ಧಾರ್ವಿುಕ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ

ಕೋಲಾರ: ಶ್ರೀಲಂಕಾದಲ್ಲಿ ಉಗ್ರರು ಬಾಂಬ್ ಸ್ಪೋಟಿಸಿ ಕರ್ನಾಟಕದ 8 ಜನರು ಸೇರಿ 200ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಎಸ್ಪಿ ಡಾ.ರೋಹಿಣಿ ಕಟೋಚ್ ಸೆಪಟ್ ವಿವಿಧ ಸ್ಥರಗಳ ಮುಖಂಡರೊಂದಿಗೆ ಸಭೆ ನಡೆಸಿ ಉಗ್ರ ಕೃತ್ಯಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿ, ಜಿಲ್ಲೆಯಲ್ಲಿ ಪುರಾಣ ಪ್ರಸಿದ್ಧ ದೇವಾಲಯ, ಮಸೀದಿ, ದರ್ಗಾ, ಚರ್ಚ್ ಹಾಗೂ ಪ್ರವಾಸಿ ತಾಣಗಳಿದ್ದು, ಶ್ರೀಲಂಕಾ ರೀತಿಯಲ್ಲಿ ದುರ್ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎಚ್ಚರ ವಹಿಸಲಾಗಿದೆ ಎಂದರು.

ಚರ್ಚ್, ಮಸೀದಿ, ಮದರಸಾಗಳು ಹಾಗೂ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಅಲ್ಲಿನ ಸಿಬ್ಬಂದಿಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕು ಎಂದು ತಾಕೀತು ಮಾಡಿದರು.

ಸಭೆ, ಸಮಾರಂಭಗಳಿಗೆ ಆಗಮಿಸುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಮತ್ತು ಲಗೇಜ್​ಗಳನ್ನು ಕಡ್ಡಾಯ ತಪಾಸಣೆ ಮಾಡಬೇಕು, ಈ ಸ್ಥಳಗಳಿಗೆ ಭೇಟಿ ನೀಡುವ ವ್ಯಕ್ತಿಗಳ ಹೆಸರು. ವಿಳಾಸ, ಪರಿಚಯ ಪತ್ರ, ಮೊಬೈಲ್ ನಂಬರ್ ಸಂಗ್ರಹಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಹೋಟೆಲ್, ಡಾಬಾ, ಲಾಡ್ಜ್​ಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿ ಸಿಸಿ ಕ್ಯಾಮರಾ ಮೇಲೆ ನಿಗಾ ವಹಿಸಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣ, ಕಲ್ಯಾಣ ಮಂಟಪ ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಸಾರ್ವಜನಿಕರು ಉಗ್ರ ಚಟುವಟಿಕೆೆ ನಿಗ್ರಹಿಸಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕೋರಿದರು.

ಎಎಸ್ಪಿ ಜಾಹ್ನವಿ, ಡಿವೈಎಸ್ಪಿ ಬಿ.ಕೆ. ಉಮೇಶ್ ಸೇರಿದಂತೆ ವಿವಿಧ ಸಮುದಾಯದ ಧಾರ್ವಿುಕ ಮುಖಂಡರು ಹಾಜರಿದ್ದರು.