ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಸೊರಬ: ತಾಲೂಕು ಧಾರ್ವಿುಕ ಕ್ಷೇತ್ರಗಳಲ್ಲಿ ಮುಂದಿದ್ದು, ಪ್ರತಿ ಗ್ರಾಮಗಳಲ್ಲಿಯೂ ದೇವಸ್ಥಾನ, ಗುಡಿ ಗೋಪುರಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಧಾರ್ವಿುಕ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಈ ದಿಸೆಯಲ್ಲಿ ಇಲ್ಲಿ ತ್ರಿಮೂರ್ತಿಗಳ ದೇವಸ್ಥಾನ ಉದ್ಘಾಟನೆಯಾಗಿರುವುದು ಶ್ಲಾಘನೀಯ ಎಂದು ಜಡೆ ಸಂಸ್ಥಾನಮಠ ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಜೆ.ಮರೂರು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಿರ್ವಿುಸಿರುವ ಬ್ರಹ್ಮ ವಿಷ್ಣು ಮಹೇಶ್ವರ ಹಾಗೂ ಪರಿವಾರ ದೇವತೆಗಳಾದ ಮಹಾಗಣಪತಿ, ಗಾಯತ್ರಿ ಹಾಗೂ ನವಗ್ರಹಗಳ ಪ್ರಾಣಪತ್ರಿಷ್ಠಾಪನೆ ಕಾರ್ಯಕ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಸೃಷ್ಟಿ, ಪಾಲನೆ ಮತ್ತು ಲಯಕ್ಕೆ ತ್ರಿಮೂರ್ತಿಗಳು ಕಾರಣ. ಈ ಸ್ಥಳ ಭಕ್ತಿ ಮತ್ತು ಶಕ್ತಿಯ ಪವಿತ್ರ ಸ್ಥಳ. ದೈವಶಕ್ತಿ ಮತ್ತು ಭಕ್ತಿ ಒಂದಾದಾಗ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದರು.

ಸೊರಬ ಕಾನುಕೇರಿ ಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಒಂದೇ ದೇವಸ್ಥಾನದ ಆವರಣದಲ್ಲಿ ಎಲ್ಲ ದೇವರ ದರ್ಶನದಿಂದ ಅನುಭವತಿ ಉಂಟಾಗುತ್ತದೆ. ಏನನ್ನು ನಿರೀಕ್ಷೆ ಮಾಡದೆ ಕೊಡುವುದೇ ಪರಮಪ್ರೇಮ. ಯಾರನ್ನೂ ದ್ವೇಷಿಸದೆ, ನಿರ್ಮಲ ಭಕ್ತಿಯಿಂದ, ಶುದ್ಧ ಆಚಾರ ವಿಚಾರಗಳಿಂದ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಚೊರಟಿ ಬಸವೇಶ್ವರ ದೇವಸ್ಥಾನದ ಅರ್ಚಕ ಫಕೀರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪೂಜಾರ್ ನಾಗಪ್ಪ, ದತ್ತಾತ್ರೇಯ ಭಟ್ ಬನವಾಸಿ ಇವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ಶಿವಪ್ಪ ನಡಹಳ್ಳಿ, ಸುರೇಶ್, ತಿಪ್ಪಣ್ಣ, ರಾಜಣ್ಣ ನಡಹಳ್ಳಿ ಇತರರಿದ್ದರು.