More

  ಧಾರವಾಡ ಕೃಷಿ ಮೇಳ ನಾಳೆಯಿಂದ

  ಧಾರವಾಡ: ಕೃಷಿ ವಿಶ್ವ ವಿದ್ಯಾಲಯದ ವತಿಯಿಂದ 2019-20ನೇ ಸಾಲಿನ ಕೃಷಿ ಮೇಳವನ್ನು ಜ. 18ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕೃವಿವಿ ಕುಲಪತಿ ಡಾ. ಮಹದೇವ ಚೆಟ್ಟಿ ತಿಳಿಸಿದರು.

  ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಹನಿ-ಸಮೃದ್ಧ ತೆನಿ’ ಘೊಷ ವಾಕ್ಯದೊಂದಿಗೆ ನಡೆಯುವ ಮೇಳವನ್ನು ಜ. 18ರಂದು ಬೆಳಗ್ಗೆ 11.30ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಉಪಮುಖ್ಯಮಂತ್ರಿ, ಕೃಷಿ ಸಚಿವ ಲಕ್ಷ್ಮಣ ಸವದಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು. ಅತಿಥಿಗಳಾಗಿ ಸಚಿವರಾದ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ. ಪಾಟೀಲ, ಪ್ರಭು ಚವ್ಹಾಣ, ಶಶಿಕಲಾ ಜೊಲ್ಲೆ, ಕೇಂದ್ರ ಸಚಿವ ಸುರೇಶ ಅಂಗಡಿ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್. ಆರ್. ಪಾಟೀಲ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಆಗಮಿಸುವರು. ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

  19ರಂದು ಬೆಳಗ್ಗೆ 10 ಗಂಟೆಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕಬ್ಬು ಬೆಳೆಯ ಅಧಿಕ ಉತ್ಪಾದನಾ ತಾಂತ್ರಿಕ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ , ಮಧ್ಯಾಹ್ನ 3 ಗಂಟೆಗೆ ಮುಖ್ಯ ವೇದಿಕೆಯಲ್ಲಿ ಉತ್ತರ ಕನ್ನಡ ಹಾಗೂ ವಿಜಯಪುರ ಜಿಲ್ಲೆಗಳ ರೈತರಿಗೆ ಪ್ರಶಸ್ತಿ ಪ್ರದಾನ, ಡಾ. ಚನ್ನವೀರ ಕಣವಿ ಅವರಿಂದ ಕೃಷಿ ಲೇಖಕ ಪ್ರಶಸ್ತಿ ಪ್ರದಾನ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ ಎಂದರು.

  20ರಂದು ಬೆಳಗ್ಗೆ 11 ಗಂಟೆಗೆ ಮುಖ್ಯ ವೇದಿಕೆಯಲ್ಲಿ ಹಾವೇರಿ, ಗದಗ, ಧಾರವಾಡ ಜಿಲ್ಲೆಗಳ ರೈತರಿಗೆ ಪ್ರಶಸ್ತಿ ಪ್ರದಾನ, ಮಧ್ಯಾಹ್ನ 3 ಗಂಟೆಗೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿಯಲ್ಲಿ ಆರ್ಥಿಕ ನಿರ್ವಹಣೆ ಕುರಿತು ಕಾರ್ಯಕ್ರಮ ನಡೆಯಲಿದೆ ಎಂದರು.

  ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೇಳ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಅತಿವೃಷ್ಟಿ ಎದುರಾದ ಕಾರಣಕ್ಕೆ ಜನವರಿಯಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ ಹಿಂಗಾರು ಹಂಗಾಮಿನ ಬಿತ್ತನೆಯಾದ ಪರಿಣಾಮ ಬೀಜ ಮೇಳವನ್ನು ಪ್ರತ್ಯೇಕವಾಗಿ ಹಮ್ಮಿಕೊಳ್ಳದೆ, ಮೂರು ದಿನಗಳು ಮಾತ್ರ ಕೃಷಿ ಮೇಳ ನಡೆಸಲಾಗುತ್ತಿದೆ ಎಂದರು.

  ಗೃಹ ವಿಜ್ಞಾನ, ಗುಡಿ ಕೈಗಾರಿಕೆ, ಔಷಧಿ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಜಾನುವಾರು ಪ್ರದರ್ಶನ ಸೇರಿದಂತೆ ಕೃಷಿ ಸಂಬಂಧಿತ ಪ್ರದರ್ಶನಗಳು ಮೇಳದಲ್ಲಿ ರೈತರಿಗೆ ಲಭ್ಯವಾಗಲಿವೆ. ಇದಲ್ಲದೆ 130 ಹೈಟೆಕ್, 300 ಸಾಮಾನ್ಯ, 16 ಯಂತ್ರೋಪಕರಣಗಳು, 23 ಆಹಾರ ಮತ್ತು 72 ಜಾನುವಾರುಗಳ ಮಳಿಗೆಗಳು ಸೇರಿ 500ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದರು.

  ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು, ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್. ಪಾಟೀಲ, ಡಾ. ಎಸ್.ಬಿ. ಹೊಸಮನಿ, ನಿರ್ದೇಶಕರು, ಇತರರು ಇದ್ದರು.

  ಶ್ರೇಷ್ಠ ಕೃಷಿಕ ಪ್ರಶಸ್ತಿಗಳು: ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ನಾಗರಾಜ ದೇಸಾಯಿ, ಶ್ರೇಷ್ಠ ಕೃಷಿಕ ಮಹಿಳೆ ಮಹಾದೇವಿ ತೋಟಗಿ, ಹಾವೇರಿ ಜಿಲ್ಲೆಯ ಚಂದ್ರಪ್ಪ ತಿಪ್ಪಗೊಂಡರ, ಸೌಭಾಗ್ಯ ಬಸನಗೌಡರ, ಗದಗ ಜಿಲ್ಲೆಯ ಹೇಮಗಿರೀಶ ಹಾವಿನಾಳ, ಶಾರದಾ ರಾಠೋಡ, ವಿಜಯಪುರ ಜಿಲ್ಲೆಯ ಅರವಿಂದ ಕೊಪ್ಪ, ಹಸೀನಾಬೇಗಂ ಗೌಸಪೀರ, ಬಾಗಲಕೋಟ ಜಿಲ್ಲೆಯ ಗುರುಪಾದಸ್ವಾಮಿ ಅಡವಿಸ್ವಾಮಿಮಠ, ಲಕ್ಷ್ಮೀ ಹೊಸೂರ, ಉತ್ತರ ಕನ್ನಡ ಜಿಲ್ಲೆಯ ಬಸವರಾಜ ಕಲಕೊಪ್ಪ, ರಾಜೇಶ್ವರಿ ಹೆಗಡೆ ಹಾಗೂ ಧಾರವಾಡ ಜಿಲ್ಲೆಯ ಮೃತ್ಯುಂಜಯ ನಾಗಶೆಟ್ಟಿ, ಅನುರಾಧ ಅಮ್ಮಿನಭಾವಿ ಭಾಜನರಾಗಿದ್ದಾರೆ. ಇನ್ನು 7 ಜಿಲ್ಲೆ ವಿವಿಧ ತಾಲೂಕುಗಳಿಂದ 49 ಶ್ರೇಷ್ಠ ಯುವ ಕೃಷಿಕ ಹಾಗೂ 49 ಶ್ರೇಷ್ಠ ಯು ಕೃಷಿ ಮಹಿಳೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಚೆಟ್ಟಿ ತಿಳಿಸಿದರು.

  5600 ಕ್ವಿಂಟಾಲ್ ಬೀಜ ಮಾರಾಟ: ಕೃಷಿ ಮೇಳದಲ್ಲಿ ಪ್ರತಿ ವರ್ಷವೂ ನಡೆಸುವ ಬೀಜ ಮೇಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀಜ ಮಾರಾಟವಾಗುವುದು ಸಾಮಾನ್ಯ. ಆದರೆ ಬಾರಿ ಮೇಳಕ್ಕೂ ಪೂರ್ವದಲ್ಲೇ ಮುಂಗಾರು ಹಾಗೂ ಹಿಂಗಾರಿ ಸೇರಿ ಒಟ್ಟು 2.5 ಕೋಟಿ ರೂ. ಮೌಲ್ಯದ 5600 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟವಾಗಿದೆ. ಇದಲ್ಲದೆ 16.6 ಲಕ್ಷ ರೂ. ಮೌಲ್ಯದ ತೋಟಗಾರಿಕೆ ಬೆಳೆಯ ಸಸಿಗಳು ಹಾಗೂ ಬೀಜ ಮಾರಾಟ ಮಾಡಲಾಗಿದೆ ಎಂದು ಡಾ. ಮಹದೇವ ಚೆಟ್ಟಿ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts