ಚಿತ್ರದುರ್ಗ: ಆಧುನಿಕ ಕಾಲದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸ್ವಾರ್ಥವಿಲ್ಲದ ನಿಲುವು, ಕಷ್ಟಪಡದೆ ಸಿಗುವ ಹಣ, ನಂಬಿಕೆರಹಿತ ಸಂಬಂಧ ಎಂದೆಂದಿಗೂ ಜೀವನದಲ್ಲಿ ತೃಪ್ತಿ ಕೊಡಲಾರವು ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.
ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ಪುರಾತನ ಈಶ್ವರ ಮತ್ತು ಬಸವಣ್ಣ ದೇಗುಲ ಲೋಕಾರ್ಪಣೆ ಅಂಗವಾಗಿ ಭಾನುವಾರ ನಡೆದ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.
ಭಾರತ ಧಾರ್ಮಿಕವಾದ ಪುಣ್ಯಭೂಮಿ. ಇಲ್ಲಿ ಹಲವು ಧರ್ಮಗಳು, ಸಂಪ್ರದಾಯಗಳಿವೆ. ಅವೆಲ್ಲದರ ಗುರಿ ಮಾನವ ಜೀವಾತ್ಮರನ್ನು ಉದ್ಧರಿಸುವುದಾಗಿದೆ. ಆದ್ದರಿಂದ ಜೀವನದಲ್ಲಿ ಧರ್ಮ, ದೇವರು, ಗುರುವನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ನೀಡಿದರು.
ಮಾನವ ಕಲ್ಯಾಣಕ್ಕೆ ಭಗವಂತನ ಕೊಡುಗೆ ಅಪಾರ. ನಂಬಿ ನಡೆವ ಭಕ್ತರಿಗೆ ಕಲ್ಲು ಕೂಡ ದೇವರಾಗಿ ಕಾಣುತ್ತದೆ. ಇಲ್ಲದವರಿಗೆ ಪರಮಾತ್ಮ ಪ್ರತ್ಯಕ್ಷನಾದರೂ ಆತನ ಮಹಿಮೆ ಅರಿಯಲಾರ. ಶ್ರೀ ರೇಣುಕಾಚಾರ್ಯರು ಜೀವನೋದ್ಧಾರಕ್ಕೆ ಹತ್ತು ಅಮೂಲ್ಯವಾದ ಧರ್ಮ ಸೂತ್ರ ಬೋಧಿಸಿದ್ದಾರೆ. ಅವುಗಳನ್ನು ಪಾಲಿಸಿದರೆ, ಬದುಕು ಸಾರ್ಥಕವಾಗಲಿದೆ ಎಂದರು.
ಬದುಕನ್ನು ಬದಲಿಸುವ, ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯ ನಮ್ಮಲ್ಲಿಯೇ ಇದೆ. ಸಾಧನೆಯಿಂದ ಸಂತೋಷ ಸಿಗದಿದ್ದರೂ ಜೀವನಕ್ಕೆ ದಾರಿಯಾಗಲಿದೆ ಎಂದು ತಿಳಿಸಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಶ್ರೀ ಉದ್ಘಾಟಿಸಿ ಮಾತನಾಡಿ, ಧರ್ಮದ ದಿಕ್ಸೂಚಿ ಬಾಳಿಗೆ ಬಲವನ್ನು ತಂದು ಕೊಡುತ್ತದೆ. ಜೀವನದ ಆದರ್ಶ ಮೌಲ್ಯಗಳನ್ನು ಪರಿಪಾಲಿಸುವುದರಿಂದ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ ಎಂದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀ ಮಾತನಾಡಿ, ಉಪಕಾರ ಸ್ಮರಿಸಿ, ಅಪಕಾರ ಮರೆತು ಬಾಳುವುದರಿಂದ ಮನಸ್ಸಿನ ನೆಮ್ಮದಿಗೆ ಕಾರಣವಾಗಲಿದೆ ಎಂದರು.
ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಶ್ರೀ ಮಾತನಾಡಿ, ವೀರಶೈವ ಧರ್ಮ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಜೀವನದ ಉನ್ನತಿಗೆ ಅಡಿಪಾಯವಾಗಿವೆ. ಸತ್ಯ, ಶುದ್ಧ, ಧರ್ಮ ಮಾರ್ಗದಲ್ಲಿ ನಡೆದರೆ, ಜೀವನ ಪಾವನವಾಗಲಿದೆ ಎಂದು ಸಲಹೆ ನೀಡಿದರು.
ಸಮಾರಂಭಕ್ಕೂ ಮುನ್ನ ರಂಭಾಪುರಿ ಶ್ರೀಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕುಂಭ ಹೊತ್ತು, ಆರತಿ ಹಿಡಿದ ನೂರಾರು ಮಹಿಳೆಯರು, ವಾದ್ಯ ಕಲಾವಿದರು ಗಮನ ಸೆಳೆದರು.
ಮಾಜಿ ಶಾಸಕ ರಮೇಶ್, ದೇವಸ್ಥಾನ ಸಮಿತಿ ಮುಖ್ಯಸ್ಥ ರಾಜಣ್ಣ, ಮುಖಂಡರಾದ ಸಿದ್ದೇಶ್, ಶಿವಕುಮಾರ, ಹೊಸದುರ್ಗ ಲಿಂಗಮೂರ್ತಿ, ಸ್ವಾಮಿ, ವಿಠಲಾಪುರ ಗಂಗಾಧರ ಹಿರೇಮಠ ಇತರರಿದ್ದರು.