ಧರ್ಮಮೂರ್ತಿ ಶ್ರೀರಾಮ

‘ಅಯೋಧ್ಯೆಯಲ್ಲಿ ರಾಮಮಂದಿರ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿಯೇ ಈ ವಿವಾದಕ್ಕೆ ಪರಿಹಾರ ಕೈಗೊಳ್ಳಲಾಗುತ್ತದೆ’ ಎಂಬುದು ನಾಥಪಂಥದ ಹಿನ್ನೆಲೆಯ ಸಂನ್ಯಾಸಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಖಚಿತ ನುಡಿ. ಅವರು ನಿರ್ವಿುಸಲು ಉದ್ದೇಶಿಸಿರುವ 151 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆಯ ಬಗೆಗಿನ ವಿವರಗಳು ಇಲ್ಲಿವೆ.

| ಮಿಲಿಂದ್‌ ಪರಾಂಜಪೆ

ಯಾವುದೇ ಬಗೆಯ ಆದರ್ಶದ ಮಾತು ಪ್ರಸ್ತಾಪವಾದಾಗಲೂ ಅದಕ್ಕೆ ರೂಪಕವಾಗಿ ಒದಗಿಬರುವ ಮಹಾಪುರುಷ ಶ್ರೀರಾಮ. ಏಕೆಂದರೆ ಆತ ಎಲ್ಲ ಮೌಲ್ಯಾದರ್ಶಗಳೂ ಸೇರಿ ಮೈಗೂಡಿದ ಮಹಾಪುರುಷ. ಅದಕ್ಕೆಂದೇ ರಾಮಾಯಣದಲ್ಲಿ ಮಾರೀಚ ಆಡುವ ಮಾತು ‘ರಾಮೋ ವಿಗ್ರಹವಾನ್ ಧರ್ಮಃ | ಅರಣ್ಯಕಾಂಡ: 37.13 – (ರಾಮನು ಧರ್ಮದ ಸಾಕಾರಮೂರ್ತಿ ಎಂಬ ಬಿರುದು).

ರಾಮರಾಜ್ಯ ಎಂದರೆ ಎಲ್ಲರೂ ಸುಖ-ಸಂತೋಷದಿಂದ ಇರುವ ರಾಜ್ಯ ಎಂಬ ಆದರ್ಶ ರೂಪುಗೊಂಡಿದೆ. ರಾಮಬಾಣ, ರಾಮರಕ್ಷೆ, ರಾಮರಾಜ್ಯ ಮುಂತಾದ ಪರಿಕಲ್ಪನೆಗಳೆಲ್ಲ ಶ್ರೀರಾಮನ ಸಾಮರ್ಥ್ಯವನ್ನೂ, ಆದರ್ಶಪಾಲನೆಯನ್ನೂ, ಪ್ರಜಾಪ್ರೀತಿಯನ್ನೂ ಕಂಡು ಸೃಷ್ಟಿಯಾದಂಥವು. ಅಸಾಮಾನ್ಯ ಪರಾಕ್ರಮಿಯಾದರೂ ಜನ ಅವನನ್ನು ಗೌರವದಿಂದ ಸ್ಮರಿಸುವುದು ಆತನ ಧರ್ಮಪರಿಪಾಲನೆಗಾಗಿ. ಎಲ್ಲ ಆಧುನಿಕ ಆಡಳಿತಗಾರರಿಗೂ ಅತ್ಯಂತ ಪ್ರಸ್ತುತವೆನಿಸುವ ಮೌಲ್ಯಗಳ ಮೂರ್ತಿ ಶ್ರೀರಾಮ. ಅಣ್ಣ ರಾವಣನ ದುರಾಡಳಿತವನ್ನು ತಿರಸ್ಕರಿಸಿ ರಾಮನಿಗೆ ಶರಣಾಗಿದ್ದವನು ವಿಭೀಷಣ. ರಾವಣ ವಧೆಯ ನಂತರ ಸಮಸ್ತ ಲಂಕೆಯನ್ನೂ ಆತ ರಾಮನಿಗೆ ಅರ್ಪಿಸಿ, ‘ನೀವು ಇಲ್ಲೇ ಇದ್ದುಬಿಡಿ’ ಎಂದು ಬೇಡಿಕೊಂಡ. ಆಗ ಶ್ರೀರಾಮ ಹೇಳಿದ ಒಂದು ಮಾತು ಇಂದಿಗೂ ಸ್ಮರಣೀಯ. ಅದು ಹೀಗಿದೆ:

‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

‘ಲಂಕೆಯ ಎಲ್ಲವೂ ಬಂಗಾರವಾದರೂ ನನಗದು ರುಚಿಸದು. ಏಕೆಂದರೆ, ಹೆತ್ತ ತಾಯಿ ಮತ್ತು ನಮ್ಮನ್ನು ಹೊತ್ತ ಜನ್ಮಭೂಮಿ ಎಂದೆಂದಿಗೂ ಸ್ವರ್ಗಕ್ಕಿಂತ ಮಿಗಿಲು’

ಹೌದು, ಶ್ರೀರಾಮ ಸ್ವರ್ಗಕ್ಕಿಂತಲೂ ಮಿಗಿಲು ಎಂದು ಪರಿಭಾವಿಸಿದ ಜನ್ಮಭೂಮಿ ಅಯೋಧ್ಯೆ. ಅಲ್ಲಿನ ಸರಯೂ ನದಿದಡದಲ್ಲಿ 330 ಕೋಟಿ ರೂ. ವೆಚ್ಚದಲ್ಲಿ 151 ಮೀಟರ್ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ನಿರ್ವಿುಸುವ ದೊಡ್ಡ ಕನಸನ್ನು ಕಂಡವರು ನಾಥಪಂಥದ ಸಂನ್ಯಾಸಿ, ಉತ್ತರ ಪ್ರದೇಶ ಮುಖ್ಯಮಂತ್ರಿಯೂ ಆಗಿರುವ ಯೋಗಿ ಆದಿತ್ಯನಾಥ್.

ಗುಜರಾತ್​ನಲ್ಲಿ ನಿರ್ಮಾಣ ಮಾಡಿರುವ ಏಕತಾ ಪ್ರತಿಮೆಯ ಮಾದರಿಯಲ್ಲಿಯೇ ಉತ್ತರ ಪ್ರದೇಶದಲ್ಲಿ ಶ್ರೀರಾಮನ ಭವ್ಯ ಮೂರ್ತಿ ತಲೆ ಎತ್ತಲಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯಡಿ ನಿರ್ವಣಗೊಳ್ಳಲಿರುವ ವಿಗ್ರಹದ ಬಗ್ಗೆ ದೀಪಾವಳಿಯ ಬಳಿಕ ಆದಿತ್ಯನಾಥ್ ಅಧಿಕೃತವಾಗಿ ಘೊಷಿಸಲಿದ್ದಾರೆ ಎಂದಿದ್ದರು ಅಯೋಧ್ಯಾ ನಗರದ ಮೇಯರ್ ಋಷಿಕೇಶ್ ಉಪಾಧ್ಯಾಯ. ಫೈಝಾಬಾದ್​ಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ಮರುದಿನವೇ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಪ್ರತಿಮೆ ನಿರ್ಮಾಣ ಮಾಡುವುದಾಗಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಘೊಷಿಸಿಯೇಬಿಟ್ಟರು.

‘ಶ್ರೀರಾಮನೇ ಅಯೋಧ್ಯೆಯ ಗುರುತು. ಈ ಪ್ರತಿಮೆ ಐತಿಹಾಸಿಕ ನಗರದ ಲಾಂಛನವಾಗಿ ಪ್ರವಾಸಿಗರನ್ನು ಸೆಳೆಯಲಿದೆ. ಶ್ರೀರಾಮನ ದರ್ಶನ ಮತ್ತು ಅರ್ಚನೆಗಾಗಿ ಜನರು ಅಯೋಧ್ಯೆಗೆ ಬರುತ್ತಿದ್ದು, ಪ್ರತಿಮೆ ನಿರ್ವಣದಿಂದ ಅವರ ಉದ್ದೇಶ ಈಡೇರುತ್ತದೆ. ದೊಡ್ಡದಾದ ರಾಮನ ಪ್ರತಿಮೆಯನ್ನು ದೂರದಿಂದಲೇ ವೀಕ್ಷಿಸಲು ಸಾಧ್ಯವಾಗುವಂತೆ ಈ ನಿರ್ಧಾರ ಕೈಗೊಂಡಿದ್ದೇವೆ. ಅಲ್ಲದೆ ಶ್ರೀರಾಮನ ಪ್ರತಿಮೆಯ ವಿನ್ಯಾಸವನ್ನು ಅಂತಿಮಗೊಳಿಸಿದ್ದೇವೆ. ಅಯೋಧ್ಯೆಯಲ್ಲಿ ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಎರಡರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಮಗೆ ಪ್ರತಿಮೆ ನಿರ್ವಣದ ಬಗ್ಗೆ ಒಂದಷ್ಟು ಉಪಾಯಗಳು ಹೊಳೆದಿವೆ.

ನಿರ್ವಣದ ಭಾಗಶಃ ಆರ್ಥಿಕ ಸಂಪನ್ಮೂಲವನ್ನು ಸಾರ್ವಜನಿಕ ದೇಣಿಗೆಯಿಂದ ಸಂಗ್ರಹಿಸಲಾಗುವುದು’ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಶ್ರೀರಾಮನ ಪ್ರತಿಮೆಯ ಅಡಿಪಾಯ 50 ಮೀಟರ್ ಇರಲಿದೆ. ಹೀಗಾಗಿ ಪ್ರತಿಮೆಯ ಒಟ್ಟು ಎತ್ತರ 201 ಮೀಟರ್ ಆಗುವ ಸಾಧ್ಯತೆ ಇದೆ. ಪ್ರತಿಮೆಯ ವಿನ್ಯಾಸ, ವಾಸ್ತುಶಿಲ್ಪ ತಯಾರಿಕೆಗೆ ಅಂದಾಜು 775 ಕೋಟಿ ಮೌಲ್ಯದ ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಈಗಾಗಲೇ ಕೊಚ್ಚಿ, ಗ್ರೇಟರ್ ನೋಯ್ಡಾ ಮತ್ತು ಲಖನೌ ಮೂಲದ ಐದು ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಹಲವು ಕಂಪನಿಗಳು ಯೋಗಿ ಆದಿತ್ಯನಾಥರ ಸಮ್ಮುಖದಲ್ಲಿ ವಿನ್ಯಾಸವನ್ನು ಪ್ರಸ್ತುತಪಡಿಸಿವೆ. ನಿರ್ವಣತಂತ್ರಜ್ಞರು ಹಲವು ವಿನ್ಯಾಸಗಳ ಮಾದರಿಯನ್ನು ನೀಡಿ ಸಲಹೆ ಕೊಟ್ಟಿದ್ದಾರೆ. ಇದರಲ್ಲಿ 151 ಮೀಟರ್ ಎತ್ತರದ ಪ್ರತಿಮೆಗೆ ಹೊಂದುವಂತಹ ವಿನ್ಯಾಸವನ್ನು ಅಂತಿಮಗೊಳಿಸಿ ತಿಳಿಸಲಾಗುವುದು ಎಂಬ ಮಾಹಿತಿ ನೀಡಿದವರು ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮದ (ಯುಪಿಆರ್​ಎನ್​ಎನ್) ಹಿರಿಯ ಅಧಿಕಾರಿ.

ಮರುನಾಮಕರಣ: ನರಕ ಚತುರ್ದಶಿಯಂದು ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಫೈಜಾಬಾದ್ ಮತ್ತು ಅಯೋಧ್ಯೆ ಅವಳಿ ನಗರಗಳಾಗಿದ್ದು, ಎರಡೂ ನಗರಗಳಿಗೆ ಒಂದೇ ಮಹಾನಗರ ಪಾಲಿಕೆ ಇದೆ. ಜಿಲ್ಲಾಕೇಂದ್ರವಾದ ಫೈಜಾಬಾದ್ ಹೆಸರೇ ಜಿಲ್ಲೆಗೂ ಇತ್ತು. ಈಗ ಇದನ್ನು ಅಯೋಧ್ಯೆ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ. ಅಯೋಧ್ಯೆ ಸಮೀಪ ಶ್ರೀರಾಮನ ಹೆಸರಿನಲ್ಲೇ ಹೊಸ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಬಯಸಿರುವ ಆದಿತ್ಯನಾಥ್, ಶ್ರೀರಾಮನ ತಂದೆ ದಶರಥ ಮಹಾರಾಜನ ಹೆಸರಿನಲ್ಲಿ ‘ರಾಜಾ ದಶರಥ್’ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಿದ್ದಾರೆ.

ವಕ್ಪ್ ಮಂಡಳಿಯ ಉಡುಗೊರೆ

ಶ್ರೀರಾಮನ ವಿಗ್ರಹ ಸ್ಥಾಪನೆಯ ನಿರ್ಧಾರವನ್ನು ಸ್ವಾಗತಿಸಿರುವ ಉತ್ತರಪ್ರದೇಶದ ಶಿಯಾ ವಕ್ಪ್ ಮಂಡಳಿ ರಾಮನ ಮೂರ್ತಿಗಾಗಿ ಹತ್ತು ಬೆಳ್ಳಿ ಬಾಣಗಳನ್ನು ಉಡುಗೊರೆಯಾಗಿ ನೀಡಲು ಬಯಸಿದೆ. ಈ ಬಗ್ಗೆ ಆದಿತ್ಯನಾಥ್​ಗೆ ಪತ್ರ ಬರೆದಿರುವ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ, ‘ಶ್ರೀರಾಮನಿಗೆ ಶಿಯಾಗಳ ಪರವಾಗಿ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ಬೆಳ್ಳಿಯ ಬಾಣಗಳನ್ನು ನೀಡಲಾಗುತ್ತಿದೆ’ ಎಂದಿದ್ದಾರೆ. ಶ್ರೀರಾಮ ಬಾಣಗಳಿಂದ ರಾಕ್ಷಸರನ್ನು ಸಂಹಾರ ಮಾಡಿದ ರೀತಿಯಲ್ಲೇ ಈ ಬಾಣಗಳು ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಸೂಚಿಸುತ್ತದೆ. ರಾಮ ತನ್ನ ಬಾಣದಿಂದ ರಾಕ್ಷಸರನ್ನು ನಾಶ ಮಾಡಿದಂತೆಯೇ ಭಾರತ ಭಯೋತ್ಪಾನೆಯಿಂದ ಮುಕ್ತವಾಗುತ್ತದೆ ಎಂದು ಶಿಯಾ ಸಮುದಾಯ ಅಪೇಕ್ಷಿಸುತ್ತದೆ ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ದೇಶದ ಹಿಂದೂಗಳ ಕನಸು. ನಿಮ್ಮೆಲ್ಲರ ಬಯಕೆಯನ್ನು ಹಬ್ಬ ಮುಗಿದ ಬಳಿಕ ಈಡೇರಿಸಲಿದ್ದೇವೆ. ಪ್ರಭು ಶ್ರೀರಾಮನ ಆಶೀರ್ವಾದ ನಮ್ಮ ಮೇಲಿದೆ. ಹೀಗಾಗಿ ಉತ್ತರಪ್ರದೇಶ ಸರ್ಕಾರವೇ ಪ್ರಭುವಿನ ಮಂದಿರ ಕಾರ್ಯ ಶುರು ಮಾಡಲಿದೆ. ನೀವೂ ಕೂಡ ದೇವರಲ್ಲಿ ಮಂದಿರ ನಿರ್ಮಾಣ ಕಾರ್ಯ ಈಡೇರಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ.

| ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ, ಉತ್ತರ ಪ್ರದೇಶ (ರಾಜಸ್ಥಾನದ ಸಮಾರಂಭವೊಂದರಲ್ಲಿ ಹೇಳಿದ್ದು)

ರಾಮಾಯಣ ಕಾಲದ ಪುರಾಣ ಪ್ರಸಿದ್ಧ ನಗರಗಳನ್ನು ಸಂರ್ಪಸುವ, ಶ್ರೀರಾಮಚಂದ್ರ ಸಾಗಿದ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲು ರಾಮಾಯಣ ಎಕ್ಸ್​ಪ್ರೆಸ್​ಗೆ ನವೆಂಬರ್ 14ರಿಂದ ಚಾಲನೆ ದೊರೆತಿದೆ. ದೆಹಲಿಯ ಸಫ್ದರ್​ಜಂಗ್ ರೈಲ್ವೆ ನಿಲ್ದಾಣ, ತಮಿಳುನಾಡಿನ ಮಧುರೈನಿಂದ ಏಕಕಾಲಕ್ಕೆ ಚಾಲನೆ ಸಿಗಲಿದೆ. 16 ದಿನಗಳ ಈ ಟೂರ್ ಪ್ಯಾಕೇಜ್​ನಲ್ಲಿ ಶ್ರೀರಾಮನ ಕಾಲದ ನಗರಗಳನ್ನು ವೀಕ್ಷಿಸಬಹುದಾಗಿದೆ. ಭಾರತವಲ್ಲದೆ ಶ್ರೀಲಂಕಾದ ನಗರಕ್ಕೂ ಸಂಪರ್ಕ ಸಿಗಲಿದೆ. ಶ್ರೀ ರಾಮಾಯಣ ಯಾತ್ರಾ-ಶ್ರೀಲಂಕಾ ಯಾತ್ರೆ ವಿಶೇಷ ರೈಲಿನಲ್ಲಿ 800 ಮಂದಿ ಸಂಚರಿಸಬಹುದು. 5 ರಾತ್ರಿ/ 6 ದಿನಗಳ ಶ್ರೀಲಂಕಾ ಟೂರ್ ಪ್ಯಾಕೇಜ್ ಒಬ್ಬ ಪ್ರಯಾಣಿಕರಿಗೆ 36,970 ರೂ.ಗಳಷ್ಟಿದೆ.