ಧಾತುಗಳ ಆವಿಷ್ಕಾರಕ್ಕಿದೆ ಅವಕಾಶ


 ಕಲಬುರಗಿ: ಮನುಷ್ಯನ ಜೀವನ ಸುಧಾರಣೆ ಮತ್ತು ಆರೋಗ್ಯ ರಕ್ಷಣೆಗೆ ರಾಸಾಯನಿಕ ಧಾತುಗಳ (ಕೆಮಿಕಲ್ ಎಲೆಮೆಂಟ್ಸ್) ಅಧ್ಯಯನ ಬಹುಮುಖ್ಯವಾಗಿದೆ. ಈಗ 118 ಧಾತುಗಳಿದ್ದು, ಆವಿಷ್ಕಾರಕ್ಕೆ ಸಾಕಷ್ಟು ಅವಕಾಶಗಳು ಇದ್ದುದರಿಂದ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಯತ್ತ ಹೆಜ್ಜೆ ಹಾಕಬೇಕು ಎಂದು ನಾಡೋಜ ಡಾ.ಪಿ.ಎಸ್.ಶಂಕರ ಹೇಳಿದರು.
ವಿಜನ್ ಗ್ರೂಪ್ ಆನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ ಸಹಯೋಗದಡಿ ರಾಸಾಯನಿಕ ಮೂಲ ಅಂಶಗಳ ಆವರ್ತಕ ಕೋಷ್ಟಕದ ಅಂತಾರಾಷ್ಟ್ರೀಯ ವರ್ಷಾಚರಣೆ ನಿಮಿತ್ತ ಶರಣಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಈಗ ಪ್ರಯೋಗಾಲಯದಲ್ಲಿ ಹೊಸ ರಾಸಾಯನಿಕ ಧಾತುಗಳನ್ನು ಆವಿಷ್ಕಾರ ಮಾಡಬಹುದಾಗಿದೆ. ಈ ಶತಮಾನದಲ್ಲಿ ಹೊಸದಾಗಿ 6 ಧಾತುಗಳು ಸೇರಿಕೊಂಡಿವೆ ಎಂದರು.
ನಿಸರ್ಗದತ್ತವಾದ ಲೋಹ, ಅಲೋಹ, ಅನಿಲ, ಖನಿಜ ಮತ್ತು ಪ್ರಯೋಗ ಶಾಲೆಯಲ್ಲಿ ಅಭಿವೃದ್ಧಿಪಡಿಸಿರುವ ಧಾತು (ಮೂಲ ಅಂಶ)ಗಳಲ್ಲಿನ ಗುಣ ಮತ್ತು ವೈಶಿಷ್ಟೃ ಆಧರಿಸಿ ಸಂಶೋಧನೆ ಮಾಡಿದ ವಿಜ್ಞಾನಿ, ದೇಶ, ಊರು, ಪ್ರದೇಶ ಆಧರಿಸಿ ವಿಶ್ವ ಅನ್ವಯಿಕ ರಸಾಯನಶಾಸ್ತ್ರ ಸಂಸ್ಥೆಯವರು ಹೆಸರಿಟ್ಟು ಮಾನ್ಯತೆ ನೀಡುತ್ತಾರೆ ಎಂದು ತಿಳಿಸಿದರು.
ಮೊದಲಿನಿಂದಲೂ ರಾಸಾಯನಿಕ ಧಾತುಗಳ ಆವರ್ತಕ ಕೋಶ ರೂಪಿಸುವ ಪ್ರಯತ್ನಗಳು ನಡೆದಿದ್ದವು. 1869ರಲ್ಲಿ ಆವರ್ತಕ ಕೋಶವನ್ನು ಮೂಲ ವಸ್ತುವಿನಲ್ಲಿರುವ ಅಣು ತೂಕ ಆಧರಿಸಿ ರಷ್ಯಾದ ಮೆಂಡಲಿನ್ ಎಂಬ ವಿಜ್ಞಾನಿ ಮೊದಲು ರೂಪಿಸಿದರು. ನಂತರ ಅಮೆರಿಕದ ಏಂಡ್ರಿ ಮಾಸ್ಲಲಿಮ್ ಎಂಬುವರು ಅಣುಗಳ ಸಂಖ್ಯೆ ಆಧರಿಸಿ ಕೋಷ್ಟಕ ರೂಪಿಸಿದ ಎಂದರು.
ಕೋಶವನ್ನು ಲಂಬ ಮತ್ತು ಅಡ್ಡವಾಗಿ ರೂಪಿಸಲಾಗಿದೆ. ಈಗ ಹೊಸದಾಗಿ ಇನ್ನೊಂದು ಮಾದರಿಯಲ್ಲಿ ಕೋಷ್ಟಕ ರೂಪಿಸುವುದು ಸಾಧ್ಯವಾಗಲಿದೆ. ಶೀಘ್ರವೇ 8ನೇ ಕೋಶದ ಆವರ್ತಕ ಬರಬಹುದು. ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಅಧ್ಯಯನ ಮಾಡುವ ಹೊಸ ಸಾಧನೆಗಳತ್ತ ಹೆಜ್ಜೆ ಹಾಕಬೇಕು ಎಂದು ಡಾ.ಶಂಕರ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಜಿ.ಡೊಳ್ಳೆಗೌಡರ ಅಧ್ಯಕ್ಷತೆ ವಹಿಸಿದ್ದರು. ಸಿಯುಕೆ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಹರೀಶ ಹೊಳ್ಳ ಪ್ರಕೃತಿಯಿಂದ ಔಷಧ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ಸಂಘಟಕ ಮತ್ತು ಪಿ.ಎಸ್.ಶಂಕರ ಪ್ರತಿಷ್ಠಾನದ ಟ್ರಸ್ಟಿ ಡಾ.ಎಸ್.ಎ.ಮಾಲಿಪಾಟೀಲ್, ಪ್ರಾಧ್ಯಾಪಕರಾದ ಡಾ.ರಾಮರಡ್ಡಿ, ಮಾಲಿಪಾಟೀಲ್, ಡಾ.ಓಂಪ್ರಕಾಶ ಇತರರಿದ್ದರು. 


ಜ್ಞಾನ ಪಡೆಯಲು ಯಾವುದೇ ಕಟ್ಟುಪಾಡು ಇಟ್ಟುಕೊಳ್ಳಬಾರದು. ಯಾವುದೇ ಮೂಲದಿಂದ ಉತ್ತಮವಾಗಿರುವ ಜ್ಞಾನ ಮತ್ತು ಮಾಹಿತಿ ಬಂದಾಗ ಅದನ್ನು ಸ್ವೀಕರಿಸಿ ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಅದರಲ್ಲೂ ವಿಜ್ಞಾನ ವಿದ್ಯಾರ್ಥಿಗಳು ಸದಾ ಹೊಸದನ್ನು ಕಲಿಯುವತ್ತ ಸದಾ ಚಿಂತನಾಶೀಲರಾಗಿರಬೇಕು.
| ಡಾ.ಎಸ್.ಜಿ.ಡೊಳ್ಳೆಗೌಡರ
ಎಸ್ಬಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ


ಪ್ರಕೃತಿ ನಮ್ಮ ಎಲ್ಲ ತೆರನಾದ ಅಗತ್ಯಗಳನ್ನು ಪೂರೈಸುತ್ತಿದೆ. ನಿಸರ್ಗದತ್ತವಾಗಿರುವ ಸಸಿ, ಗಿಡ, ಖನಿಜಗಳಲ್ಲಿ ಔಷಧೀಯ ಗುಣಗಳಿವೆ. ಅದರಿಂದ ಜ್ವರದಿಂದ ಹಿಡಿದು ಕ್ಯಾನ್ಸರ್ವರೆಗಿನ ಅನೇಕ ರೋಗ ವಾಸಿ ಮಾಡಬಹುದು. ಇವುಗಳನ್ನು ರಸಾಯನ ಶಾಸ್ತ್ರ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿಜ್ಞಾನ ಜೀವನದ ಭಾಗವೇ ಆಗಿದೆ. ನಿತ್ಯ ಹೊಸದನ್ನು ಯೋಚಿಸುವ ಮೂಲಕ ಇನ್ನೊಂದನ್ನು ಕಂಡುಕೊಳ್ಳಬೇಕು.
| ಡಾ.ಹರೀಶ ಹೊಳ್ಳ
ಪ್ರಾಧ್ಯಾಪಕ, ಸಿಯುಕೆ ಕಲಬುರಗಿ

Leave a Reply

Your email address will not be published. Required fields are marked *