ನಂಬಿಕೆ ಉಳಿಸಿಕೊಂಡಿದೆ ಕೇಂದ್ರ ಸರ್ಕಾರ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ 5 ವರ್ಷದ ಆಡಳಿತಾವಧಿಯಲ್ಲಿ ಮತದಾರರ ನಂಬಿಕೆ ಉಳಿಸಿಕೊಂಡಿದ್ದು, ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ, ಚಿತ್ರನಟಿ ಶ್ರುತಿ ಹೇಳಿದರು.

ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಭಾನುವಾರ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.

ಮಹಿಳೆಯರಿಗಾಗಿ ಮೋದಿ ನೇತೃತ್ವದ ಸರ್ಕಾರ ನೀಡಿರುವ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು. ತಲಾಕ್​ನಿಂದ ಬಹುತೇಕ ಮುಸ್ಲಿಂ ಮಹಿಳೆಯರು ಬದುಕನ್ನು ಕಳೆದುಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ತಲಾಕ್ ವಿರುದ್ಧ ನಿಂತವರು ವಿಶ್ವದಲ್ಲಿ ಮೊದಲ ಪ್ರಧಾನಿ ಮೋದಿ ಎಂದರು.

ಚುನಾವಣೆ ಬಂದಾಗ ಮಾತ್ರ ಎತ್ತಿನಹೊಳೆ ನೀರು ಬರುತ್ತದೆ ಎಂದು ಜನರನ್ನು ಯಾಮಾರಿಸುವ ಕ್ಷೇತ್ರದ ಸಂಸದರ ತಂತ್ರ ಈ ಬಾರಿ ಫಲಿಸುವುದಿಲ್ಲ. ಜನ ಮೋದಿಯನ್ನು ಪ್ರಧಾನಿ ಮಾಡುವ ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಚ್ಚೇಗೌಡ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಮಾತನಾಡಿ,ವಿಶ್ವದರ್ಜೆಯಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ ಮೋದಿಯನ್ನು ಮತ್ತೊಮ್ಮ ಪ್ರಧಾನಿಯನ್ನಾಗಿ ಮಾಡಲು ಜನ ಸಂಕಲ್ಪ ಮಾಡಬೇಕು. ಮುದ್ರಾ ಯೋಜನೆ ಮೂಲಕ 7.25 ಲಕ್ಷ ಕೋಟಿ ರೂ. ಸಾಲವನ್ನು ಶೇ.70ಕ್ಕೂ ಮಹಿಳೆಯರು ಪಡೆದಿದ್ದಾರೆ ಎಂದರು.

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕಿರಣಮಹೇಶ್ವರಿ ಮಾತನಾಡಿ, ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯೊಂದು ಸಾಕು ಪ್ರಧಾನಿ ಮೋದಿ ಅವರಿಗೆ ಮಹಿಳೆಯರ ಬಗ್ಗೆ ಇರುವ ಕಾಳಜಿ ಎಷ್ಟು ಎಂಬುದನ್ನು ಸಾರುತ್ತದೆ ಎಂದರು.

ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಮುಖಂಡ ನಾರಾಯಣಶರ್ಮ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸವಿತಾ ಅಶೋಕ್, ರಾಷ್ಟ್ರೀಯ ಪರಿಷತ್ ಸದಸ್ಯ ಜೋ.ನಾ.ಮಲ್ಲಿಕಾರ್ಜುನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ನಗರಾಧ್ಯಕ್ಷೆ ಗಿರಿಜಾ, ಜಿಲ್ಲಾ ಮುಖಂಡೆ ಕಮಲಾ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಇದ್ದರು.