ಬೆಟ್ಟದಪುರ: ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದು ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಬೆಟ್ಟದಪುರ ಸಮೀಪದ ಕೋಮಲಾಪುರ ಗ್ರಾಮದ ಶ್ರೀ ಚೌಡೇಶ್ವರಿ, ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತಕಥೆ ಹಾಗೂ ಶ್ರೀ ವರದ ಶಂಕರ ವ್ರತಕಥೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯ ಭಗವಂತನ ಆರಾಧನೆ ಮತ್ತು ಪೂಜೆ ಮಾಡುವುದು ನಮಗೆ ಸಂಸ್ಕಾರ ಕಲಿಸುತ್ತದೆ. ಭಕ್ತರಿಗೆ ದೇವರ ಮಹಿಮೆ ಸಾರುವುದು ವಿಶೇಷ ಕಾರ್ಯಕ್ರಮವಾಗಿದೆ. ಕಾವೇರಿ ನದಿ ಚಿಕ್ಕ ಝರಿಯಾಗಿ ಹುಟ್ಟಿ ಕನ್ನಡ ನಾಡಿಗೆ ಆಸರೆಯಾಗುವಂತೆ ಇಂದು ಕುಂಭಮೇಳದ ಸಂದರ್ಭ ಪ್ರಾರಂಭವಾದ ಈ ಧಾರ್ಮಿಕ ಕಾರ್ಯಕ್ರಮ ಮುಂದೆ ಪ್ರಸಿದ್ಧಿಯಾಗಿ ಧಾರ್ಮಿಕ ಕಾರ್ಯ ಮತ್ತಷ್ಟು ಹೆಚ್ಚುವಂತಾಗಲಿ ಎಂದು ಶುಭ ಕೋರಿದರು.
ಶ್ರೀರಾಮ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಎಂ.ಬಿ ಮಲ್ಲಾರಾಧ್ಯ ಮಾತನಾಡಿ, ದೇವಾಲಯ ವತಿಯಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಿಂದ ಗ್ರಾಮಕ್ಕೆ ಒಳಿತಾಗಿ ಕೆಟ್ಟ ಶಕ್ತಿಗಳು ದೂರವಾಗಿ ಗ್ರಾಮ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಪಿರಿಯಾಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಗೋವಿಂದರಾಜು ಮಾತನಾಡಿ, ಆಧುನಿಕ ಯುಗದಲ್ಲಿ ಪೂರ್ವಜರ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಶ್ಲಾಘನೀಯ. ಇದರ ಜತೆ ನಮ್ಮ ಜನಪದ ಹಾಗೂ ಸಾಹಿತ್ಯ, ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದರು.
ಜ್ಯೋತಿಷಿ ಕೆ.ಎಸ್.ಷಣ್ಮುಖಾರಾಧ್ಯ, ಕೋಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಶಿವಮ್ಮ ಶಿವರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಘುನಾಥ್, ದಿಂಡಗಾಡು ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ಹರಳಹಳ್ಳಿ ಗುರುಮಠದ ಶ್ರೀ ಶ್ರೀಕಂಠಾರಾಧ್ಯ, ದೇವಾಲಯ ಪ್ರಧಾನ ಅರ್ಚಕರಾದ ಗಣೇಶ್, ಬಸವರಾಜ್, ಭಕ್ತರು ಭಾಗವಹಿಸಿದ್ದರು.