ನಕಲಿ ಔಷಧ ಪತ್ತೆಗೆ ಮೊಬೈಲ್ ಆಪ್

ಬೆಂಗಳೂರು: ನಾವು ಸೇವಿಸುತ್ತಿರುವ ಔಷಧ ಅಸಲಿಯೋ ಅಥವಾ ನಕಲಿಯೋ ಎಂದು ಖಚಿತಪಡಿಸಿಕೊಂಡು ಸೇವಿಸುವ ಕಾಲ ಹತ್ತಿರವಾಗಿದ್ದು, ಸಿಂಗಾಪುರ ಮೂಲದ ಜೋರಿಯಮ್ ಕಂಪನಿ ‘ಅಸಲಿ ಮೆಡಿಸಿನ್’ ಹೆಸರಿನಲ್ಲಿ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದೆ.

ವಿಶ್ವದಲ್ಲಿ ಬಳಕೆ ಯಾಗುತ್ತಿರುವ ಒಟ್ಟು ಔಷಧದಲ್ಲಿ ಶೇ.25 ನಕಲಿ ಹಾಗೂ ಕಳಪೆ ಗುಣ ಮಟ್ಟದ್ದಾಗಿದೆ. ಇದನ್ನು ಸೇವಿಸಿದವರಿಗೆ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಕೆಲ ಫಾರ್ಮಸಿ ಕಂಪನಿಗಳು ಲಾಭದ ಆಸೆಗೆ ಕಳಪೆ ದರ್ಜೆಯ ಔಷಧಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡುತ್ತಿರುವುದು ನಕಲಿ ಔಷಧ ಮಾರಾಟಕ್ಕೆ ಕುಮ್ಮಕ್ಕು ನೀಡಿದಂತಾಗಿದೆ. ಹೀಗಾಗಿ ಔಷಧ ಖರೀದಿಸುವ ವ್ಯಕ್ತಿಗೆ ನೆರವಾಗಲು ಜೋರಿಯಮ್ ಕಂಪನಿ ಪ್ರತ್ಯೇಕ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್ ಇನ್​ಸ್ಟಾಲ್ ಮಾಡಿಕೊಂಡು ಔಷಧದ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿದಲ್ಲಿ ಆ ಔಷಧ ನಕಲಿಯೋ, ಅಸಲಿಯೋ ಎನ್ನುವುದು ತಿಳಿಯುತ್ತದೆ.

ಖಚಿತತೆ ಲಭ್ಯ: ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಸಲಿ ಮೆಡಿಸಿನ್ ಡಾಟ್ ಕಾಮ್ ಸಹಸಂಸ್ಥಾಪಕ ರವೀಂದ್ರ ಆಪ್ ಬಗ್ಗೆ ಮಾಹಿತಿ ನೀಡಿದರು.

ಬ್ಲಾಕ್​ಚೈನ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದ್ದು, ಬಳಕೆದಾರರಿಗೆ ಔಷಧ ಬಗ್ಗೆ ಖಚಿತತೆ ಸಿಗಲಿದೆ.

ಅಷ್ಟೇ ಅಲ್ಲ, ಔಷಧಕ್ಕೆ ಏನೆಲ್ಲ ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ದೊರೆಯಲಿದೆ. ಈ ಮಾಹಿತಿಯನ್ನು ಡೌನ್​ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಶೀಘ್ರದಲ್ಲಿಯೇ ಆಪ್ ಅನಾವರಣಕ್ಕೆ ಚಿಂತನೆ ನಡೆಸಿದ್ದೇವೆ ಎಂದು ರವೀಂದ್ರ ಮಾಹಿತಿ ನೀಡಿದರು.

ಗಣ್ಯರ ಉಪಸ್ಥಿತಿ: ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ.ಎ. ರವೀಂದ್ರ, ಎಂ.ಎನ್. ವಿದ್ಯಾಶಂಕರ್, ಉದ್ಯಮಿ ಎಚ್.ಪಿ. ಖಿಂಚನ್, ಬ್ರಿಕ್ಸ್ ಒಕ್ಕೂಟದ ಬಿಜಿನೆಸ್ ವಿಭಾಗದ ಮುಖ್ಯಸ್ಥ ಎಂ.ಕೆ.ಎಚ್.ಎಚ್. ಜಿಲಾನಿ, ಉದ್ಯಮಿ ಬಿ.ಎಚ್. ಲೋಕೇಶ್, ಅಸಲಿ ಮೆಡಿಸಿನ್ ಸಿಇಓ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಸಾವಯವ ಎಂದು ಹೇಳಿಕೊಳ್ಳುವ ಆಹಾರದಲ್ಲೂ ಕಲಬೆರಕೆಯಾಗು ತ್ತಿದೆ. ವಿಷಯುಕ್ತ ಆಹಾರ ಸೇವೆಯಿಂದ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಅನಾರೋಗ್ಯಕ್ಕೆ ತುತ್ತಾದವರ ಪಾಲಿಗೆ ಸಂಜೀವಿನಿಯಾಗಬೇಕಾಗದ ಔಷಧದಲ್ಲೂ ನಕಲಿ ಹಾವಳಿ ಹೆಚ್ಚುತ್ತಿರುವುದು ವಿಪರ್ಯಾಸ. ಇದೀಗ ಅಸಲಿ ಔಷಧ ಪತ್ತೆಗೆ ಆಪ್ ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ.

| ಡಾ.ಎ. ರವೀಂದ್ರ, ನಿವೃತ್ತ ಐಎಎಸ್ ಅಧಿಕಾರಿ

Leave a Reply

Your email address will not be published. Required fields are marked *