ಧೂಳಿನ ಅಲರ್ಜಿ ದೂರ ಮಾಡಿಕೊಳ್ಳಿ

| ಡಾ. ವೆಂಕಟ್ರಮಣ ಹೆಗಡೆ

ಶುದ್ಧವಾಗಿ ತೊಳೆದ ಹತ್ತು ತುಳಸಿ ಎಲೆಗಳು, ಒಂದು ಲವಂಗ, ಒಂದು ದೊಡ್ಡಪತ್ರೆ ಎಲೆ ಸೇರಿಸಿ ಜಜ್ಜಿಕೊಳ್ಳಬೇಕು. ಈ ಪೇಸ್ಟ್​ಗೆ ನಿಂಬೆಹಣ್ಣಿನ ರಸ, ಅರ್ಧಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಕಲಸಿ ಬೇಕಾದಲ್ಲಿ ನೀರು ಸೇರಿಸಿ ಕುಡಿಯುತ್ತ ಬಂದಲ್ಲಿ ಧೂಳಿನ ಅಲರ್ಜಿ ಕಡಿಮೆಯಾಗುತ್ತ ಬರುತ್ತದೆ.30-60 ದಿನಗಳ ಕಾಲ ಈ ಮಿಶ್ರಣವನ್ನು ಒಂದೆರಡು ಗಂಟೆಗಳಿಗೊಮ್ಮೆ ಎರಡೆರಡು ಚಮಚದಷ್ಟು ತೆಗೆದುಕೊಳ್ಳಬೇಕು.

ನಮ್ಮ ದೇಹಕ್ಕೆ ಝಿಂಕ್ ಹೆಚ್ಚಿರುವ ಆಹಾರ ನೀಡಬೇಕು. ನಟ್ಸ್​ಗಳು (ಬಾದಾಮಿ, ಗೋಡಂಬಿ, ಪಿಸ್ತಾ, ಶೇಂಗಾ) ಒಳ್ಳೆಯದು. ಇದರಲ್ಲಿ ಮೆಗ್ನೇಷಿಯಂ ಸಹ ಇದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಒಂದು ಸೇಬುವನ್ನು ತಿನ್ನುವುದರಿಂದ ಅಲರ್ಜಿಕ್ ಅಸ್ತಮಾವನ್ನು ಕಡಿಮೆ ಮಾಡಬಹುದು. ವಿಟಮಿನ್ ಸಿ ಹೆಚ್ಚಿರುವ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಸೀಬೆಹಣ್ಣು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಿ ವಿಟಮಿನ್​ಹೊಂದಿದೆ. ನೆಲ್ಲಿಕಾಯಿ, ನಿಂಬೆಹಣ್ಣು ಸಹ ಸಹಕಾರಿ.

ಕೆಂಪಕ್ಕಿಯ ಅನ್ನವನ್ನು ಊಟ ಮಾಡುವುದರಿಂದ, ಗಂಜಿ ಮಾಡಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್​ಗಳು ದೊರೆಯುತ್ತದೆ. ಒಣದ್ರಾಕ್ಷಿ ಹಾಗೂ ಖರ್ಜೂರ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶ ದೊರೆಯುತ್ತದೆ. ದಾಲ್ಚಿನ್ನಿ, ಲವಂಗ, ಅರಿಶಿಣವನ್ನು ಆಹಾರ ಪದಾರ್ಥಗಳಲ್ಲಿ ಪದೇಪದೆ ಬಳಸಬೇಕು.

ಕುದಿಯುತ್ತಿರುವ ನೀರಿಗೆ ನಾಲ್ಕು ಕಾಳುಮೆಣಸು, ಒಂದು ಏಲಕ್ಕಿಯನ್ನು ಜಜ್ಜಿ ಪುಡಿ ಮಾಡಿ ಹಾಕಬೇಕು. ಇದಕ್ಕೆ ಒಂದಿಂಚು ಶುಂಠಿಯನ್ನು ಜಜ್ಜಿ ಹಾಕಬೇಕು. ಮಾಡುತ್ತಿರುವ ಕಷಾಯಕ್ಕೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ, ಎರಡು ಚಿಟಿಕೆ ಅರಿಶಿಣ ಹಾಕಿ 5 ನಿಮಿಷ ಮಂದ ಉರಿಯಲ್ಲಿ ಕುದಿಸಿ 10 ಪುದಿನ ಎಲೆಗಳನ್ನು ಹಾಕಬೇಕು. ಪುನಃ ಚೆನ್ನಾಗಿ ಕುದಿಸಿ ಇಳಿಸಿ ಸೋಸಿ ಕುಡಿಯಬೇಕು. ಕುದಿಯುತ್ತಿರುವಾಗ ಕಷಾಯದಿಂದ ಬರುತ್ತಿರುವ ಹಬೆಯನ್ನು ತೆಗೆದುಕೊಳ್ಳುವುದೂ ಒಳ್ಳೆಯದು. ಇದರಿಂದ ಅಲರ್ಜಿ ಕಡಿಮೆಯಾಗುವುದು.

ಒಂದು ಚಮಚ ಸೋಂಪುಕಾಳು (ಬಡೆಸೊಪ್ಪು), ಕಾಲು ಚಮಚ ಮೆಂತ್ಯಕಾಳು, ಅರ್ಧ ಚಮಚ ನೆಲ್ಲಿಚೆಟ್ಟು ಸೇರಿಸಿ ಸ್ವಲ್ಪ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ಸ್ವಲ್ಪ ನೀರನ್ನು ಬಿಸಿಗಿರಿಸಿಕೊಂಡು ಅದಕ್ಕೆ ಒಂದು ಚಮಚ ಮಾಡಿಟ್ಟುಕೊಂಡ ಪುಡಿ ಹಾಕಿ ಕುದಿಸಿ ಇಳಿಸಿ ಸೋಸಬೇಕು. ಸ್ವಲ್ಪ ತಣ್ಣಗಾದ ಮೇಲೆ ಕಾಲು ಚಮಚ ಜೇನುತುಪ್ಪ ಹಾಕಿ ಕುಡಿಯಬೇಕು. ಇದರಿಂದಲೂ ಧೂಳಿನ ಅಲರ್ಜಿ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *