ಧರ್ಮ ಕಿಡಿ ಸ್ಫೋಟ

ಬೆಂಗಳೂರು: ಲಿಂಗಾಯತ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು 7 ಜನ ತಜ್ಞರ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಧರ್ಮ ವಿವಾದಕ್ಕೆ ಕೈಹಾಕುವ ಮೂಲಕ ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆದಿದೆ ಎಂಬ ಅಸಮಾಧಾನ ಆಡಳಿತಾರೂಢ ಕಾಂಗ್ರೆಸ್​ನಲ್ಲೇ ದನಿಪಡೆದುಕೊಂಡಿದೆ. ಮತ್ತೊಂದೆಡೆ ಸಮಿತಿ ರಚನೆ ನಿರ್ಧಾರದ ವಿರುದ್ಧ ವೀರಶೈವ ಮಠಾಧೀಶರು ಸಿಡಿದೆದ್ದಿರುವುದು ಹೋರಾಟದ ಕಾವು ರಾಜ್ಯವಾಪಿ ವಿಸ್ತರಿಸುವ ಸ್ಪಷ್ಟ ಸುಳಿವು ನೀಡಿದೆ.

ಲಿಂಗಾಯತ ಹಾಗೂ ವೀರಶೈವ ಸಮುದಾಯದವರು ಒಟ್ಟಾಗಿ ಬಂದರಷ್ಟೇ ಮುಂದಿನ ಹೆಜ್ಜೆ ಇಡುತ್ತೇವೆ ಎಂಬ ನಿಲುವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ್ದಾಗಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ದಿಢೀರ್ ನಿಲುವು ಬದಲಿಸಿರುವ ಸರ್ಕಾರ ಪ್ರತ್ಯೇಕ ಧರ್ಮ ರಚನೆಗೆ ವೇದಿಕೆ ಸೃಷ್ಟಿಸುತ್ತಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.

ರಾಜಭವನಕ್ಕೆ ವಿವಾದ

ಸರ್ಕಾರದ ನಿಲುವನ್ನು ಕಟು ಶಬ್ದಗಳಿಂದ ಟೀಕಿಸಿರುವ ರಂಭಾಪುರಿ ಶ್ರೀಗಳು, ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರದ ನಿರ್ಣಯಕ್ಕೆ ತಡೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಗದಗಿನಲ್ಲಿ ಭಾನುವಾರ ನಡೆಯುವ ವೀರಶೈವ- ಲಿಂಗಾಯತ ಸಮಾವೇಶದಲ್ಲಿಯೂ ಈ ವಿಚಾರ ಪ್ರತಿಧ್ವನಿಸುವ ಸಾಧ್ಯತೆಯಿದೆ.

ಸಮಿತಿಗೆ ಮಹಾಸಭಾ ವಿರೋಧ

ನ್ಯಾ.ನಾಗಮೋಹನ್​ದಾಸ್ ನೇತೃತ್ವದ ಸಮಿತಿ ರಚನೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಸಮಿತಿ ರಚನೆ ಸಾಂವಿಧಾನಿಕವಾಗಿ ಸರಿ ಇದೆಯೇ? ಸಮಿತಿಯಲ್ಲಿರುವವರು ಇಲ್ಲಿಯವರೆಗೆ ಪ್ರತಿಪಾದಿಸಿಕೊಂಡು ಬಂದಿರುವ ವಿಚಾರವನ್ನು ಗಮನಿಸಿದರೆ ಕೊಡುವ ವರದಿ ಹೇಗಿರುತ್ತದೆ ಎಂದು ಈಗಲೇ ತಿಳಿಯಬಹುದಾಗಿದೆ. ಈ ಸಮಿತಿಯಲ್ಲಿರುವ ಬಹುತೇಕರು ತಮ್ಮ ಅಭಿಪ್ರಾಯವನ್ನು ಒಂದು ವರ್ಗದ ಪರ ನೀಡಿದ್ದಾರೆ. ಇಂಥವರಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂದು ಮಹಾಸಭಾದ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತ ಆಯೋಗ ಸಮಿತಿ ರಚಿಸುವ ಮುನ್ನ ಶಿಷ್ಟಾಚಾರಕ್ಕಾದರೂ ವಿಚಾರಿಸಿ ತೀರ್ಮಾನ ಮಾಡಿದೆಯೇ? ಏಕಮುಖವಾಗಿ ರಚಿಸಿದ ಇಂತಹ ಸಮಿತಿಯು ಸಹಜ ನ್ಯಾಯ, ಧರ್ಮಕ್ಕೆ ವಿರುದ್ಧವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಸಮಾಜ ಒಡೆಯುವ ಅಥವಾ ಒಡಕುಂಟು ಮಾಡುವ ಯಾವುದೇ ಶಕ್ತಿಗಳನ್ನು ಮಹಾಸಭಾ ಸಹಿಸುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಇದಕ್ಕೆ ಉತ್ತರ ನೀಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಜನವರಿಯಲ್ಲಿ ಮೊದಲ ಸಭೆ

ಸರ್ಕಾರ ರಚಿಸಿರುವ ತಜ್ಞರ ಸಮಿತಿ ಮೊದಲ ಸಭೆ 2018ರ ಜನವರಿ ಮೊದಲ ವಾರದಲ್ಲಿ ನಡೆಯಲಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ಐದು ಪ್ರತ್ಯೇಕ ಮನವಿಗಳ ಕುರಿತು ಪರಿಶೀಲನೆ ನಡೆಸಲು ಅಲ್ಪಸಂಖ್ಯಾತ ಇಲಾಖೆ ನೀಡಿದ ದಾಖಲೆ ಆಧಾರದಲ್ಲಿ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಶುಕ್ರವಾರ ಸಮಿತಿ ರಚನೆಗೆ ಒಪ್ಪಿಗೆ ನೀಡಿದ್ದಾರೆ. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಆನಂತರ ಸರ್ಕಾರಿ ಆದೇಶ ಹೊರಡಿಸಬೇಕಿದೆ. ಕ್ರಿಸ್​ವುಸ್ ರಜೆಗಳು ಹಾಗೂ ವರ್ಷಾಂತ್ಯವಾದ್ದರಿಂದ ಜನವರಿ ಮೊದಲ ವಾರದಲ್ಲಿ ಮೊದಲ ಸಭೆ ಆಯೋಜನೆಯಾಗುವುದು ಬಹುತೇಕ ಖಚಿತ ಎಂದು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲರನ್ನೂ ಖುಷಿಪಡಿಸಲಾಗದು

ಸಮಿತಿ ರಚನೆಯನ್ನು ಸಮಿತಿ ಅಧ್ಯಕ್ಷ ನ್ಯಾ. ನಾಗಮೋಹನದಾಸ್ ಸಮರ್ಥಿಸಿಕೊಂಡಿದ್ದಾರೆ. ಇದು ರಾಜಕೀಯವಾಗಿಯೂ ತಿರುವು ಪಡೆದಿರುವ ಕಾರಣ ಮತ್ತಷ್ಟು ಸವಾಲಾಗಿದೆ. ಸಮಿತಿಗೆ ಆಯ್ಕೆಯಾಗಿರುವ ಸದಸ್ಯರು ಅನುಭವ ಹೊಂದಿದ್ದಾರೆ. ಅಗತ್ಯ ಬಿದ್ದರೆ ಇನ್ನಿತರ ತಜ್ಞರನ್ನೂ ಸಂರ್ಪಸಲಾಗುತ್ತದೆ. ಪರ, ವಿರೋಧ ಇರುವ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸಮಿತಿಯೆದುರು ಸಾರ್ವಜನಿಕರೂ ಅಭಿಪ್ರಾಯ ತಿಳಿಸಬಹುದು. ಕಾನೂನು, ಧಾರ್ವಿುಕ, ಚಾರಿತ್ರಿಕ ಹಾಗೂ ಸಮಾಜದ ಹಿತದೃಷ್ಟಿ ಸೇರಿ ಅನೇಕ ಕೋನಗಳಿಂದ ಸಮಿತಿ ಅಧ್ಯಯನ ನಡೆಸಬೇಕಿದೆ. ಸಂವಿಧಾನ, ವಿವಿಧ ಕಾನೂನುಗಳು ಏನು ಹೇಳುತ್ತವೆ ಎಂಬುದನ್ನೂ ಪರಿಶೀಲಿಸಬೇಕಿದೆ. ನಾಲ್ಕು ವಾರದಲ್ಲಿ ವರದಿ ನೀಡಲು ತಿಳಿಸಲಾಗಿದೆ. ಅವಶ್ಯಕತೆ ಬಿದ್ದರೆ ವಿಸ್ತರಣೆ ಮಾಡಿಕೊಳ್ಳಬಹುದು. ಆದರೆ ಎಲ್ಲರನ್ನೂ ಖುಷಿಪಡಿಸಿ ವರದಿ ನೀಡುವುದು ಕಷ್ಟಸಾಧ್ಯ ಎಂದಿದ್ದಾರೆ.

ಪ್ರತ್ಯೇಕ ಮನವಿ ಸಲ್ಲಿಕೆ

ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಪ್ರತ್ಯೇಕವಾಗಿ ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗಿವೆ. ಮನವಿಗಳು ಹಾಗೂ ಈ ಕುರಿತು ಚರ್ಚೆಯಾಗುತ್ತಿರುವ ವಿಚಾರಗಳಲ್ಲಿ ಸಮಿತಿ ಸರ್ಕಾರಕ್ಕೆ ಅಭಿಪ್ರಾಯ ನೀಡಬೇಕಿದೆ. ಲಿಂಗಾಯತ, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ವಿವಿಧ ಗುಂಪುಗಳು, ವ್ಯಕ್ತಿಗಳನ್ನು ಸಂರ್ಪಸಿ ಸಮಿತಿ ಪರಿಶೀಲನೆ ನಡೆಸಬೇಕು. ಆಯೋಗಕ್ಕೆ ವರದಿ ಸಲ್ಲಿಕೆಯಾದ ನಂತರ ಸರ್ಕಾರಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಎಸ್. ಅನೀಸ್ ಶಿರಾಜ್ ತಿಳಿಸಿದ್ದಾರೆ.

ಬಿಜೆಪಿ ರಕ್ಷಣಾತ್ಮಕ ನಡೆ

ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಸಮುದಾಯವನ್ನು ಒಡೆಯುವ ಕಾರ್ಯಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ವೀರಶೈವ ಮಹಾಸಭಾ ಹಾಗೂ ಸಿದ್ದಗಂಗಾ ಶ್ರೀಗಳ ಮಾತಿಗೆ ನಮ್ಮ ಒಪ್ಪಿಗೆಯಿದೆ. ಸಮುದಾಯ ಒಡೆಯುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಶವಪೆಟ್ಟಿಗೆಗೆ ಹೊಡೆಯುತ್ತಿರುವ ಕೊನೆಯ ಮೊಳೆಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸರ್ಕಾರದ ತಂತ್ರವೇನು?

# ಚುನಾವಣೆ ಸಂದರ್ಭದಲ್ಲಿ ಸಮಿತಿ ವರದಿ ಆಧರಿಸಿ ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಧರ್ಮದ ವಿಚಾರವನ್ನು ಕೇಂದ್ರಕ್ಕೆ ಶಿಫಾರಸು ಮಾಡುವುದು

# ಈ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ದೂಡುವುದು ಹಾಗೂ ಬಿಜೆಪಿಯ ಮತಬ್ಯಾಂಕ್ ಒಡೆಯುವುದು

ಮುಂದೇನಾಗಲಿದೆ

# ಸಮಿತಿ ಸರ್ಕಾರಕ್ಕೆ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಶಿಫಾರಸು ಮಾಡಲಿದೆ

# ಈ ವರದಿ ಆಧರಿಸಿ ರಾಜ್ಯ ಸರ್ಕಾರವು ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ವರದಿ ಸಲ್ಲಿಸಲಿದೆ

# ಈ ವರದಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಅಗತ್ಯವಿರುವ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯ ವರದಿಯನ್ನೂ ನೀಡಬೇಕು

