More

  ನಂಬಿದವರ ಸಂಕಷ್ಟ ಪರಿಹರಿಸಿದ ದಾನಮ್ಮದೇವಿ

  ಸಿಂದಗಿ: ಬಾಲ್ಯದಿಂದ ಗುರು-ಲಿಂಗ-ಜಂಗಮರನ್ನು ಅನುಸರಿಸಿದ ಲಿಂಗಮ್ಮ, ತನ್ನ ನಿರ್ಮಲ ಮತ್ತು ಶುದ್ಧ ಜೀವನ ಸಂಸ್ಕಾರದಿಂದ ಬೆಳೆದು, ದಾನ ಪ್ರವೃತ್ತಿಯಿಂದ ಶರಣರ ಅನುಭಾವದೊಂದಿಗೆ ಬೆರೆತು ವರದಾನಿ ದಾನಮ್ಮಳಾಗಿ ನಾಡಿಗೆ ಬೆಳಕು ಚೆಲ್ಲಿದ ತಾಯಿ ದಾನಮ್ಮದೇವಿ ಎಂದು ಕಾಶಿಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

  ಗುರುವಾರ ಪಟ್ಟಣದ ಸಾರಂಗಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ದಾನಮ್ಮದೇವಿ ಹಾಗೂ ಸೋಮನಾಥೇಶ್ವರ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

  ದಾನಮ್ಮದೇವಿ ಹನ್ನೆರಡನೆ ಶತಮಾನದಲ್ಲಿ ತಮ್ಮ ದೈವಿಶಕ್ತಿಯ ಪವಾಡಗಳಿಂದ ಹೆಸರಾಗಿದ್ದಳು. ಗುರು-ಜಂಗಮ ಭಕ್ತಿಯಿಂದ ಬೆಳೆದು ನಂಬಿ ಬಂದವರ ಕಷ್ಟಗಳನ್ನು ಪರಿಹರಿಸುತ್ತ, ಶರಣಕುಲ ಶ್ರೇಷ್ಠತೆಯನ್ನು ಮೆರೆದಿದ್ದ ದಾನಮ್ಮ ಇಂದು ಸಿಂದಗಿಯಲ್ಲಿ ನೆಲೆಯೂರಿದ್ದಾಳೆ. ಎಲ್ಲರಿಗೂ ದಾನಮ್ಮದೇವಿಯ ಆಶೀರ್ವಾದ ಪ್ರಾಪ್ತವಾಗಲಿ ಎಂದರು.

  ಶ್ರೀಶೈಲದ ವೀರಶೈವ ಗುರುಕುಲ ವೇದ ಸಂಸ್ಕೃತ ಪಾಠಶಾಲೆಯ ಚಂದ್ರಶೇಖರ ಶಿವಾಚಾರ್ಯರು, ಮಲ್ಲಿಕಾರ್ಜುನ ಸ್ವಾಮಿ ಶಿಷ್ಯವೃಂದ ಹಾಗೂ ಶಿವಶಂಕರ ಶಾಸ್ತ್ರಿ, ದಿವಾಕರ ಸ್ವಾಮಿ, ವಿಜಯಕುಮಾರ ಸ್ವಾಮಿ, ಮಂಜುನಾಥ ಸ್ವಾಮಿ, ರವಿಶಂಕರ ಸ್ವಾಮಿ, ಭರತಕುಮಾರ ಸ್ವಾಮೀಜಿ ವೈದಿಕ ಪರಂಪರೆಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

  ಶಹಾಪುರದ ಸೂಗರೇಶ್ವರ ಶಿವಾಚಾರ್ಯರು, ಗುಡ್ಡಾಪುರದ ಗುರುಪಾದೇಶ್ವರ ಶಿವಾಚಾರ್ಯರು, ಕೊಣ್ಣೂರಿನ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ಧಲಿಂಗ ಶಿವಾಚಾರ್ಯರು, ಕಲಕೇರಿ ಗದ್ದಿಮಠದ ಮಡಿವಾಳೇಶ್ವರ ಶಿವಾಚಾರ್ಯರು, ಸಿಂದಗಿ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು ಮತ್ತಿತರ ಸ್ವಾಮೀಜಿಗಳಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts