ಧರ್ವ ಜಲಾಶಯ ಭರ್ತಿ

ಮುಂಡಗೋಡ: ತಾಲೂಕಿನಲ್ಲಿರುವ ಜಲಾಶಯಗಳಲ್ಲಿ ಧರ್ವ ಒಂದೇ ಈಗ ಭರ್ತಿಯಾಗಿದೆ.  ಜಲಾಶಯ ಭರ್ತಿ ಸುದ್ದಿ ಮುಂಡಗೋಡ ತಾಲೂಕಿಗಿಂತ ಹಾನಗಲ್ಲ ತಾಲೂಕಿಗೇ ಹೆಚ್ಚು ಖುಷಿ ನೀಡುತ್ತದೆ. ಏಕೆಂದರೆ ಹಾನಗಲ್ಲ ತಾಲೂಕಿನ ರೈತರಿಗೆ ಇದು ಹೆಚ್ಚು ಉಪಯೋಗ.  ತಾಲೂಕಿನಲ್ಲಿ ಯಮಗಳ್ಳಿ ಹಳ್ಳಿ ಬಳಿ ಧರ್ವ ನದಿಗೆ 1964ರಲ್ಲಿ ಆಣೆಕಟ್ಟು ಕಟ್ಟಲಾಗಿದ್ದು, ತಾಲೂಕಿನ ಪ್ರಥಮ ಆಣೆಕಟ್ಟು ಎಂಬ ಹೆಗ್ಗಳಿಕೆ ಇದೆ. ಹಾನಗಲ್ಲ ಚಿಕ್ಕ ನೀರಾವರಿ ಇಲಾಖೆಯ ಅಧೀನದಲ್ಲಿರುವ ಈ ಜಲಾಶಯದಿಂದ ಅಸಂಖ್ಯಾತ ರೈತರಿಗೆ ಅನುಕೂಲವಾಗುತ್ತಿದೆ.

ಪ್ರಕೃತಿಯ ವಿಶಿಷ್ಟ ಕೊಡುಗೆಯಿಂದಾಗಿ ಕಂಗೊಳಿಸುತ್ತಿರುವ ಈ ಜಲಾಶಯಕ್ಕೆ ಪ್ರವಾಸಿಗರು ಭೇಟಿ ನೀಡುವುದು ಅಪರೂಪವಾಗಿದೆ. ಉತ್ತಮ ಉದ್ಯಾನವನ, ವಿದ್ಯುತ್ ಅಲಂಕಾರಗಳೊಂದಿಗೆ ಈ ಜಲಾಶಯದ ಸೊಬಗನ್ನು ಹೆಚ್ಚಿಸಬಹುದಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ಇಲಾಖೆ ಹಮ್ಮಿಕೊಂಡರೆ ಇದು ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಚಿಕ್ಕ ನೀರಾವರಿ ಇಲಾಖೆಯೊಂದಿಗೆ ಮಾತನಾಡಿ ಕಾರ್ಯ ರೂಪಕ್ಕೆ ತರಬೇಕು ಎಂಬುದು ಸ್ಥಳೀಯರ ಆಗ್ರಹ.

ನಿರಾಶ್ರಿತರಿಗಿಲ್ಲ ಸೌಲಭ್ಯ 

ಧರ್ವ ಜಲಾಶಯದ ನಿರಾಶ್ರಿತರಿಗೆ ಹಂಚಿಕೆ ಮಾಡಿದ ಜಮೀನುಗಳ ಹಾಗೂ ಮನೆಯ ಜಾಗದ ಆರ್​ಟಿಸಿ ಮಾತ್ರ ತಯಾರಿಸಿ ಕೆಜೆಪಿ ಮಾಡದ ಕಾರಣ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಫಲಾನುಭವಿಗಳಿಗೆ ಹಿನ್ನಡೆಯಾಗುತ್ತಿದೆ. ಕಳೆದ 3-4 ವರ್ಷದಿಂದ ಮಳಗಿ, ಪಾಳಾ, ಕೋಡಂಬಿ ಗ್ರಾಪಂಗಳಿಗೆ ಧರ್ವ ಜಲಾಶಯದಿಂದ ಕುಡಿಯುವ ನೀರನ್ನು ಮಾತ್ರ ಒದಗಿಸಲಾಗುತ್ತಿದೆ.