅಧಿಕಾರಿಗಳು ಸುರಕ್ಷತೆ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ವಿಮಾನ ನಿಲ್ದಾಣದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಭದ್ರತೆಯ ಸ್ವರೂಪ ಕುರಿತು ಸೂಚನೆ ಕೊಟ್ಟಿದ್ದಾರೆ. ಆ ಪ್ರಕಾರ, ಜಿಲ್ಲಾಡಳಿತ ವತಿಯಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಕೈಗೊಳ್ಳುವ ಮಾದರಿಯಲ್ಲೇ ಈಗಲೂ ಪ್ರಧಾನಿಗೆ ಭದ್ರತೆ ಕಲ್ಪಿಸಬೇಕೆಂಬ ನಿಯಮವಿದ್ದು, ಆ ಪ್ರಕಾರ ಭದ್ರತೆಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲೆ?

  • ಗೀತಾ ರಸ್ತೆ, ಕೆ.ಆರ್.ಬುಲೇವಾರ್ಡ್ ರಸ್ತೆಯಲ್ಲಿ ಜಿಪಂ ಕಚೇರಿಯಿಂದ ಏಕಲವ್ಯ ವೃತ್ತದವರೆಗೆ
  • ಮಹಾರಾಜ ಜೂನಿಯರ್ ಕಾಲೇಜು ಮೈದಾನ (ಜೆಎಲ್ಬಿ ರಸ್ತೆ), ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ
  • ಮಹಾರಾಜ ಮತ್ತು ಯುವರಾಜ ಕಾಲೇಜು ಮೈದಾನಗಳು (ಶತಮಾನೋತ್ಸವ ಭವನ ದ್ವಾರದ ಮೂಲಕ)
  • ಸರಸ್ವತಿಪುರಂ ಈಜುಕೊಳದ ರಸ್ತೆ, ಕುಕ್ಕರಹಳ್ಳಿ ರಸ್ತೆ
  • ಬಸ್‌ಗಳು, ಮ್ಯಾಕ್ಸಿಕ್ಯಾಬ್, ಇತರ ವಾಹನಗಳು: ವಿಲೇಜ್ ಹಾಸ್ಟೆಲ್ ಮೈದಾನ, ಮಹಾಬೋಧಿ ಶಾಲಾವರಣ, ಹೋಟೆಲ್ ಏರ್‌ಲೈನ್ಸ್ ಮುಂಭಾಗದ ರಸ್ತೆಯಲ್ಲಿ ನಿಲುಗಡೆ, ನರಸರಾಜ ರಸ್ತೆ, ಎಂ.ಜಿ.ರಸ್ತೆ, ದೊಡ್ಡಕೆರೆ ಮೈದಾನ

ವಾಹನ ಸಂಚಾರ ನಿರ್ಬಂಧ:
ಏ.9ರಂದು ಮಧ್ಯಾಹ್ನ 12ರಿಂದ ಸಂಜೆ 7ರ ವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

  • ನಂಜನಗೂಡು ರಸ್ತೆಯಲ್ಲಿ ಮಂಡಕ್ಕಳ್ಳಿ ವಿಮಾನ ನಿಲ್ದಾಣದಿಂದ ಜೆಎಸ್‌ಎಸ್ ವೃತ್ತದ ಬಳಿ ಇರುವ ಮಂಟಪದ ಜಂಕ್ಷನ್‌ವರೆಗೆ
  • ಚಾಮರಾಜ ಜೋಡಿ ರಸ್ತೆಯಲ್ಲಿ ಜೆಎಸ್‌ಎಸ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ
  • ಜೆಎಲ್ಬಿ ರಸ್ತೆಯಲ್ಲಿ ಆರ್‌ಟಿಒ ವೃತ್ತದಿಂದ – ರಾಮಸ್ವಾಮಿ ವೃತ್ತ- ಮುಡಾ ವೃತ್ತ- ರೋಟರಿ ಜಂಕ್ಷನ್‌ವರೆಗೆ
  • ಬೋಗಾದಿ ರಸ್ತೆಯಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್‌ನಿಂದ ಪೂರ್ವಕ್ಕೆ ಕೌಟಿಲ್ಯ ವೃತ್ತ- ಮುಡಾ ವೃತ್ತ- ಡಿ.ಸುಬ್ಬಯ್ಯ ರಸ್ತೆ ಜಂಕ್ಷನ್‌ವರೆಗೆ
  • ಕೆ.ಆರ್.ಬಿ. ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ಕೌಟಿಲ್ಯ ವೃತ್ತದವರೆಗೆ

Leave a Reply

Your email address will not be published. Required fields are marked *