ನಂದಿ ಗಿರಿಧಾಮ ಠಾಣೆಗಿಲ್ಲ ಕಟ್ಟಡ

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ನಂದಿ ಗ್ರಾಮದಲ್ಲಿನ ನಂದಿ ಗಿರಿಧಾಮ ಪೊಲೀಸ್ ಠಾಣೆಯನ್ನು ನೆಲಸಮಗೊಳಿಸಿ ಒಂದೂವರೆ ವರ್ಷ ಕಳೆದರೂ ಇದುವರೆಗೆ ಹೊಸ ಕಟ್ಟಡ ನಿರ್ವಿುಸಿಲ್ಲ. ಭೋಗನಂದೀಶ್ವರಸ್ವಾಮಿ ದೇವಾಲಯ ಮುಂಭಾಗ ಎರಡೂವರೆ ಎಕರೆ ಜಾಗದಲ್ಲಿದ್ದ ಠಾಣೆಯ ಹಳೇ ಕಟ್ಟಡ ಮತ್ತು ಪೊಲೀಸ್ ವಸತಿ ಗೃಹವನ್ನು ಜನರ ವಿರೋಧದ ನಡುವೆಯೂ ಸ್ಮಾರಕ ಸಂರಕ್ಷಣೆ ಮತ್ತು ಯಾತ್ರಿ ನಿವಾಸ ಸಂಕೀರ್ಣ ನಿರ್ವಣಕ್ಕಾಗಿ ನೆಲಸಮಗೊಳಿಸಲಾಯಿತು. ಆದರೆ, ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಇದುವರೆಗೂ ಆರಂಭವಾಗದಿರುವುದಕ್ಕೆ ಸುತ್ತಲಿನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪ್ರಸ್ತುತ ಠಾಣೆಯು ರಾಷ್ಟ್ರೀಯ ಹೆದ್ದಾರಿ 7ರ ಚದಲಪುರ ಕ್ರಾಸ್ ಬಳಿಯಿರುವ ರೇಷ್ಮೆ ಇಲಾಖೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಇದು ಬಹುತೇಕ ಗ್ರಾಮಗಳಿಗೆ ದೂರ ಇರುವುದು ಸಮಸ್ಯೆಗೆ ಕಾರಣ.

ಠಾಣೆ ವ್ಯಾಪ್ತಿಗೆ 63 ಗ್ರಾಮ: ಠಾಣೆ ವ್ಯಾಪ್ತಿಯಲ್ಲಿ ಸುಲ್ತಾನ್ ಪೇಟೆ, ಅಂಗಟ್ಟ, ಗಾಂಧಿಪುರ, ದೇವಶೆಟ್ಟಿಹಳ್ಳಿ, ಯಲುವಹಳ್ಳಿ, ನಕ್ಕಲಹಳ್ಳಿ, ತಾಳಹಳ್ಳಿ, ಕಣಿತಹಳ್ಳಿ, ಸಿಂಗಾಟ ಕದಿರೇನಹಳ್ಳಿ, ಕುಪ್ಪಳ್ಳಿ, ಚದಲಪುರ, ಕೊಳವನಹಳ್ಳಿ, ಶ್ರೀರಾಮಪುರ ಸೇರಿ 63 ಗ್ರಾಮಗಳು ಒಳಪಟ್ಟಿವೆ. ಪ್ರವಾಸಿ ತಾಣ ಮತ್ತು ಬೆಟ್ಟಗುಡ್ಡ, ಕಾಡಿನಂಚಿನಲ್ಲಿರುವುದರಿಂದ ಗ್ರಾಮಗಳಲ್ಲಿ ಅಪರಾಧ ಮತ್ತು ಅಪಘಾತ ಪ್ರಕರಣಗಳು ಹೆಚ್ಚಿಗೆ ಸಂಭವಿಸುತ್ತಿವೆ. ಇದಕ್ಕೆ ಗ್ರಾಮದಲ್ಲಿ ತ್ವರಿತವಾಗಿ ಹೊಸ ಕಟ್ಟಡ ನಿರ್ವಿುಸಲು ಗ್ರಾಮಸ್ಥರು ಒತ್ತಡ ಹೇರುತ್ತಿದ್ದಾರೆ. ಆದರೆ, ಅಧಿಕಾರಿಗಳ ಸಬೂಬುಗಳಲ್ಲೇ ಕಾಲಹರಣವಾಗುತ್ತಿದೆ.

ಎರಡು ಎಕರೆ ಜಾಗ ನಿಗದಿ: ನಂದಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಬಳಿ ಹೊಸ ಠಾಣೆಗೆ ಎರಡು ಎಕರೆ ಜಾಗ ಗುರುತಿಸಲಾಗಿದೆ. ಇನ್ನೂ ಪೊಲೀಸ್ ಠಾಣೆಯ ಹಳೇ ಕಟ್ಟಡವನ್ನು ತೆರವುಗೊಳಿಸಿರುವ ಪ್ರವಾಸೋದ್ಯಮ ಇಲಾಖೆಯು ಹೊಸ ಕಟ್ಟಡ ನಿರ್ವಿುಸಿಕೊಡಬೇಕಾಗಿದೆ.

ದೂರವಾಣಿ ದುರಸ್ತಿ, ಏನ್ ಕೇಳ್ತಿಸಿಲ್ಲ: ಠಾಣೆಯ ದೂರವಾಣಿ ಸದಾ ದುರಸ್ತಿಯಲ್ಲಿರುತ್ತದೆ. ಜನರು ಅಪರಾಧ/ಅವಘಡಗಳ ಕುರಿತು ಗಮನಸೆಳೆಯಲು ಕರೆ ಮಾಡಿದಾಗ ಏನ್ ಕೇಳಿಸ್ತಿಲ್ಲ ಎಂಬ ಉತ್ತರವೇ ಸಿಗುತ್ತದೆ. ಇಲ್ಲವೇ, ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಜನರು ಬೇಸರಗೊಂಡು ಸುಮ್ಮನಾಗುತ್ತಿದ್ದಾರೆ. ಇನ್ನು ಖುದ್ದು ತೆರಳಿದಾಗ ಅಧಿಕಾರಿಗಳು ಹೊರ ಹೋದ ಕಾರಣದಲ್ಲಿ ಗಂಟೆಗಟ್ಟಲೇ ಕಾಯಿಸಲಾಗುತ್ತದೆ. ಇದರಿಂದ ಠಾಣೆ ಮತ್ತು ಜನರ ನಡುವಿನ ಬಾಂಧವ್ಯ ನಿಧಾನವಾಗಿ ಹದಗೆಡುತ್ತಿದೆ ಎಂಬ ಮಾತು ಕೇಳಿಬಂದಿದೆ.

ದೂರವಾಣಿ ದುರಸ್ತಿ ಕುರಿತು ಬಿಎಸ್​ಎನ್​ಎಲ್ ಕಚೇರಿಗೆ ದೂರು ಕೊಟ್ಟು ಸಾಕಾಗಿದೆ. ಮಳೆ ಬಂದರೆ ಕೆಲಸ ಮಾಡೋದಿಲ್ಲ. ಇನ್ನೂ ಹಲವು ಬಾರಿ ಮಾತನಾಡೋದೇ ಕೇಳಿಸಲ್ಲ.

| ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ, ನಂದಿ ಗಿರಿಧಾಮ ಠಾಣೆ

ನಂದಿ ಗಿರಿಧಾಮ ಹೊಸ ಠಾಣೆಗೆ ಎರಡು ಎಕರೆ ಜಾಗ ಗುರುತಿಸಲಾಗಿದೆ. ತ್ವರಿತವಾಗಿ ಕಟ್ಟಡ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು.

| ಕಾರ್ತಿಕ್​ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