ಧರ್ಮದ ಹಾದಿಯಲ್ಲಿ ಸಿಗುವ ಅಪರೂಪದ ಮೌಲ್ಯಗಳನ್ನು ಪಾಲಿಸಿದರೆ ಮಾತ್ರ ಜೀವನ ಸಾರ್ಥಕ

ಶೃಂಗೇರಿ: ಧರ್ಮ ಎಂದರೆ ಸಂಸ್ಕೃತಿ ಹಾಗೂ ತತ್ವಜ್ಞಾನಗಳು ಇರುವ ಅಧ್ಯಾತ್ಮ ಸಾಗರ ಎಂದು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.

ನರಸಿಂಹವನದ ಗುರು ನಿವಾಸದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಂಘ ಆಯೋಜಿಸಿದ್ದ ವಸ್ತ್ರಕಾಣಿಕೆ, ಸಮಷ್ಟಿಭಿಕ್ಷಾವಂದನೆ, ಪಾದ ಪೂಜೆ ಧಾರ್ವಿುಕ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮದಲ್ಲಿ ಸಾಮಾನ್ಯ ಹಾಗೂ ವಿಶೇಷ ಧರ್ಮ ಎಂಬ ಎರಡು ವಿಧಗಳಿವೆ. ಪ್ರತಿಯೊಬ್ಬ ವ್ಯಕ್ತಿ ಮಾಡುವ ಸಾಮಾನ್ಯ ಧರ್ಮವು ಸತ್ಯ, ಅಹಿಂಸೆ ಬೋಧಿಸುತ್ತದೆ. ಜೀವನದಲ್ಲಿ ಅತಿಯಾಸೆ ಪಡಬಾರದು ಎಂಬ ನಿರ್ದೇಶನ ನೀಡುತ್ತದೆ. ವಿಶೇಷ ಧರ್ಮಗಳು ಬ್ರಹ್ಮಚಾರಿ, ಗೃಹಸ್ಥ ಹಾಗೂ ಸನ್ಯಾಸಿಗಳಿಗೆ ಸಂಬಂಧಿಸಿವೆ. ಸನ್ಯಾಸಿ ಧರ್ಮವನ್ನು ಬ್ರಹ್ಮಚಾರಿಗಳು ಅನುಸರಿಸಲಾಗದು. ಗೃಹಸ್ಥರು ಅವರ ಧರ್ಮವನ್ನು ಮಾತ್ರ ಪಾಲಿಸಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಶಾಸ್ತ್ರಗಳಲ್ಲಿ ಹೇಳಿದ ಮಾತುಗಳನ್ನು ಮನನ ಮಾಡಿಕೊಳ್ಳಬೇಕು. ಧರ್ಮದ ಆಚರಣೆಗೆ ಶಾಸ್ತ್ರದ ಜ್ಞಾನ ಅಗತ್ಯ. ಶಾಸ್ತ್ರಗಳಲ್ಲಿ ಹೇಳಿದ ವಿಧೇಯಗಳನ್ನು ನಾವು ಪಾಲಿಸಿದರೆ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಮಾನವನ ಒಳಿತಿಗೆ ಶಾಸ್ತ್ರಗಳು ಹಲವು ನಿಯಮಗಳನ್ನು ರೂಪಿಸಿವೆ ಎಂದರು.

ವೇದ, ಪುರಾಣ, ಶಾಸ್ತ್ರಗಳನ್ನು ಮಾಡಿರುವುದು ಭಗವಂತ. ಭಗವತ್ ಚಿಂತನೆ ನಿರಂತರವಾಗಿದ್ದರೆ ಮಾತ್ರ ಸರ್ವರಿಗೂ ಒಳಿತಾಗುತ್ತದೆ. ಶಾಸ್ತ್ರಗಳನ್ನು ಮೀರಿ ಹೋಗುವವರಿಗೆ ಕಷ್ಟ ಎದುರಾಗುತ್ತದೆ. ಶಾಸ್ತ್ರಗಳ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ಬಿಡಬೇಕು. ಒಂದು ರಾಜ್ಯದ ಅರಸರು ಮಾಡುವ ಕಾನೂನುಗಳನ್ನು ಸರ್ವರೂ ಪಾಲಿಸಬೇಕು. ಕಾನೂನಿಗೆ ತೊಡಕಾದರೆ ರಾಜರು ನೀಡುವ ಶಿಕ್ಷಗೆ ಗುರಿಯಾಗಬೇಕಾಗುತ್ತದೆ. ಹಾಗೆಯೇ ಭಗವಂತ ನಿರೂಪಿಸಿದ ಧರ್ಮಪಾಲನೆಗೆ ನಾವು ಬದ್ಧರಾಗಿರಬೇಕು ಎಂದು ಹೇಳಿದರು.

ಶ್ರೀಮಠದ ಹಿರಿಯ ಯತಿಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹೆಬ್ಬಿಗೆ ಚಂದ್ರಶೇಖರ್ ರಾವ್ ರಚಿಸಿದ ’ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣರು-ಇತಿಹಾಸ ಮತ್ತು ಸಂಸ್ಕೃತಿ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಹೆಬ್ಬಾರ ಮಹಾಸಭಾ ಅಧ್ಯಕ್ಷ ಗೋಪಾಲಕೃಷ್ಣ, ತಾಲೂಕು ಹೆಬ್ಬಾರ ಸಂಘದ ಅಧ್ಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ದೀಪಕ್ ಹುಲ್ಕುಳ್ಳಿ, ಕಾರ್ಯದರ್ಶಿ ಕೀಳಂಬಿ ರಾಜೇಶ್, ಸಂಚಾಲಕ ಹೆಬ್ಬಿಗೆ ಗಣೇಶ್, ಶ್ರೀ ಶಾರದಾ ಸೌಹಾರ್ದ ಸಂಘದ ಅಧ್ಯಕ್ಷ ಶಿವಶಂಕರ್, ಬೆಂಗಳೂರು, ಮಂಗಳೂರು, ಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗ ಹೆಬ್ಬಾರ ಸಂಘದ ಒಂದು ಸಾವಿರಕ್ಕೂ ಹೆಚ್ಚು ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *