More

    ಧಾರವಾಡದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ

    ಹುಬ್ಬಳ್ಳಿ: ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳ ಸಲುವಾಗಿ ಧಾರವಾಡದಲ್ಲಿ ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ 3 ಜಿಲ್ಲೆಗಳ ವಾಣಿಜ್ಯೋದ್ಯಮ ಸಂಸ್ಥೆಗಳು, ವಿವಿಧ ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಇಬ್ಬರ ಮಧ್ಯೆ ಸೇತುವೆಯಾಗಿ ಮೇಳ ಕೆಲಸ ಮಾಡಲಿದೆ. ಇದು ಕಾಟಾಚಾರದ ಮೇಳ ಅಲ್ಲ. ಹೆಚ್ಚಿನ ಆಕಾಂಕ್ಷಿಗಳಿಗೆ ಅವಕಾಶ ಸಿಗಬೇಕು. ಉದ್ಯೋಗ ನೀಡುವವರಿಗೂ ತೃಪ್ತಿ ಇರಬೇಕು. ಎಷ್ಟು ಜನಕ್ಕೆ ಉದ್ಯೋಗ ಕೊಡುತ್ತೀರಿ, ಕೊಡುವ ಸಂಬಳ ಎಷ್ಟು, ವಿದ್ಯಾರ್ಹತೆ ಏನು? ಎಂಬಿತ್ಯಾದಿ ಮಾಹಿತಿಯನ್ನು ಮೊದಲೇ ಕೊಡಿ ಎಂದು ಉದ್ಯೋಗದಾತರಿಗೆ ಮನವಿ ಮಾಡಿದರು.

    ಅಂಗವಿಕಲರಿಗೆ ಅದ್ಯತೆ ನೀಡಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಾಧನಾ ಪೋಟೆ ಮಾತನಾಡಿ, ಉದ್ಯೋಗದಾತ ಕಂಪನಿಗಳು ತಮಗೆ ಎಷ್ಟು ಜನರ ಅವಶ್ಯಕತೆ ಇದೆ ಎಂಬುದರ ಮಾಹಿತಿ ನೀಡಬೇಕು. ಅಂಗವಿಕಲರಿಗೆ ಕಂಪನಿಗಳು ಒಂದಿಷ್ಟು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

    ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಉದ್ಯೋಗ ಮೇಳ ಒಳ್ಳೆಯ ಕಾರ್ಯಕ್ರಮ. ಈ ಭಾಗದ ಅಭಿವೃದ್ಧಿಗೆ ಪೂರಕ. ಬಿಜಿನೆಸ್ ಕಡಿಮೆ ಇರುವುದು ನಿಜವಾದರೂ ಇದನ್ನು ಸವಾಲಾಗಿ ತೆಗೆದುಕೊಂಡು ಕೈಗಾರಿಕೆಗಳು ಮುಂದಡಿ ಇಡಬೇಕು ಎಂದರು.

    ಕೆಸಿಸಿಐ ಮಾಜಿ ಅಧ್ಯಕ್ಷ ವಸಂತ ಲದ್ವಾ, ಪ್ರೊ. ರಿಯಾಜ ಬಸರಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನ ಮೇಳ ಆಯೋಜಿಸಲಾಗುತ್ತದೆ. ಬೇರೆ ಬೇರೆ ಕ್ಷೇತ್ರದ ಆಸಕ್ತ ಕಂಪನಿ, ಸೇವಾ ಸಂಸ್ಥೆಗಳು ವೆಬ್​ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

    ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಕಾರ್ಯದರ್ಶಿ ಮನೋಹರ ಕೊಟ್ಟೂರಶೆಟ್ರ, ನಾಗರಾಜ ದಿವಟೆ, ಗದಗ ವಾಣಿಜ್ಯೊದ್ಯಮ ಸಂಸ್ಥೆಯ ಜಯದೇವ ಮೆಣಸಗಿ, ಹಾವೇರಿಯ ಎಂ.ವಿ. ಹೊಂಬಾಡಿ, ಬ್ಯಾಡಗಿಯ ರಾಜು ಮೊರಗೇರಿ ಮಾತನಾಡಿದರು.

    ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಎಂ.ಡಿ. ಶಕೀಲ ಅಹ್ಮದ, ತಹಸೀಲ್ದಾರ್​ಗಳಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾಣಿಜ್ಯೋದ್ಯಮ ಸಂಸ್ಥೆಯ ವಿನಯ ಜವಳಿ, ರಮೇಶ ಪಾಟೀಲ, ಅಶೋಕ ಗಡಾದ, ಸಿದ್ದೇಶ್ವರ ಕಮ್ಮಾರ, ವಿ.ಪಿ. ಲಿಂಗನಗೌಡರ, ಉಮೇಶ ಗಡ್ಡದ, ಎಂ.ಕೆ. ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts