ನಕಲಿ ಸಮೀಕ್ಷೆಗಳ ಸದ್ದು!

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೆ ದಿನಗಣನೆ ಆರಂಭವಾಗಿರುವುದರ ನಡುವೆ ಚಿಕ್ಕಬಳ್ಳಾಪುರದಲ್ಲಿ ನಾನಾ ಸಮೀಕ್ಷೆಗಳು ಸದ್ದು ಮಾಡುತ್ತಿವೆ.

ಯಾರಿಗೆ ಗೆಲುವು? ಯಾರಿಗೆ ಸೋಲು? ಫಲಿತಾಂಶದ ಮೇಲೆ ಯಾವ ಅಂಶಗಳು ಪ್ರಭಾವ ಬೀರಿವೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಇದರ ನಡುವೆ ಸಮೀಕ್ಷೆಗಳು ನಿಖರ ಫಲಿತಾಂಶ, ಅಭ್ಯರ್ಥಿ ಮುನ್ನಡೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರವು ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ಹೊಸಕೋಟೆ ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಪ್ರತಿ ಕ್ಷೇತ್ರದಲ್ಲೂ ರಾಜಕೀಯ ಪಕ್ಷಗಳು, ಖಾಸಗಿ ವಿವಿಧ ಸಂಸ್ಥೆಗಳು ಜನರ ಅಭಿಪ್ರಾಯ ಸಂಗ್ರಹಿಸಿವೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಸಮೀಕ್ಷೆ ಕೈಗೊಂಡಿವೆ. ಇನ್ನೇನು ಫಲಿತಾಂಶ ಹೊರಬೀಳಲು ಎರಡು-ಮೂರು ದಿನ ಬಾಕಿ ಇರುವಾಗ ಅನಧಿಕೃತವಾಗಿ ಅಭ್ಯರ್ಥಿಗಳ ಸೋಲು-ಗೆಲುವಿನ ಘೊಷಣೆ ಮಾಡುತ್ತಿವೆ.

ನಮ್ಮದೇ ಗೆಲುವು ಎಂಬ ಘೊಷಣೆ:  ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ನಡುವೆ ನೇರ ಹಣಾಹಣಿ ನಡೆದಿದೆ. ಇಬ್ಬರ ವಿಚಾರದಲ್ಲೇ ಬೆಟ್ಟಿಂಗ್ ಜೋರಾಗಿದೆ. ಇದರ ನಡುವೆ ಎರಡೂ ಕಡೆಯಿಂದಲೂ ಪಕ್ಷದ ಕಾರ್ಯಕರ್ತರ ಮೂಲಕ ಬೂತ್​ವುಟ್ಟದಲ್ಲಿನ ಮತ ಗಳಿಕೆ ಮಾಹಿತಿ ಪಡೆಯಲಾಗಿದೆ. ಇದರಿಂದ ಗೆಲುವು ನಮ್ಮದೆ ಎಂಬ ಮಾತನ್ನು ಇಬ್ಬರೂ ಹೇಳಿಕೊಂಡಿದ್ದಾರೆ.

ಮೋದಿ ಅಲೆ, ಕಳೆದ ಲೋಕಸಭೆ ಚುನಾವಣೆಯ ಸೋಲಿನ ಅನುಕಂಪ, ಮೊಯ್ಲಿ ವಿರೋಧಿ ಅಲೆ, ಬಲಿಜ ಮತ್ತು ಒಕ್ಕಲಿಗ ಮತ ಸೆಳೆತ ಅಂಶಗಳನ್ನು ಪರಿಗಣಿಸಿ ಬಿಜೆಪಿ ಕಾರ್ಯಕರ್ತರು ಬಚ್ಚೇಗೌಡ ಗೆಲುವು ಪಕ್ಕಾ ಎನ್ನುತ್ತಿದ್ದಾರೆ. ಮತ್ತೊಂದೆಡೆ ಕ್ಷೇತ್ರದಲ್ಲಿ ಕಮಲದ ಮೇಲೆ ಒಲವೇ ಇಲ್ಲ. ಹಿಂದಿನಿಂದಲೂ ಚುನಾವಣೆಯಲ್ಲಿ ಕೈ ಮೇಲುಗೈ ಸಾಧಿಸಿದ್ದು, ಇದರಿಂದ ಮೊಯ್ಲಿ ಗೆಲುವಿನ ಕುರಿತು ಅನುಮಾನವಿಲ್ಲ ಎನ್ನುವುದು ಕೈ ಕಾರ್ಯಕರ್ತರ ಮಾತು.

ಕಿತ್ತಾಟಕ್ಕೆ ಕಾರಣವಾಗಿರುವ ಸಮೀಕ್ಷೆಗಳು:  ಅನಧಿಕೃತ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ. ಹಲವರು ಗ್ರಾಫಿಕ್ ಡಿಸೈನ್, ಅಭ್ಯರ್ಥಿಗಳ ಭಾವಚಿತ್ರ ಮತ್ತು ಪಕ್ಷದ ಚಿಹ್ನೆ, ಕ್ಷೇತ್ರವಾರು ಮತದಾನ ಮತ್ತು ಅಭ್ಯರ್ಥಿಗಳ ಮತ ಗಳಿಕೆ ಪ್ರಮಾಣದ ಅಂಕಿ ಅಂಶಗಳನ್ನು ವಾಟ್ಸ್​ಆಪ್, ಫೇಸ್​ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಇದಕ್ಕೆ ಬೆಂಬಲಿಗರು ಚುನಾವಣೆ ಫಲಿತಾಂಶ ಬರುವುದಕ್ಕೆ ಮೊದಲೇ ಗೆಲುವಿನ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

ಮತ್ತೊಂದೆಡೆ ಇದನ್ನು ಜೀರ್ಣಿಸಿಕೊಳ್ಳಲಾಗದ ಪ್ರತಿಸ್ಪರ್ಧಿಗಳು ಟೀಕೆಯ ಪ್ರತಿಕ್ರಿಯೆಗಳ ಮೂಲಕ ಕಾಲು ಎಳೆಯುತ್ತಿದ್ದಾರೆ. ಇದರಿಂದ ಪರಸ್ಪರ ಕಿತ್ತಾಟಗಳು ನಡೆಯುತ್ತಿವೆ. ಇದಕ್ಕೆಲ್ಲ ಬ್ರೇಕ್ ಹಾಕಿ ಸಮೀಕ್ಷೆಗಳ ವರದಿಯು ಸತ್ಯಾಸತ್ಯತೆ ತಿಳಿಯಲು ಮೇ 23ರವರೆಗೆ ಕಾದುನೋಡಬೇಕಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿ ಪಕ್ಷದ ಅಭ್ಯರ್ಥಿ ಸೋತಿದ್ದರು. ಈ ಬಾರಿ ಬಿ.ಎನ್.ಬಚ್ಚೇಗೌಡರು ಗೆದ್ದೇ ಗೆಲ್ಲುತ್ತಾರೆ. ಇದನ್ನೇ ಎಲ್ಲರೂ ಹೇಳುತ್ತಿದ್ದಾರೆ.

| ಎ.ಬಾಲಕೃಷ್ಣ, ಬಿಜೆಪಿ ಮುಖಂಡ

ಯಾರು ಏನೇ ಹೇಳಿದರೂ ನಮ್ಮ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲ್ಲುತ್ತಾರೆ. ಇದರಲ್ಲಿ ಸಂಶಯವಿಲ್ಲ.

| ಶ್ರೀನಿವಾಸ್, ಕಾಂಗ್ರೆಸ್ ಮುಖಂಡ

ಸಾಮಾಜಿಕ ಜಾಲತಾಣದಲ್ಲಿ ನಿಖರವಲ್ಲದ ಸಮೀಕ್ಷಾ ವರದಿ ಹಾಕಿ ಅಭ್ಯರ್ಥಿಗಳು ಗೆಲುವಿನ ಬಗ್ಗೆ ಹೇಳಿಕೊಳ್ಳಲಾಗುತ್ತಿದೆ. ಸಮರ್ಥನೆಯಲ್ಲಿ ಹಲವರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತಿದ್ದಾರೆ. ಮಧ್ಯದಲ್ಲಿ ನಾವು ತಲೆನೋವು ಅನುಭವಿಸುತ್ತಿದ್ದೇವೆ.

| ಮಂಜುನಾಥ್, ಕ್ರೀಡಾಪಟು, ಚಿಕ್ಕಬಳ್ಳಾಪುರ

 

Leave a Reply

Your email address will not be published. Required fields are marked *