ನಂದಿ ಗಿರಿಧಾಮಕ್ಕೆ ಆಧುನಿಕ ಸ್ಪರ್ಶ

ಚಿಕ್ಕಬಳ್ಳಾಪುರ: ಪ್ರವಾಸಿಗರ ಗಮನ ಸೆಳೆಯಲು ನಂದಿ ಗಿರಿಧಾಮಕ್ಕೆ ಹೊಸದಾಗಿ ವಿವಿಧ ಸವಲತ್ತು ಕಲ್ಪಿಸುವುದರ ಜತೆಗೆ ಇಲ್ಲಿನ ಐತಿಹಾಸಿಕ ನೆಹರು ನಿಲಯಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ.

ದೇಶ ವಿದೇಶಗಳಿಂದ ಪ್ರವಾಸಿಗರು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನೈಸರ್ಗಿಕ ಆರೋಗ್ಯಧಾಮ ನಂದಿ ಬೆಟ್ಟದಲ್ಲಿ ಈ ಹಿಂದೆ ಕಾಡುತ್ತಿದ್ದ ಹಲವು ಸಮಸ್ಯೆಗಳಿಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದರು. ಇದಕ್ಕೆ ತೋಟಗಾರಿಕೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಪ್ರವಾಸಿ ತಾಣದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿದೆ.

ನೆಹರು ನಿಲಯ ನವೀಕರಣ: ಇಲ್ಲಿನ ನೆಹರು ನಿಲಯ ಸಮೀಪದ ವಿವಿಐಪಿ ಅತಿಥಿಗೃಹ 4, ಸಾಮಾನ್ಯ ಪ್ರವಾಸಿ ಕೊಠಡಿ 14 ಮತ್ತು ಗಾಜಿನ ಬಳಿಯಿರುವ 6 ವಿಐಪಿ ಕುಟೀರಗಳನ್ನು 2 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಛಾವಣಿಗೆ ಚುರ್ಕಿ, ವಾಟರ್ ಪ್ರೂಫಿಂಗ್, ಪ್ಲಂಬಿಂಗ್, ವಿದ್ಯುದ್ಧೀಕರಣವನ್ನು ನಿಲಯದ ಭವ್ಯತೆಗೆ ತಕ್ಕಂತೆ ಕೈಗೊಳ್ಳಲಾಗಿದೆ. 1986ರಲ್ಲಿ ನಡೆದ ಸಾರ್ಕ್ ಸಮ್ಮೇಳನ ಅವಧಿಯಲ್ಲಿ ಮುಖ್ಯ ಲಾಂಚ್, ಕಾನ್ಪರೆನ್ಸ್ ಹಾಲ್ ಇತ್ಯಾದಿ ಸ್ಥಳಗಳಲ್ಲಿ ಹಾಕಿದ್ದ ತೇಗ ಮತ್ತು ಬಿರಡೆ ಮರದ ಬೃಹತ್ ತೊಲೆಗಳನ್ನು ಶ್ವೇತ ವರ್ಣಗೊಳಿಸಲಾಗಿತ್ತು. ಇದಕ್ಕೆಲ್ಲ ಪಾಲಿಷ್ ಮಾಡಲಾಗಿದೆ. ಹೊಸ ವಿನ್ಯಾಸದ ಕುರ್ಚಿ ಮತ್ತು ಸೋಫಾಗಳನ್ನು ಹಾಕಲಾಗಿದೆ. ಐತಿಹಾಸಿಕ ಚಿತ್ರಗಳು, ಸಸ್ಯ ಸಂಪತ್ತು ಮತ್ತು ಪಕ್ಷಿ ಸಂಕುಲದ ಚಿತ್ರಗಳನ್ನು ಅಳವಡಿಸಲಾಗಿದೆ.

ಗಿರಿಧಾಮದ ಹಸಿರೀಕರಣ, ಸ್ವಚ್ಛತೆ: ಹಲವು ವರ್ಷಗಳಿಂದಲೂ ಗಿರಿಧಾಮದಲ್ಲಿ ತುಂಬಿ ತುಳುಕಾಡುತ್ತಿದ್ದ ತ್ಯಾಜ್ಯದಲ್ಲಿ ಶೇ.40 ತೆರವಾಗಿದ್ದು, 6 ಟನ್ ಒಣ ತ್ಯಾಜ್ಯ ಸಂಗ್ರಹವಾಗಿದೆ. ವೈಜ್ಞಾನಿಕ ವಿಲೇವಾರಿಗೆ ಬಯೋ ವೇಸ್ಟ್ ಡಿ ಕಂಪೊಸರ್ ಕಮ್ ವರ್ವಿು ಕಾಪೋಸ್ಟ್ ಯುನಿಟ್ ಸ್ಥಾಪಿಸಲಾಗಿದೆ. ಪ್ರತಿ ತಿಂಗಳು ಕನಿಷ್ಠ ಎರಡು ಟನ್ ಒಣ ತ್ಯಾಜ್ಯ ಬಳಸಲಾಗುತ್ತದೆ. ಮತ್ತೊಂದೆಡೆ ಹೊಸದಾಗಿ 60 ಕಡೆ ಡಸ್ಟ್ ಬಿನ್ ಮತ್ತು ಪ್ರವಾಸಿಗರ ಮಾಹಿತಿಗಾಗಿ 82 ನಾಮಫಲಕ, ರಕ್ಷಣೆ ದೃಷ್ಟಿಯಿಂದ 33 ಸಿಸಿ ಕ್ಯಾಮರಾ ಹಾಕಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ಒಂದು ಕಿ.ಮೀ. ಕಾಲ್ದಾರಿ, ಏಳು ಗೋಕಟ್ಟೆ ನಿರ್ಮಾಣ ಮತ್ತು ರ್ಪಾಂಗ್ ವ್ಯವಸ್ಥೆ ಉನ್ನತೀಕರಣ, ಎಕೋ ವಾಹನ ವ್ಯವಸ್ಥೆ, 7 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಆಟದ ಮೈದಾನ ಅಭಿವೃದ್ಧಿ ಕೈಗೊಳ್ಳಲಾಗಿದೆ.

ಉದ್ದೇಶಿತ ಯೋಜನೆಗಳು: ಗಿರಿಧಾಮದಲ್ಲಿ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ನೆಹರು ನಿಲಯದಿಂದ ಸಾಗುವ ಎಂಟು ಪಾದಚಾರಿ ಮಾರ್ಗಗಳ ಇಕ್ಕೆಲಗಳಲ್ಲಿ 40 ಮಳೆ ನೀರು ಕೊಯ್ಲು ಇಂಗು ಗುಂಡಿಗಳ ನಿರ್ವಣ, ರ್ಪಾಂಗ್ ಸ್ಥಳದಲ್ಲಿ ಹೊಸ ಉದ್ಯಾನ ಅಭಿವೃದ್ಧಿ, ಪಾತಾಳ ಗಂಗೆ ಹೊಂಡದ ಹೂಳೆತ್ತಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವಿಕೆ, 6.10 ಕೋಟಿ ರೂ. ವೆಚ್ಚದಲ್ಲಿ ವಾಹನ ನಿಲ್ದಾಣದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇಲ್ಲಿ ಬಿದ್ದಿರುವ ನೀಲಗಿರಿ, ಪೆನ್ಸಿಲ್ ಸಿಡಾರ್ ಮರಗಳಿಂದ ಕಲಾಕೃತಿಗಳನ್ನು ರಚಿಸಿ, ಲಾಲ್ ಬಾಗ್ ಮಾದರಿ ಮ್ಯುಸಿಯಂ ಸ್ಥಾಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *