ನಕಲಿ ರಾಷ್ಟ್ರೀಯವಾದಿ, ಬಹುತ್ವವಾದಿಗಳ ಸಂಘರ್ಷ

ಶಿವಮೊಗ್ಗ: ನಕಲಿ ರಾಷ್ಟ್ರೀಯವಾದಿಗಳು ಮತ್ತು ಭಾರತದ ಬಹುತ್ವವಾದಿಗಳ ನಡುವಿನ ಸಂಘರ್ಷವೇ ಈ ಚುನಾವಣೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಷ್ ಎಂದರೆ ರಾಷ್ಟ್ರೀಯವಾದಿಗಳಾಗುತ್ತಾರೆ. ಆದರೆ ಅವರ ವಿರುದ್ಧ ಮಾತನಾಡಿದರೆ ದೇಶದ್ರೋಹ ಪಟ್ಟ ಕಟ್ಟುತ್ತಾರೆ. ನಕಲಿ ರಾಷ್ಟ್ರೀಯವಾದಿಗಳೆಂದು ಬಿಂಬಿಸುತ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮೋದಿ ಸರ್ಕಾರದ ತಪ್ಪು ಹೆಜ್ಜೆಗಳು, ಕೊಟ್ಟ ಆಶ್ವಾಸನೆಗಳು, ಯುವಕರಿಗೆ ಮಾಡಿದ ದ್ರೋಹ, ಉದ್ಯೋಗ ಕಡಿತ ಇವೆಲ್ಲವೂ ಮತ್ತೆ ಮರುಕಳಿಸಬಾರದು. ಈ ನಕಲಿ ರಾಷ್ಟ್ರವಾದಿಗಳು ಮತ್ತೊಮ್ಮೆ ದೇಶದಲ್ಲಿ ತಲೆ ಎತ್ತಬಾರದು. ಹಾಗಾಗಿಯೇ ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕಾಗಿದೆ ಎಂದರು.

ಸೈನಿಕರನ್ನು ಮುಂದಿಟ್ಟುಕೊಂಡು ಪಾಕಿಸ್ತಾನವನ್ನು ಒಂಟಿ ಮಾಡುತ್ತೇನೆಂದು ಹೇಳುತ್ತಿರುವ ಪ್ರಧಾನಿಗೆ ಇತಿಹಾಸದ ಸತ್ಯ ಗೊತ್ತಿಲ್ಲ. ಇಂದಿರಾಗಾಂಧಿ ಅವರು ಪ್ರಧಾನಿ ಆಗಿದ್ದಾಗ ಮೊದಲ ಬಾರಿ ಪಾಕಿಸ್ತಾನವನ್ನು ಒಂಟಿ ಮಾಡಿದ್ದರು. ಬಾಂಗ್ಲಾದೇಶ ಬೇರ್ಪಡಿಸದಿದ್ದರೆ ಪಾಕಿಸ್ತಾನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿತ್ತು. 5 ಸಾವಿರ ಚದುರ ಕಿಲೋ ಮೀಟರ್ ಅತಿಕ್ರಮಣ ಮಾಡುತ್ತಿತ್ತು. ಅದನ್ನು ತಪ್ಪಿಸಿದ್ದು ಇಂದಿರಾಗಾಂಧಿ ವಿನಾ ಮೋದಿಯಲ್ಲ ಎಂದರು.

ಪಾಕಿಸ್ತಾನ ಟೀಕಿಸುವ ಮೋದಿ ರಾತ್ರೋರಾತ್ರಿ ಅಂದಿನ ಪ್ರಧಾನಿ ನವಾಜ್ ಷರೀಫ್ ಮನೆಗೆ ಹೋಗಿ ಅಪ್ಪಿಕೊಂಡು, ಊಟ ಮಾಡಿ ಬಂದರು. ಇದು ಅವರ ಪಾಕಿಸ್ತಾನದ ಮೇಲಿನ ಭಕ್ತಿ ತೋರುತ್ತದೆ. ಆದರೆ ದಾವೂದ್ ಇಬ್ರಾಹಿಂನನ್ನು ಕರೆತರುತ್ತೇವೆ ಎಂದವರು ಬರಿಗೈಲಿ ಬಂದರು ಎಂದು ವ್ಯಂಗ್ಯವಾಡಿದರು.

ಪ್ರಜಾಪ್ರಭುತ್ವ ಖಂಡಿತ ದಿಕ್ಕು ತಪ್ಪುತ್ತಿದೆ. ನಮ್ಮ ಪಕ್ಷಗಳು ಸೇರಿ ಯುವಕರಿಗೆ ಈ ದೇಶದ ಸತ್ಯಗಳನ್ನು ಅರ್ಥ ಮಾಡಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ದೇಶದ ಕಷ್ಟ ಕಾರ್ಪಣ್ಯದ ಬಗ್ಗೆ ಯುವಕರಿಗೆ ಗೊತ್ತಿಲ್ಲ. ಇದು ನಮ್ಮ ತಪ್ಪು. ಸತ್ಯಗಳನ್ನೆಲ್ಲ ಅರಿವು ಮಾಡಿಸಿದರೆ ಪ್ರಜಾಪ್ರಭುತ್ವದಲ್ಲಿ ನಿರಂಕುಶವಾದ ಹೇಗೆ ಹುಟ್ಟಿಕೊಳ್ಳುತ್ತದೆ ಎಂದು ಮೋದಿಯನ್ನೇ ಉದಾಹರಿಸಿ ಹೇಳಬಹುದು ಎಂದರು.

