ಧರ್ಮ ನಿಷ್ಠೆಯಿಂದ ಬಾಳಿರಿ

ನರೇಗಲ್ಲ: ಭಾರತೀಯ ಸಂಸ್ಕೃತಿಯಲ್ಲಿರುವ 4 ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ಬಹಳ ಮಹತ್ವ ನೀಡಲಾಗಿದೆ. ಪವಿತ್ರವಾದ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದ ನವ ದಂಪತಿಗಳ ಬಾಳು ಉಜ್ವಲವಾಗಬೇಕು. ಬಾಳು ಭಗವಂತ ಕೊಟ್ಟ ವರದಾನ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬಾಳು ಬಂಧನಕಾರಿ. ಕಟ್ಟಿದ ಬುತ್ತಿಯಾಗಲಿ ಕಲಿಕೆಯ ಮಾತಾಗಲಿ ಯಾವಾಗಲೂ ಶಾಶ್ವತವಲ್ಲ ಎಂದು ಬಾಳೆಹೊನ್ನೂರ ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಸಮೀಪದ ಅಬ್ಬಿಗೇರಿ ಗ್ರಾಮದ ಹಿರೇಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಂಸ್ಕೃತಿಕ ಸಭಾಭವನದಲ್ಲಿ ಗುರುವಾರ ಜರುಗಿದ 5 ಜೋಡಿ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ಧರ್ಮ ಭೂಮಿ ಎನಿಸಿದ ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಜೀವನ ವಿಕಾಸಕ್ಕೆ ಹಲವು ದಾರಿ. ಸತ್ಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಎತ್ತಿ ಹಿಡಿಯಲು ಈ ನಾಡಿನ ಮಠ ಮಂದಿರಗಳು ಕಾರ್ಯ ಮಾಡುತ್ತಾ ಬಂದಿವೆ. ದೇವಾಲಯ, ಮಠಗಳಲ್ಲಿ ಇಟ್ಟಿರುವ ನಂಬಿಕೆ ದೇವರಲ್ಲಿಟ್ಟಿರುವ ಶ್ರದ್ಧೆ ಅಪಾರವಾದದ್ದು. ಭಾರತೀಯ ಪರಂಪರೆಯಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳೆಂಬ ನಾಲ್ಕು ಆಶ್ರಮಗಳಿವೆ. ಹುಟ್ಟಿನಿಂದ ಸಾಯುವ ತನಕ ಧರ್ಮ ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸತಿ ಪತಿಗಳು ಪರಸ್ಪರ ನಂಬಿಕೆ ವಿಶ್ವಾಸದಿಂದ ಆದರ್ಶ ಬದುಕು ಕಟ್ಟಿಕೊಳ್ಳಬೇಕು. ಹಸಿರು ಬಳೆ, ಹಣೆಯ ಕುಂಕುಮ, ಮೂಗುನತ್ತು, ಕಾಲುಂಗರು, ಮಾಂಗಲ್ಯ ಕುರುಹುಗಳನ್ನು ಪಂಚಪೀಠಗಳು ಕೊಟ್ಟಿವೆ. ಇವುಗಳನ್ನು ಉಳಿಸಿ ಬೆಳಿಸಿಕೊಂಡ ಕೀರ್ತಿ ತಾಯಂದಿರಿಗೆ ಸಲ್ಲುತ್ತದೆ. ಸಮಾಜದಲ್ಲಿ ಆಗುತ್ತಿರುವ ದುಂದು ವೆಚ್ಚ ತಡೆಗಟ್ಟಲು ಸಾಮೂಹಿಕ ವಿವಾಹಗಳ ಅಗತ್ಯವಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಐಷಾರಾಮಿ ಮದುವೆಗಳ ಬದಲಾಗಿ, ಸಾಮೂಹಿಕ ಮುದುವೆಗಳತ್ತ ಗಮನ ಹರಿಸಬೇಕಾಗಿದೆ. ಇದರಿಂದ ಮದುವೆ ಜೊತಗೆ ಬಡವರಿಗೆ ಅನುಕೂಲವಾಗಲಿದೆ. ಪುಣ್ಯ ಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹ ನೆರವೇರಿದರೆ ದೈವದ ಅಭಯ ಇರುತ್ತದೆ ಎಂದರು.

ಅಬ್ಬಿಗೇರಿ ಹಿರೇಮಠದ ಶ್ರೀಗಳು, ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಸ್ವಾಮೀಜಿ, ಶಿರಕೊಳ್ಳದ ಗುರುಸಿದ್ಧೇಶ್ವರ ಸ್ವಾಮೀಜಿ, ಸುಳ್ಳ-ಹೂಲಿ ಪಂಚಗ್ರಹ ಹಿರೇಮಠದ ಶಿವಸಿದ್ರಾಮೇಶ್ವರ ಸ್ವಾಮೀಜಿ, ಸಂಗೋಳ್ಳಿಯ ಗುರುಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಅಂದಪ್ಪ ವೀರಾಪೂರ, ಡಾ. ಆರ್.ಕೆ. ಗಚ್ಚಿನಮಠ, ಮಂಜುನಾಥ ಬೇಲೆರಿ, ಮುತ್ತಪ್ಪ ಕುಕನೂರ, ವೀರಭ್ರಯ್ಯ ಹಿರೇಮಠ, ಶಿವಬಸಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.

ಬ್ರಹ್ಮಚಾರಿಯಾಗಿ ಸಾಧನೆ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು. ಗೃಹಸ್ಥಾಶ್ರಯದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ವಾನಪ್ರಸ್ಥ ಆಶ್ರಮದಲ್ಲಿ ಜೀವನದಲ್ಲಿ ಸಹಾಯ ಮಾಡಿದ ವ್ಯಕ್ತಿಗಳನ್ನು ಸ್ಮರಿಸಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟು ನಂತರ ಸನ್ಯಾಸಾಶ್ರಮದ ಮೂಲಕ ಮುಕ್ತಿ ಮಾರ್ಗ ಪಡೆಯುವುದು ಪದ್ಥತಿಯಾಗಿದೆ. |ಬಾಳೆಹೊನ್ನೂರಶ್ರೀರಂಭಾಪುರಿ
ಡಾ. ವೀರಸೋಮೇಶ್ವರ ಜಗದ್ಗುರುಗಳು