ನುಗ್ಗೇಹಳ್ಳಿ: ಮನುಷ್ಯನಿಗೆ ಶಾಂತಿ, ನೆಮ್ಮದಿ ದೊರೆಯಬೇಕಾದರೆ ಧಾರ್ಮಿಕ ಕೇಂದ್ರಗಳು ಹೆಚ್ಚಾಗಿ ನಿರ್ಮಾಣವಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಯಾಚನಘಟ್ಟ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಮುಳ್ಳಮ್ಮ ದೇವಿಯ ದೇಗುಲ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ದಿಕ್ಕು ತಪ್ಪಿಸುವ ವ್ಯಸನ ಕೇಂದ್ರಗಳು ಹೆಚ್ಚಾಗುತ್ತಿವೆ. ಇದನ್ನು ಸರಿಪಡಿಸಲು ಧರ್ಮ, ಅಧ್ಯಾತ್ಮ ಕೇಂದ್ರಗಳು ಹೆಚ್ಚಾಗಬೇಕು. ಹಳ್ಳಿಗಳ ಅಭಿವೃದ್ಧಿಗೆ ಒಗ್ಗಟ್ಟಾಗಿ ನಿಮ್ಮ ಹಳ್ಳಿ ಅಭಿವೃದ್ಧಿಪಡಿಸಿಕೊಳ್ಳಬೇಕು. ಸಂತೆಶಿವರ ಕೆರೆ ತುಂಬಿದ ಮೇಲೆ ಯಾಚನಘಟದ ಕೆರೆಗೂ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮಹಾಲಿಂಗಪ್ಪ, ಗುಡಿಗೌಡ ಮಧು, ಸಂತೋಷ್ ಕುಮಾರ್, ಕುಳ್ಳೇಗೌಡ, ಗುರು, ಶಿವಾನಂದ್, ಧನಂಜಯ, ಮಂಜುನಾಥ್, ಇತರರು ಹಾಜರಿದ್ದರು.