ಕೇಂದ್ರ ಸರ್ಕಾರ ಅಡಕೆ ಬೆಳೆಗಾರರಿಗೆ ಮಹಾನ್ ವಂಚನೆಯನ್ನೇ ಮಾಡಿದೆ. ಅಮಿತ್ ಷಾ ಅವರು ಅಡಕೆ ಬೆಳೆಗಾರರ ನೆರವಿಗೆ ಬರುತ್ತೇನೆಂದು ಮಾತು ಕೊಟ್ಟಿದ್ದರು. ಆದರೆ ಅವರು ಮಾಡಿದ್ದೇನು. ಅಡಕೆ ವಿಷ ಪದಾರ್ಥ ಎಂದು ಹೇಳಿದರು. ಇದು ಇವರ ರೈತ ನೀತಿ. ಇಂಥವರಿಗೆ ರೈತರು ಮತ ಕೊಡಬೇಕೇ ಎಂದು ಪ್ರಶ್ನಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಯುವ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್, ಜಿ.ಡಿ.ಮಂಜುನಾಥ್, ಕಿರಣ್ ಹಲವರಿದ್ದರು.

ಮೋದಿ ಮಹಾನ್ ಸುಳ್ಳುಗಾರ:ಮೋದಿ ಮಹಾನ್ ಸುಳ್ಳುಗಾರ. 2014ರಲ್ಲಿ ಕೊಟ್ಟ ಆಶ್ವಾಸನೆಗಳು ಇಂದು ಎಲ್ಲಿ ಹೋಗಿವೆ. ಅಭಿವೃದ್ಧಿ ಹರಿಕಾರ ಎಂದು ತನಗೆ ತಾನೇ ಬಣ್ಣಿಸಿಕೊಳ್ಳುವ ಮೋದಿ, ಯೋಜನಾ ಆಯೋಗವನ್ನೇ ರದ್ದು ಮಾಡುವ ಮೂಲಕ ಮರ್ಡರ್ ಮಾಡಿದರು ಎಂದು ಎಚ್.ವಿಶ್ವನಾಥ್ ಟೀಕಿಸಿದರು. ಉದ್ಯೋಗ ಸೃಷ್ಟಿ ಬದಲು ಇರುವ ಉದ್ಯೋಗವನ್ನೇ ಕಸಿದರು. ಜತೆಗೆ ಅನೇಕ ಸರ್ಕಾರಿ ಸಂಸ್ಥೆಗಳನ್ನೇ ಮುಚ್ಚಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಬಿಎಸ್​ಎನ್​ಎಲ್ ಸೇರಿ ಎಲ್ಲವೂ ಮಾಯವಾಗುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಜಿಎಸ್​ಟಿ ಮತ್ತು ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿಯೇ ಬಿದ್ದು ಹೋಯಿತು. ಯುದ್ಧ ವಿಮಾನ, ಭ್ರಷ್ಟಾಚಾರಗಳು ದೇಶದ ಉದ್ದಗಲಕ್ಕೂ ತಲುಪಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡತಗಳು ಕಳುವಾಗಿವೆ ಎಂದು ಹೇಳುವ ಮಟ್ಟಕ್ಕೆ ಬಂದರು. ಇದು ನಾಚಿಕೆಗೇಡಿನ ಸಂಗತಿ ಎಂದರು. ಸತ್ಯವಂತ, ಸುಳ್ಳು ಹೇಳುವುದಿಲ್ಲ ಎನ್ನುವ ಮೋದಿ, ಜಿಯೋ ಕಂಪನಿಗೆ ಮಾರ್ಕೆಟಿಂಗ್ ರಾಯಭಾರಿಯಾಗುತ್ತಾರೆ. ಭಾರತ ದೇಶದಲ್ಲಿ ಮೊಬೈಲ್​ಗಳು ರಿಂಗಣಿಸಲು ರಾಜೀವ್ ಗಾಂಧಿಯವರೇ ಕಾರಣ. ಆದರೆ ಈ ಮೋದಿ ತಾನು ಕ್ರಾಂತಿ ಮಾಡುತ್ತೇನೆಂದು ಹೇಳುತ್ತ ಅಂಬಾನಿಯಂಥವರ ಎದುರಿನಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ ಎಂದರು.

ಮಧು ಬಂಗಾರಪ್ಪಗೆ ಮತ ನೀಡಿ:ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಮನವಿ ಮಾಡಿದ ಅವರು, ಮಾಜಿ ಸಿಎಂ ಎಸ್.ಬಂಗಾರಪ್ಪ ಈ ಜಿಲ್ಲೆ ಮತ್ತು ರಾಜ್ಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಮಧು ಕೂಡ ಶಾಸಕರಾಗಿದ್ದ ಅವಧಿಯಲ್ಲಿ ನೀರಾವರಿ ಸೇರಿ ಅನೇಕ ಯೋಜನೆ ತಂದಿದ್ದಾರೆ. ಸಂಸತ್ ಪ್ರವೇಶಿಸುವ ಮೂಲಕ ಮತ್ತಷ್ಟು ಕೇಂದ್ರದ ಯೋಜನೆಗಳನ್ನು ತರಲು ಉತ್ಸುಕರಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಬಾರಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *