ಧಾರ್ಮಿಕ ಭಾವನೆಯೊಂದಿಗೆ ದೇಶಾಭಿವೃದ್ಧಿ ಕಾಳಜಿ

ಬೆಳ್ಳಾರೆ: ಅಮರಪಡ್ನೂರು ಗ್ರಾಮ ವ್ಯಾಪ್ತಿಯ ಚೊಕ್ಕಾಡಿಯಲ್ಲಿ ಉಳ್ಳಾಕುಳು ದೈವ, ನಾಯರ್ ನೇಮ ಹಾಗೂ ಜಾತ್ರೋತ್ಸವದ ಸಂಭ್ರಮದಲ್ಲಿ ಇಡಿ ಊರೇ ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದರೂ ಇಲ್ಲಿನ ಮತದಾರರು ಜಾತ್ರೋತ್ಸವದ ನೆಪದಲ್ಲಿ ಮತ ಚಲಾಯಿಸುವಲ್ಲಿ ನಿರ್ಲಕ್ಷೃ ವಹಿಸಿಲ್ಲ.
ದೈವಸ್ಥಾನದ ಧಾರ್ಮಿಕ ಕಾರ್ಯಗಳ ಜತೆ ಇಲ್ಲಿನ ಮತದಾರರು ಚುನಾವಣೆಯಲ್ಲಿ ಮತದಾನದ ಕರ್ತವ್ಯ ಪೂರೈಸಿರುವುದು ಸುತ್ತಮುತ್ತಲಿರುವ ಬೇರೆ ಗ್ರಾಮದ ಜನರ ಶ್ಲಾಘನೆಗೆ ಪಾತ್ರವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೋತ್ಸವದ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿದ್ದು, ಊರಿನ ಸಾವಿರಾರು ಜನರು ಇಲ್ಲಿ ತಮ್ಮ ವೈಯಕ್ತಿಕ ಕಾರ್ಯಕ್ಕಿಂತ ಜಾತ್ರೆಗೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ ಈ ಬಾರಿ ಜಾತ್ರಾ ಮಹೋತ್ಸವದ ನಡುವೆಯೂ ಪ್ರತಿಯೊಬ್ಬರು ಮತದಾನಗೈಯ್ಯುವ ಕರ್ತವ್ಯವನ್ನು ನಿಭಾಯಿಸಿ ಮತದಾನದ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ. ಇದು ಮತದಾನದ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟೂ ಜನರಿಗೆ ಜಾಗೃತಿ ಮೂಡಿಸಲು ನೆರವಾಗಲಿದೆ ಎಂಬುದು ಚೊಕ್ಕಾಡಿ ಜನತೆಯ ಮಾತಾಗಿದೆ.

ನಮಗೆ ಜಾತ್ರೋತ್ಸವ ಊರ ಹಬ್ಬ. ವೈಯಕ್ತಿಕ ಕಾರ್ಯಗಳಿಗಿಂತ ನಮಗೆ ದೇವರ ಹಬ್ಬವೇ ಪ್ರಥಮ. ಅಂತೆಯೆ ಮತದಾನ ಪ್ರತಿಯೊಬ್ಬನ ಅಧಿಕಾರ. ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಿರುವ ನಾವು ಎಂದೂ ಕಳೆದುಕೊಳ್ಳಬಾರದು.
ಚಂದ್ರಶೇಖರ ಗೌಡ ವ್ಯಾಪಾರಿ

ನಮಗೆ ದೇವರು ರಕ್ಷಕ.ಅದಕ್ಕಾಗಿ ಅವನಿಗೊಂದು ಉತ್ಸವ ನಮ್ಮಿಂದ ಸಮರ್ಪಣೆ. ದೇಶವು ನಮಗೆ ಬದುಕಲು ನೆಲೆ ನೀಡಿದೆ. ನಮ್ಮ ಮಾತೃ ದೇಶದ ಸಮರ್ಥ ರಕ್ಷಕನಿಗಾಗಿ ನಾವು ಮತದಾನ ಮಾಡಿದ್ದೇವೆ.
ಚೋಮ ದೈವಸ್ಥಾನದ ಭಕ್ತ