ಧರ್ಮ ಮಾರ್ಗದಲ್ಲಿ ನಡೆಯಿರಿ

ಬಸವಕಲ್ಯಾಣ: ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಸಂತೃಪ್ತಿ ಮತ್ತು ಸಾರ್ಥಕತೆ ಕಾಣಲು ಸಾಧ್ಯ. ಈ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ, ಕೃಪಾಶೀರ್ವಾದ ಬೇಕು ಎಂದು ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನುಡಿದರು.
ಮೈಸಲಗಾ ಗ್ರಾಮದ ಮಹಾಲಕ್ಷ್ಮೀ ಜಾತ್ರೆ, ಸೊಲ್ಲಾಪುರ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಸಮಾರೋಪ ಹಾಗೂ ಧರ್ಮ ಸಭೆ ನೇತೃತ್ವ ವಹಿಸಿದ್ದ ಅವರು, ಪೂಜೆ, ಧ್ಯಾನ, ಪುರಾಣ, ಪ್ರವಚನಗಳು ಮನಸ್ಸನ್ನು ಅರಳಿಸುವ ಜತೆಗೆ ಭಕ್ತಿ ಮಾರ್ಗದಲ್ಲಿ ನಡೆಯಲು ಸಹಕಾರಿ ಎಂದರು.
ಸಮ್ಮುಖ ವಹಿಸಿದ್ದ ಖೇರ್ಡಾ (ಬಿ)ಗ್ರಾಮದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜನೋಪಯೋಗಿ ಕಾರ್ಯ ಮಾಡಿದ ಶಿವಯೋಗಿ ಸಿದ್ಧರಾಮೇಶ್ವರರು ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದು ಹೇಳಿದರು.
ತಹಸೀಲ್ದಾರ್ ಸಾವಿತ್ರಿ ಸಲಗರ್ ಮಾತನಾಡಿ, ಸಾಧನೆಗೆ ಮನಸ್ಸು ಮುಖ್ಯ. ಛಲ, ಪರಿಶ್ರಮ ಇದ್ದಾಗ ಜೀವನದಲ್ಲಿ ಮಹತ್ವದ ಸಾಧನೆ ಸಾಧ್ಯ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಗ್ರಾಮದ ನಂದಿನಿ ಕಲಕುಟಗಿ ಮತ್ತು ಅಕ್ಕಮಹಾದೇವಿ ಅವರು ಕಷ್ಟಪಟ್ಟು ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆಗೇರಿದ್ದಾರೆ. ಅವರ ಸಾಧನೆಯಿಂದ ಸ್ಫೂರ್ತಿ ಪಡೆದು ಗ್ರಾಮದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದು ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಹೇಮಾವತಿ, ಸಿಪಿಐ ಆನಂದರಾವ ನಿಂಬರ್ಗಾ, ಪಿಎಸ್ಐಗಳಾದ ಅಕ್ಕಮಹಾದೇವಿ, ನಂದಿನಿ, ತಾಪಂ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ, ಮಲ್ಲಿನಾಥ ಹಿರೇಮಠ, ಮಹಾಲಕ್ಷ್ಮೀ ದೇವಸ್ಥಾನ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಅಟ್ಟೂರ, ಸಂತೋಷ ಕಲಕಟಗಿ, ಶಿವಶರಣಯ್ಯ ಸ್ವಾಮಿ, ಬಾಬುರಾವ ಭಂಡಾರಿ ಇತರರಿದ್ದರು.
ವಿಶ್ವನಾಥ ಕುಂಬಾರ ಸ್ವಾಗತಿಸಿದರು. ಅಂಬಾರಾಯ ಉಗಾಜಿ ನಿರೂಪಣೆ ಮಾಡಿದರು. ಕವಿರಾಜ ಹಾಗೂ ದಿಲೀಪಕುಮಾರ ದೇಸಾಯಿ ಪ್ರಾರ್ಥನ ಗೀತೆ ನಡೆಸಿಕೊಟ್ಟರು. ಹಾರಕೂಡ, ಹಿರೇನಾಗಾಂವ ಮತ್ತು ಖೇಳಗಿ ಶ್ರೀಗಳನ್ನು ಗ್ರಾಮದ ಪ್ರಮುಖ ರಸ್ತೆಗಳ ಮಾರ್ಗವಾಗಿ ವೇದಿಕೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.

ಪಿಎಸ್ಐಗಳಿಗೆ ಸನ್ಮಾನ : ಕಲಬುರಗಿ ಪಿಎಸ್ಐ ಅಕ್ಕಮಹಾದೇವಿ ಮತ್ತು ಬೆಂಗಳೂರಿನ ಪಿಎಸ್ಐ ನಂದಿನಿ ಕಲಕುಟಗಿ ಮತ್ತು ಮೇಘರಾಜ ಧನ್ನೂರೆ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *