ನಂಜು ನುಂಗಿದ ನಂಜುಂಡ!

| ಗಣೇಶ್ ಕಾಸರಗೋಡು

ಜನವರಿ 27ರಂದು ಕೆನಡಾದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ನಿಜವಾಗಿಯೂ ಕನ್ನಡ ಚಿತ್ರರಂಗದ ಅವಜ್ಞೆಗೆ ಒಳಗಾಗಿದ್ದರಾ? ಈ ಕಾರಣಕ್ಕಾಗಿಯೇ ಬದುಕು ಪೂರ್ತಿ ಕಾಡಿದ ಡಿಪ್ರೆಷನ್​ಗೊಳಗಾಗಿ ಹೃದಯಸ್ತಂಭನವಾಯಿತಾ? ಹೌದೆನ್ನುವುದಕ್ಕೆ ಕಾರಣಗಳಿವೆ!

ತೀರಾ ಇತ್ತೀಚೆಗೆ ತಾವು ಅಭಿನಯಿಸಿದ ಚಿತ್ರವೊಂದರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆತ್ಮೀಯ ಪತ್ರಕರ್ತ ಮಿತ್ರರ ಜತೆ ಇದನ್ನು ಹೇಳಿಕೊಂಡು ಜೋರಾಗಿಯೇ ಕಿರುಚಾಡಿದ್ದರು. ಇತ್ತೀಚೆಗೆ ನಿರ್ದೇಶಿಸಿದ ‘ಕೆಂಪಮ್ಮನ ಕೋರ್ಟ್ ಕೇಸ್’ ಚಿತ್ರಕ್ಕೆ ಉದ್ಯಮದಿಂದ ಮತ್ತು ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಬಾರದ ಕಾರಣಕ್ಕಾಗಿ ಚಂದ್ರು ಹತಾಶರಾಗಿದ್ದರು. ಈ ನೋವನ್ನು ಅಂದು ತೋಡಿಕೊಳ್ಳುವ ಭರದಲ್ಲಿ ಆಡಿದ ಮಾತುಗಳು ತುಟಿ ಮೀರಿದ್ದಾಗಿತ್ತು! ‘ನಾವೆಲ್ಲ ಯಾಕಾಗಿ, ಯಾರಿಗಾಗಿ ಸಿನಿಮಾ ಮಾಡಬೇಕು? ಸಾಲಸೋಲ ಮಾಡಿ ಚಿತ್ರಿಸಿದ ಸಿನಿಮಾವನ್ನು ಸರಿಯಾಗಿ ವಿತರಿಸುವವರಿಲ್ಲ. ವಿತರಿಸಿದರೂ ನೋಡುವವರಿಲ್ಲ. ನಮ್ಮ ಶ್ರಮವೆಲ್ಲ ವೇಸ್ಟ್. ಯಾರ ಜತೆ ನಾವು ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳೋಣ? ಯಾರು ನಮಗೆ ಸಹಾಯಮಾಡುತ್ತಾರೆ?’-ಎಂದೆಲ್ಲ ಪ್ರಶ್ನಿಸುತ್ತ ತೀರ ಕೆಟ್ಟ ಪದಗಳಲ್ಲಿ ಉದ್ಯಮದ ಮಂದಿಯನ್ನು ಮತ್ತು ಪ್ರೇಕ್ಷಕರನ್ನು ಬೈದಾಡುತ್ತಿದ್ದರು! ಕೊನೆಗೆ ಅದೇ ಹಿರಿಯ ಪತ್ರಕರ್ತರು ಚಂದ್ರುವನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ಇದಾಗಿ ತಿಂಗಳಾಗಿಲ್ಲ ಚಂದ್ರಶೇಖರ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ! ಇದೇ ಚಂದ್ರಶೇಖರ್​ಗೆ ಹೃದಯಾಘಾತವಾಗುವಂಥ ಮತ್ತೊಂದು ಕಹಿ ಘಟನೆ 1984ರಲ್ಲೇ ನಡೆದಿತ್ತು. 1969ರಲ್ಲಿ ಬಾಲನಟರಾಗಿ ‘ನಮ್ಮ ಮಕ್ಕಳು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚಂದ್ರುವಿಗೆ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿದ್ದು ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಈ ಚಿತ್ರವೇ ಕೊನೆ, ನಂತರದ ದಿನಗಳಲ್ಲಿ ಚಂದ್ರಶೇಖರ್​ಗೆ ಅಂಥ ಯಾವ ಅವಕಾಶವೂ ಸಿಗಲಿಲ್ಲ. ಒಲ್ಲದ ಪಾತ್ರಗಳಲ್ಲೇ ಕಾಣಿಸಿಕೊಂಡ ಚಂದ್ರುವಿಗೆ ಆ ದಿನಗಳಲ್ಲೇ ಚಿತ್ರರಂಗದ ಬಗ್ಗೆ ಭ್ರಮನಿರಸನವಾಗಿತ್ತು. ಆದರೂ ಅನಿವಾರ್ಯವಾಗಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತ ಬಂದ ಚಂದ್ರು 1984ರಲ್ಲಿ ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಸೇರಿಕೊಂಡರು. ಮದುವೆಯ ನಂತರವೂ ಅದೃಷ್ಟ ಬದಲಾಗಲಿಲ್ಲ. ಚಿತ್ರರಂಗದಲ್ಲಿ ಇವರದ್ದು ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ದಂಥ ದುಃಸ್ಥಿತಿ. ಈ ಕಾರಣಕ್ಕಾಗಿ ಡಿಪ್ರೆಷನ್​ಗೊಳಗಾದ ಚಂದ್ರು ಭಾರತ ತೊರೆಯಲು ಆಗಲೇ ನಿರ್ಧರಿಸಿದ್ದರು. ಮದುವೆಯ ನಂತರ ಪತ್ನಿ ಜತೆ ಕೆನಡಾಕ್ಕೆ ಹಾರಿದರು. ಭಾರತ ತೊರೆಯುವ ಮೊದಲು ಆಪ್ತ ಬಂಧುಗಳಿಗೆ ತಮ್ಮ ಮನದಾಳವನ್ನು 34 ವರ್ಷಗಳ ಹಿಂದೆಯೇ ತಿಳಿಸಿದ್ದರು; ‘ಈ ಚಿತ್ರರಂಗ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಪುಟ್ಟಣ್ಣ ಮತ್ತೆ ಅವಕಾಶ ನೀಡಲಿಲ್ಲ. ಚಪ್ರಾಸಿ ಪಾತ್ರ ಮಾಡಿ ಮಾಡಿ ಸಾಕಾಗಿದೆ. ಯಾಕೆ ಹಾಗೆ? ನಂಗೆ ಅಭಿನಯ ಬರೋದಿಲ್ವಾ? ಹಾಗಿದ್ದರೆ ನಾನು ಕೆನಡಾಕ್ಕೆ ಹೋಗುತ್ತೇನೆ. ಅಲ್ಲೇ ಅಭಿನಯ ಕಲಿತು ಬರುತ್ತೇನೆ! ಆಗಲಾದರೂ ಈ ಮಂದಿ ನನ್ನನ್ನು ಆದರಿಸುತ್ತಾರೋ ನೋಡೋಣ. ಅತ್ಯಂತ ಖೇದದೊಂದಿಗೆ ಭಾರತ ಬಿಡುತ್ತಿದ್ದೇನೆ. ಹೆಂಡತಿ ಕೆನಡಾದಲ್ಲಿ ಉದ್ಯೋಗದಲ್ಲಿದ್ದಾಳೆ. ಅವಳ ಜತೆ ಒಂದಷ್ಟು ವರ್ಷವಿದ್ದು ಬರುತ್ತೇನೆ. ಅವಕಾಶಗಳೇ ಇಲ್ಲದ ಈ ದಿನಗಳಲ್ಲಿ ಭಾರತದಲ್ಲಿದ್ದುಕೊಂಡು ನಾನೇನು ಮಾಡಲಿ?’- ಎಂದು ಅಲವತ್ತುಕೊಂಡಿದ್ದ ಚಂದ್ರು ಕೆನಡಾಕ್ಕೆ ಹೋಗುವ ಕಾರಣವನ್ನು ಹೇಳಿಕೊಂಡಿದ್ದರು.

ಹಾಗೆ ಕೆನಡಾಕ್ಕೆ ಹೋದ ಅವರು ಸರಿಯಾಗಿ 20 ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ‘ಪೂರ್ವಾಪರ’ ಎಂಬ ಚಿತ್ರ ನಿರ್ವಿುಸಿ, ನಿರ್ದೇಶಿಸಿದ್ದರು. ನಟನೆಯ ಅವಕಾಶವನ್ನು ಮರೆತೇ ಬಿಟ್ಟಿದ್ದ ಚಂದ್ರು ತಾವೇ 60 ಲಕ್ಷ ಖರ್ಚು ಮಾಡಿ ಈ ಚಿತ್ರವನ್ನು ನಿರ್ವಿುಸಿದ್ದರು. ಇದು ನಡೆದದ್ದು 2004ರಲ್ಲಿ. ಆಗ ಇವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಒಂದು ರೀತಿಯಲ್ಲಿ ಚಿತ್ರರಂಗದ ವಿರುದ್ಧ ಸೇಡು ತೀರಿಸಿಕೊಂಡ ವಿಲಕ್ಷಣ ತೃಪ್ತಿ ಅವರಿಗಿತ್ತು.

ಆಗ ಮತ್ತದೇ ಆಪ್ತ ಬಂಧುಗಳ ಜತೆ ತಮ್ಮ ಆಂತರ್ಯವನ್ನು ಹೀಗೆ ತೆರೆದಿಟ್ಟಿದ್ದರು; ‘ಇದು ನನ್ನ ಕನಸು. ಯಾವ ಘಳಿಗೆಯಲ್ಲಿ ಎಂ. ಕೆ. ಇಂದಿರಾ ಅವರ ‘ಪೂರ್ವಾಪರ’ ಕಾದಂಬರಿಯನ್ನು ಓದಿದೆನೋ ಆ ಘಳಿಗೆಯಲ್ಲೇ ಇದನ್ನು ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೆ. ಯಾವತ್ತೂ ಭಾರತದಲ್ಲಿ ಹೆತ್ತವರನ್ನು ಬಿಟ್ಟು ಕೆನಡಾಕ್ಕೆ ಹೋದೆನೋ ಈ ನಿರ್ಧಾರ ಅಚಲವಾಯಿತು. ಏಕೆಂದರೆ ಇದರ ಸಬ್ಜೆಕ್ಟ್​ಗೂ ನನಗೂ ಸಂಬಂಧವಿತ್ತು! ಆ ಹೊತ್ತಿನಲ್ಲಿ ‘ತ್ರಿಭಂಗ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ ಅನುಭವವಿತ್ತು. ಈ ಕಿರುಚಿತ್ರವನ್ನು ನೋಡಿದ ತಕ್ಷಣವೇ ಇಂದಿರಾ ಅವರು ಒಪ್ಪಿಕೊಂಡು ಬಿಟ್ಟರು. ಇನ್ನು ನಟಿ ಗೀತಾ ನ್ಯೂಜರ್ಸಿಯಲ್ಲೇ ಇದ್ದರು. ಕಥೆಯ ಸತ್ವ ಕಂಡು ಅವರೂ ಒಪ್ಪಿಕೊಂಡರು. ಜಯಂತ ಕಾಯ್ಕಿಣಿ ಸಂಭಾಷಣೆ ಬರೆದರು. ಹಿರಿಯ ಛಾಯಾಗ್ರಾಹಕ ಜಿ. ಎಸ್. ಭಾಸ್ಕರ್ ಕ್ಯಾಮರಾ ಕೆಲಸಕ್ಕೆ ಒಪ್ಪಿಕೊಂಡರು. ಎಲ್ಲವೂ ಹೂವೆತ್ತಿದಷ್ಟು ಸಲೀಸಾಯಿತು. ಆದರೆ ಹಣ ಹೊಂದಿಸೋ ಕೆಲಸ ಮಾತ್ರ ಆ ದೇವರಿಗೇ ಪ್ರೀತಿ…!’ – ಎಂದು ಹೇಳಿ ತಮ್ಮ ಆತಂಕವನ್ನು ತೋಡಿಕೊಂಡಿದ್ದ ಚಂದ್ರು, ಆ ಪ್ರಯತ್ನದಲ್ಲಿ ಆರ್ಥಿಕವಾಗಿ ಸೋತು ಸುಣ್ಣವಾಗಿದ್ದರು.

ದುರಂತವೆಂದರೆ, ‘ಪೂರ್ವಾಪರ’ ಚಿತ್ರ ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲೂ ಎರಡೇ ಎರಡು ಪ್ರದರ್ಶನವನ್ನು ಕಾಣಲಿಲ್ಲ! ಇದರಿಂದ ಆಘಾತಕ್ಕೊಳಗಾದ ಚಂದ್ರು ಮತ್ತೆ ಭಾರತ ಬಿಟ್ಟು ಕೆನಡಾಕ್ಕೆ ವಾಪಾ ಸ್ಸಾಗುವ ನಿರ್ಧಾರಕ್ಕೆ ಬಂದರೋ ಗೊತ್ತಿಲ್ಲ. ಈ ನಡುವೆಯೂ ಹೋಗಿ ಬಂದು ಮಾಡುತ್ತಿದ್ದ ಅವರು ಮತ್ತೆ ಭಾರತಕ್ಕೆ ಹಿಂದಿರುಗಿ ಸೆಟ್ಲ್ ಆದರು. ನಿರ್ದೇಶನದ ಚಟವೇ ಅಂಥದ್ದು. ಮತ್ತೊಂದು ಚಿತ್ರಕ್ಕೆ ಸ್ಕೆಚ್ ಹಾಕಿ ‘ಕೆಂಪಮ್ಮನ ಕೋರ್ಟ್ ಕೇಸ್’ ಚಿತ್ರವನ್ನು ತಾವೇ ನಿರ್ವಿುಸಿ, ನಿರ್ದೇಶಿಸಿದರು. ಆದರೆ ಈ ಚಿತ್ರವೂ ಕೈಕೊಟ್ಟಿತು. ಮತ್ತೆ ಲಕ್ಷಾಂತರ ಹಣ ಕೈಬಿಟ್ಟಿತು. ಎಲ್ಲಿಂದ ತಂದರೋ ಗೊತ್ತಿಲ್ಲ, ಪ್ರಾಯಶಃ ಹಣ ಕೊಟ್ಟವರೇ ಎದೆ ಮೇಲೆ ಕೂತು ವಸೂಲಿಗಿಳಿದರೋ ಗೊತ್ತಿಲ್ಲ. ಅಂತೂ ತೀರಾ ಡಿಪ್ರೆಸ್ ಆಗಿದ್ದರು. ನಟನೆಯ ಪುಟ್ಟ ಅವಕಾಶಗಳಲ್ಲೇ ಬದುಕನ್ನು ಹೇಗೋ ಮ್ಯಾನೇಜ್ ಮಾಡಿಕೊಂಡು ಬಂದ ಚಂದ್ರುವಿಗೆ ಮಾನಸಿಕ ವಿಶ್ರಾಂತಿ ಬೇಕಾಗಿತ್ತು. ‘ಹದಿನೈದು ದಿನಗಳ ಕಾಲ ಕೆನಡಾಕ್ಕೆ ಹೋಗಿ ಬರುತ್ತೇನೆ..’ – ಎಂದು ಸ್ನೇಹಿತರಲ್ಲಿ ಹೇಳಿ ಹೋದ ಅವರು ಮತ್ತೆ ಹಿಂದಿರುಗಲಿಲ್ಲ. ಹೇಳಿಕೊಳ್ಳಲಾಗದ ನೋವು ಜೀವ ಹಿಂಡುತ್ತಿತ್ತೇನೋ? ಹೃದಯ ತಡೆದುಕೊಳ್ಳಲಿಲ್ಲ. ವಿಶ್ರಾಂತಿಗೆಂದು ಕೆನಡಾಕ್ಕೆ ಹೋದ ಚಂದ್ರು ಚಿರವಿಶ್ರಾಂತಿಗೆ ನಡೆದು ಬಿಟ್ಟರು….

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *