ಧರ್ಮ ನಿರ್ಧಾರಕ್ಕೆ ತಜ್ಞರ ಸಮಿತಿ ರಚನೆ

ಬೆಂಗಳೂರು: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಲಿಂಗಾಯತ ಧರ್ಮವಿವಾದದಲ್ಲಿ ಕೊನೆಗೂ ನೇರ ಪ್ರವೇಶ ಮಾಡಿರುವ ರಾಜ್ಯ ಸರ್ಕಾರ ಈ ಸಂಬಂಧ ನಿರ್ಧಾರ ಕೈಗೊಳ್ಳುವುದಕ್ಕಾಗಿ ಅಲ್ಪಸಂಖ್ಯಾತ ಆಯೋಗದ ಮೂಲಕ 7 ಜನರ ತಜ್ಞರ ಸಮಿತಿ ರಚಿಸಿ ಅಚ್ಚರಿ ಮೂಡಿಸಿದೆ. ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಶುಕ್ರವಾರ ಈ ಕುರಿತ ಆದೇಶ ಹೊರಡಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಅಧ್ಯಕ್ಷರಾಗಿದ್ದು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ರಾಜಕೀಯ ವಿಶ್ಲೇಷಕ ಮುಜಫರ್ ಅಸ್ಸಾದಿ, ಲೇಖಕ ಡಾ. ಸರಜೂ ಕಾಟ್ಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ನವದೆಹಲಿಯ ಜವಾಹರಲಾಲ್ ನೆಹರೂ ವಿವಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹಾಗೂ ಲೇಖಕ ರಾಮಕೃಷ್ಣ ಮರಾಠೆ ಸಮಿತಿ ಸದಸ್ಯರಾಗಿರಲಿದ್ದಾರೆ.

ಸಮಿತಿಯ ಕಾರ್ಯವೇನು?: ಅಲ್ಪಸಂಖ್ಯಾತ ಆಯೋಗದಿಂದ ರಚಿಸಲಾಗಿರುವ ತಜ್ಞರ ಸಮಿತಿ ಪ್ರತ್ಯೇಕ ಧರ್ಮ ಮನ್ನಣೆ ನೀಡಲು ಸಾಧ್ಯವಿರುವ ಅಂಶಗಳ ಅಧ್ಯಯನ ನಡೆಸಲಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೇಡಿಕೆ ಇಡುತ್ತಿರುವವರಿಂದ ಹಾಗೂ ಧಾರ್ವಿುಕ, ಕಾನೂನು ತಜ್ಞರಿಂದ ದಾಖಲೆ ಸಂಗ್ರಹಿಸುತ್ತದೆ. ಪ್ರತ್ಯೇಕ ಧರ್ಮ ಎಂಬುದಕ್ಕೆ ಸಂವಿಧಾನ, ನ್ಯಾಯಾಲಯಗಳ ತೀರ್ಪು ಸೇರಿದಂತೆ ವಿವಿಧೆಡೆ ಇರುವ ವ್ಯಾಖ್ಯಾನಗಳನ್ನು ಪರಿಶೀಲಿಸಲಾಗುತ್ತದೆ. ಪರಿಶೀಲನೆ ಬಳಿಕ ವರದಿ ನೀಡಬೇಕಿದೆ. ಒಂದು ತಿಂಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ವರದಿ ಆಧರಿಸಿ ಶಿಫಾರಸು

ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವಿಚಾರ ಕೇಂದ್ರ ಸರ್ಕಾರದ ಸುಪರ್ದಿಗೆ ಒಳಪಡುತ್ತದೆ. ಅಲ್ಪಸಂಖ್ಯಾತ ಆಯೋಗದ ಸಮಿತಿ ನೀಡುವ ವರದಿಯನ್ನು ರಾಜ್ಯ ಸರ್ಕಾರ ಪರಿಶೀಲನೆ ನಡೆಸಿ ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಕಳಿಸಬೇಕು. ಆ ಆಯೋಗವು ರಾಜ್ಯ ಸರ್ಕಾರದ ವರದಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ನಂತರ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಸ್ವಾತಂತ್ರಾ್ಯನಂತರದಲ್ಲಿ ಮುಸ್ಲಿಂ, ಕ್ರೖೆಸ್ತ, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯಗಳು ಅಲ್ಪಸಂಖ್ಯಾತ ಎಂದು ಸಂವಿಧಾನದಲ್ಲಿ ಸ್ಥಾನ ನೀಡಲಾಗಿತ್ತು. 1993ರಲ್ಲಿ ಕೇಂದ್ರ ಅಲ್ಪಸಂಖ್ಯಾತ ಆಯೋಗ ನೀಡಿದ್ದ ಶಿಫಾರಸಿನ ಆಧಾರದಲ್ಲಿ ಅಂದಿನ ಯುಪಿಎ ಸರ್ಕಾರ 2014ರಲ್ಲಿ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನ ನೀಡಿತ್ತು.

ರಾಜಕೀಯ ಲೆಕ್ಕಾಚಾರ ಆರಂಭ

ಪ್ರತ್ಯೇಕ ಧರ್ಮಕ್ಕಾಗಿ ಸಮುದಾಯದಲ್ಲಿ ಅನೇಕರು ಬೇಡಿಕೆ ಇಡುತ್ತಿದ್ದು, ಒಟ್ಟಿಗೆ ಬಂದು ಮನವಿ ಮಾಡಿದರೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರು. ಇಲ್ಲಿಯವರೆಗೆ 5 ಸಂಘ ಸಂಸ್ಥೆಗಳಿಂದ ಕೋರಿಕೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಅಲ್ಪಸಂಖ್ಯಾತ ಆಯೋಗದ ಮೂಲಕ ಸಮಿತಿ ರಚಿಸುವ ಮೂಲಕ, ಸಮಿತಿ ಒಪ್ಪಿದಲ್ಲಿ ಪ್ರತ್ಯೇಕ ಧರ್ಮ ನೀಡಲು ಶಿಫಾರಸು ಮಾಡಲು ತಾನು ಸಿದ್ಧ ಎಂಬ ಸಂದೇಶವನ್ನು ಸರ್ಕಾರ ನೀಡಿದೆ. ಈಗಾಗಲೆ ರಾಜ್ಯಾದ್ಯಂತ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಂಚಲನ, ಪ್ರತಿಭಟನೆಗೆ ಕಾರಣವಾಗಿದೆ. ಕಾಂಗ್ರೆಸ್ ಸಚಿವರು ಮುಂಚೂಣಿಯಲ್ಲಿದ್ದ್ದಾರಾದರೂ ವೀರಶೈವ ಮಹಾಸಭಾದಲ್ಲಿರುವ ಕಾಂಗ್ರೆಸ್ ನಾಯಕರೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ವೀರಶೈವ ಮಹಾಸಭಾ ಹಾಗೂ ಸಿದ್ದಗಂಗಾ ಶ್ರೀಗಳು ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂಬ ನಿಲುವನ್ನು ಬಿಜೆಪಿ ತಳೆದಿದ್ದು, ಸರ್ಕಾರದ ನಡೆಯಿಂದ ರಾಜ್ಯ ರಾಜಕೀಯದಲ್ಲಾಗುವ ಪರಿಣಾಮದ ಕುರಿತು ಕುತೂಹಲ ಮೂಡಿದೆ.

ಕೋಟ್:

ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದೆ. 7 ಜನರ ಸಮಿತಿಯು ಅಧ್ಯಯನ ನಡೆಸಿ ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ.

-ಎಸ್. ಅನೀಸ್ ಸಿರಾಜ್, ಕಾರ್ಯದರ್ಶಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ

ಸಮಿತಿಗೆ ರಂಭಾಪುರಿ ಶ್ರೀ ವಿರೋಧ

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಪರಿಶೀಲನೆಗೆ ಸಮಿತಿ ರಚಿಸಿರುವ ಸರ್ಕಾರದ ನಿರ್ಧಾರಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಕ್ಷೇಪಿಸಿದ್ದಾರೆ. ಮುಖ್ಯಮಂತ್ರಿಯವರು ತರಾತುರಿ ನಿರ್ಧಾರ ಕೈಗೊಂಡಿರುವುದು ತಪು್ಪ. ಚುನಾವಣೆ ಸಮೀಪ ಇರುವಾಗ ಸಿದ್ದರಾಮಯ್ಯ ಅವರಿಗೆ ಆತುರ ಏಕೆ? ಸಮಿತಿಯಲ್ಲಿರುವ ಸದಸ್ಯರಿಗೆ ವೀರಶೈವ ಲಿಂಗಾಯತ ತತ್ವ, ಸಿದ್ಧಾಂತಗಳಲ್ಲಿ ಎಷ್ಟರಮಟ್ಟಿಗೆ ಜ್ಞಾನವಿದೆ? ಸಮುದಾಯದ ಕುರಿತು ಇರುವ ಅಧಿಕೃತ ಸಂಸ್ಥೆ ವೀರಶೈವ ಮಹಾಸಭಾ ಅಭಿಪ್ರಾಯವನ್ನೂ ಕೇಳದೆ ಸಮಿತಿ ರಚನೆ ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *