ಧಾರವಾಡ: ವರಕವಿ ದ.ರಾ. ಬೇಂದ್ರೆ ಅವರ ಜನ್ಮದಿನದಂದು ಪ್ರತಿವರ್ಷ ನೀಡುವ ಅಂಬಿಕಾತನಯದತ್ತ ಪ್ರಶಸ್ತಿ ಮೊತ್ತವನ್ನು ಇಳಿಕೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಧಾರವಾಡ ಬಾಂಡ್ಸ್ (ಧಾರವಾಡದ ಬೆಸುಗೆ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪ್ರಶಸ್ತಿ ಮೊತ್ತವನ್ನು 1 ಲಕ್ಷ ರೂ.ದಿಂದ 10 ಸಾವಿರ ರೂ.ಗೆ ಇಳಿಸಿದ ಕ್ರಮ ಖಂಡನೀಯ. ಸರ್ಕಾರದ ಈ ನಿರ್ಣಯದಿಂದ ಪ್ರಶಸ್ತಿ, ವರಕವಿ ಹಾಗೂ ನಾಡು-ನುಡಿಗೂ ಅಗೌರವ ತೋರುವಂತಾಗಿದೆ. ಹೀಗಾಗಿ ಸರ್ಕಾರ ಎಚ್ಚೆತ್ತು ಮೊದಲಿನಂತೆ 1 ಲಕ್ಷ ರೂ. ಮೊತ್ತವನ್ನೇ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪ್ರತಿಷ್ಠಿತ ಪ್ರಶಸ್ತಿಗಳ ಮೌಲ್ಯಗಳನ್ನು ಇಳಿಕೆ ಮಾಡಿರುವ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ತಾನು ಹೊರಡಿಸಿರುವ ಆದೇಶವನ್ನು ಪರಾಮಶಿಸುವ ಮೂಲಕ ಮೊದಲು ಇದ್ದಂತೆ 1 ಲಕ್ಷ ರೂ. ಮೊತ್ತವನ್ನೇ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.