# ಕೇಂದ್ರ ಸರ್ಕಾರವು ಇದನ್ನು ಪರಿಗಣಿಸಿ ಕಾನೂನಿನಲ್ಲಿ ಅವಕಾಶವಿದ್ದರೆ ಸ್ಥಾನಮಾನ ನೀಡಲಿದೆ.

 

ಬಾಯಿ ಮುಚ್ಚಿಸಿದ ಪರಂ

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಸಮುದಾಯದ ಪ್ರಮುಖ ಶ್ರೀಗಳು ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರೆ, ಕಾಂಗ್ರೆಸ್ ಒಳಗೂ ಬೇಗುದಿ ಆರಂಭವಾಗಿದೆ. ಚುನಾವಣೆ ವರ್ಷದಲ್ಲಿ ಇಂತಹ ತೀರ್ಮಾನ ಪಕ್ಷಕ್ಕೆ ತೊಡಕಾಗಬಹುದು ಎಂದು ಕಾಂಗ್ರೆಸ್​ನ ಒಂದು ವರ್ಗ ಹೇಳುತ್ತಿದೆ. ಸರ್ಕಾರದ ತೀರ್ವನವನ್ನು ಬಹಿರಂಗವಾಗಿ ಟೀಕಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಸಮಿತಿ ರಚನೆ ಹಾಗೂ ಧರ್ಮ ಮಾನ್ಯತೆ ವಿಚಾರದಲ್ಲಿ ಪಕ್ಷದ ಯಾವುದೇ ಮುಖಂಡರು ಹೇಳಿಕೆ ನೀಡಬಾರದು ಎಂದು ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಫರ್ವನು ಹೊರಡಿಸಿದ್ದಾರೆ.

ಇಂದು ನಿರ್ಣಾಯಕ ಸಮಾವೇಶ

ಗದುಗಿನ ವಿಡಿಎಸ್ ಮೈದಾನದಲ್ಲಿ ಡಿ. 24ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಗುರುವಿರಕ್ತರ ಸಮನ್ವಯ ವೀರಶೈವ ಲಿಂಗಾಯತ ಬೃಹತ್ ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚು ಮಠಾಧೀಶರು, ಮೂರು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧವಿದೆ ಎಂಬ ಸ್ಪಷ್ಟ ನಿಲುವನ್ನು ಮತ್ತೊಮ್ಮೆ ಘೊಷಿಸುವುದು ಹಾಗೂ ವೀರಶೈವ ಲಿಂಗಾಯತ ಒಂದೇ ಎಂದು ಒಕ್ಕೊರಲಿನ ಸಂದೇಶ ರವಾನಿಸುವುದು ಸಮಾವೇಶದ ಮುಖ್ಯ ಉದ್ದೇಶ.

ಲಿಂಗಾಯತ ಸಮುದಾಯವನ್ನಷ್ಟೇ ಅಲ್ಪಸಂಖ್ಯಾತರ ಘಟಕಕ್ಕೆ ಸೇರಿಸುವಂತಹ ಸಮಿತಿ ಮಾಡಿರುವುದು ಸರ್ಕಾರದ ಪಕ್ಷಪಾತ ಧೋರಣೆಯಾಗಿದೆ. ಎಲ್ಲರ ಒಗ್ಗಟ್ಟಿನ ವಿಚಾರ ಬಂದ ಮೇಲೆ ಮುಂದೆ ಮಾತನಾಡುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಏಕಾಏಕಿ ಸಮಿತಿ ರಚಿಸಿರುವುದು ಸರಿಯಾದ ಕ್ರಮವಲ್ಲ. ಗದಗ ಸಮಾವೇಶ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಉತ್ತರ ನೀಡಲಿದೆ.

| ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

Leave a Reply

Your email address will not be published. Required fields are marked *