ಧಾರ್ವಿುಕತೆಯ ನೆಲೆವೀಡಲ್ಲಿ ಕಲೆ-ಸಂಸ್ಕೃತಿಯ ಸೊಬಗು

ಕಲೆ, ಸಾಹಿತ್ಯಕ್ಕೆ ಹೆಸರಾಗಿರುವುದು ಉತ್ತರ ಕನ್ನಡ. ಸದಾ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. 2018 ಇದಕ್ಕೆ ಹೊರತಾಗಿಲ್ಲ. ಇಡೀ ವರ್ಷ ನಡೆದ ಪ್ರಮುಖ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಿರು ಹಿನ್ನೋಟ ಇಲ್ಲಿದೆ.


ಕಾರವಾರ/ಶಿರಸಿ ಇಲ್ಲಿನ ಧಾರ್ವಿುಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದ ನಂಟಿದೆ. ವರ್ಷದ 365 ದಿನವೂ ಜಿಲ್ಲೆಯಲ್ಲಿ ಒಂದಲ್ಲ ಒಂದು ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಉರುಳಿದ ವರ್ಷವೂ ಅದಕ್ಕೆ ಹೊರತಾಗಿಲ್ಲ. 50ಕ್ಕೂ ಹೆಚ್ಚು ಪುಸ್ತಕಗಳು ಲೋಕಾರ್ಪಣೆಗೊಂಡವು. ಕಲಾವಿದರು ಕುಣಿದು, ದಣಿದು ಜನರನ್ನು ನಗಿಸಿ, ನಲಿಸಿದರು.

ಕರಾವಳಿ ಉತ್ಸವ ಡಿಸೆಂಬರ್ 8ರಿಂದ 10 ರವರೆಗೆ ಕರಾವಳಿ ಉತ್ಸವ ಯಶಸ್ವಿಯಾಗಿ ನಡೆಯಿತು. ಬಾಲಿವುಡ್ ಹಾಡುಗಾರ ಅಭಿಜಿತ್ ಸಾವಂತ, ಹಾಡುಗಾರ್ತಿ ನೀತಿ ಮೋಹನ್ ಅವರು ಕರಾವಳಿಯ ಗಾನ ಪ್ರಿಯರನ್ನು ಹುಚ್ಚೆದ್ದು ಕುಣಿಸಿದರು. ಸ್ಯಾಂಡಲ್​ವುಡ್ ಗಾಯಕ ರಘೂ ದೀಕ್ಷಿತ್ ತಂಡದ ಸಂಗೀತ ಸಂಜೆ ಕಾರ್ಯಕ್ರಮ, ಮುಂಬೈನ ಎಂಜೆ -5, ಅಂಕೋಲಾದ ಸಂಕೇತ ಗಾಂವಕರ್ ಗ್ರುಪ್​ನ ಕಾರ್ಯಕ್ರಮ ಮುದ ನೀಡಿತು. ಮೂರು ದಿನಗಳ ಉತ್ಸವದಲ್ಲಿ ಫ್ಲವರ್ ಶೋ, ಡಾಗ್ ಶೋ, ಕಿಚನ್ ಕ್ವೀನ್ ಸ್ಪರ್ಧೆಗಳು ಖುಷಿ ಕೊಟ್ಟವು. ಬೈಕ್ ಸ್ಟಂಟ್ ಮೈ ರೋಮಾಂಚನಗೊಳಿಸಿತು.

ಪಂಪ ಪ್ರಶಸ್ತಿ ಪ್ರದಾನ ಫೆಬ್ರವರಿ 2 ಹಾಗೂ 3 ರಂದು ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ ಅದ್ದೂರಿಯಿಂದ ಜರುಗಿತು. ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಯಾಂಡಲ್​ವುಡ್ ಹಾಡುಗಾರರಾದ ಅರ್ಚನಾ ಉಡುಪ ಹಾಗೂ ಗುರುಕಿರಣ್ ತಂಡದ ರಸಮಂಜರಿ, ಅನಾನಸ್ ಉತ್ಸವ ಗಮನ ಸೆಳೆಯಿತು. 2019 ರಲ್ಲಿ ಆಯೋಜನೆಯಾಗಲಿರುವ ಕದಂಬೋತ್ಸವಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್​ನಲ್ಲಿ ಜಿಲ್ಲಾಡಳಿತದಿಂದ ಆಯೋಜನೆಗೊಂಡ ‘ಬನವಾಸಿಯಲ್ಲೊಂದು ಮೆರುಗು’ ಕಾರ್ಯಕ್ರಮ ಗಮನ ಸೆಳೆಯಿತು.

ವಿಜೃಂಭಣೆಯ ಶಿರಸಿ ಜಾತ್ರೆ 2 ವರ್ಷಕ್ಕೊಮ್ಮೆ ಬರುವ ಶಿರಸಿ ಮಾರಿಕಾಂಬಾ ಜಾತ್ರೆ ಫೆಬ್ರವರಿ 27ರಿಂದ 9 ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಮಲೆನಾಡಿನ ಶಿರಸ್ಸಿನಲ್ಲಿರುವ ಪಟ್ಟಣ ಲಕ್ಷಾಂತರ ಭಕ್ತರನ್ನು ಸೆಳೆಯಿತು. ದೇವಿಯ ಭಕ್ತಿಯ ಪ್ರತೀಕದ ಜೊತೆಗೆ ಹೆಲಿಕ್ಯಾಪ್ಟರ್ ರೈಡ್ ಈ ಬಾರಿಯ ವಿಶೇಷವಾಗಿತ್ತು.

ಅಮ್ಮೆಂಬಳ ಆನಂದ, ಆಳ್ವಾಗೆ ರಾಜ್ಯೋತ್ಸವ ದಿನಕರ ದೇಸಾಯಿ ಅವರ ಶಿಷ್ಯರಾಗಿ, ಅವರ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ, ಕೈಗಾ ಸೇರಿ ಹಲವು ಪರಿಸರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಪತ್ರಕರ್ತ, ಸಾಹಿತಿ ಅಮ್ಮೆಂಬಳ ಆನಂದ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಅಮ್ಮೆಂಬಳ ಆನಂದ ಅವರು ಮೂಲತಃ ಉತ್ತರ ಕನ್ನಡದವರಲ್ಲದಿದ್ದರೂ ಅವರ ಕರ್ಮಭೂಮಿ ಉತ್ತರ ಕನ್ನಡ. ನಿರಂತರ ಮೂರು ದಶಕಗಳಿಗೂ ಅಧಿಕ ಕಾಲ ಜಿಲ್ಲೆಯಲ್ಲೇ ಇದ್ದು ಮಾಡಿದ ಕಾರ್ಯಕ್ಕೆ ಅವರಿಗೆ ಪ್ರಶಸ್ತಿ ಲಭಿಸಿದ್ದು ಹೆಮ್ಮೆ ತಂದಿತು. ಜಿಲ್ಲೆಯನ್ನು ಒಮ್ಮೆ ಪ್ರತಿನಿಧಿಸಿ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಅವರಿಗೂ ಜಿಲ್ಲೆಯ ಕೋಟಾದಲ್ಲೇ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಜಾನಪದ ಅಕಾಡೆಮಿ ಗೌರವ ಹಾಲಕ್ಕಿಗಳ ಊರು ಸುತ್ತಿ ಗುಮಟೆ ಬಡಿದು, ಸುಗ್ಗಿ ಪದ ಹಾಡುವ ಬೇಲೆಕೇರಿ ಸೀಬರ್ಡ್ ಕಾಲನಿಯ ಖೇಮು ತುಳಸು ಗೌಡರಿಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕೃಷಿ ಹಾಗೂ ಮಾವಿನ ಹಣ್ಣಿನ ವ್ಯಾಪಾರ ಇವರ ಉದ್ಯೋಗ. ಆದರೆ, ಪರಂಪರಾಗತವಾಗಿ ಬಂದ ಸುಗ್ಗಿ ಕಲೆಯಲ್ಲಿ ಪರಿಣತರು. ಖೇಮು ಅವರು ನೂರಾರು ಹಾಡು ಹೇಳುತ್ತಾರೆ. ಗುಮಟೆ ಪಾಂಗ್ ಹಿಡಿದು ಕುಳಿತರೆ ತಾಸುಗಟ್ಟಲೇ ಬಾರಿಸುತ್ತಾರೆ. ಸುಗ್ಗಿ ತುರಾಯಿ ಕಟ್ಟಿ ನೃತ್ಯ ಕೂಡ ಮಾಡುತ್ತಾರೆ. ಇವರಿಗೆ ಪ್ರಶಸ್ತಿ ಸಿಕ್ಕಿರುವುದು ಹಾಲಕ್ಕಿ ಸಮುದಾಯಕ್ಕೆ ಸಿಕ್ಕ ಗೌರವವಾಗಿದೆ.

ಯಕ್ಷೋತ್ಸವ ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸೆ. 8 ರಿಂದ 3 ದಿನ ಯಕ್ಷೋತ್ಸವ ಜರುಗಿತು. ಮದ್ದಲೆವಾದಕ ಮಂಜುನಾಥ ಭಂಡಾರಿ ದಂಪತಿಗೆ ಶ್ರೀಗಳು ‘ಯಕ್ಷ ಸ್ವರ್ಣ’ ಪ್ರಶಸ್ತಿ, ಗಿಡ ಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು.

ಕುಮಟಾ ವೈಭವ ನವೆಂಬರ್ 21ರಿಂದ ಐದು ದಿನಗಳ ಕುಮಟಾ ವೈಭವ ಕುಮಟಾದಲ್ಲಿ ಮೆರುಗು ನೀಡಿತು. ಸ್ಯಾಂಡಲ್​ವುಡ್ ಗಾಯಕ ವಿಜಯಪ್ರಕಾಶ ಹಾಗೂ ಗಾಯಕಿ ಅನುರಾಧಾ ಭಟ್ ತಂಡದ ಸಂಗೀತ ಕಾರ್ಯಕ್ರಮ ಸಾಕಷ್ಟು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಾಹಿತ್ಯ ಸಮ್ಮೇಳನಕ್ಕೆ ಷರೀಫರೇ ಕಿರೀಟ ಉತ್ತರ ಕನ್ನಡ 21ನೇ ಸಾಹಿತ್ಯ ಸಮ್ಮೇಳನ ಫೆ. 22 ಹಾಗೂ 23 ರಂದು ಯಲ್ಲಾಪುರದ ವೈಟಿಎಸ್​ಎಸ್ ಸಭಾಭವನದಲ್ಲಿ ಗಮನ ಸೆಳೆಯಿತು. ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಆದರೆ, ಜನರ ಕೊರತೆ ಉಂಟಾಯಿತು. ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ಸಯ್ಯದ್ ಜಮಿರುಲ್ಲಾ ಷರೀಫ್ ಅವರ ಪ್ರಬುದ್ಧ ಹಾಗೂ ಸಕಾಲಿಕ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಂಕಲ್ಪಕ್ಕೆ 32 ಯಲ್ಲಾಪುರದಲ್ಲಿ ನವೆಂಬರ್ 1ರಿಂದ 7ರವರೆಗೆ 32ನೇ ವರ್ಷದ ಸಂಕಲ್ಪ ಉತ್ಸವ ಜರುಗಿತು. ಯಕ್ಷಗಾನ, ಸಾಹಿತ್ಯ ಚರ್ಚೆ ಹೀಗೆ ಹಲವು ಕಾರ್ಯಕ್ರಮಗಳು ಯಲ್ಲಾಪುರ ಜನರ ಗಮನ ಸೆಳೆದವು