ಧರ್ಮದಲ್ಲಿ ನಂಬಿಕೆಯಿದ್ದರೆ ದೇವರ ರಕ್ಷಣೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿ ಗ್ರಾಮೀಣ
ಧರ್ಮದಲ್ಲಿ ನಂಬಿಕೆ ಇದ್ದರೆ ದೇವರು ಸದಾ ನಮ್ಮನ್ನು ಕಾಪಾಡುತ್ತಾನೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀಮದ್ ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಹಲಬರ್ಗಾ ಗ್ರಾಮದಲ್ಲಿ 11ದಿನಗಳಿಂದ ನಡೆಯುತ್ತಿರುವ ಶ್ರೀ ಸಿದ್ಧರಾಮೇಶ್ವರ 6ನೇ ಜಾತ್ರೆ ಸಮಾರೋಪದ ನಿಮಿತ್ತ ಶುಕ್ರವಾರ ಜರುಗಿದ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಧರ್ಮ ಒಡೆಯುವ ಕಾರ್ಯ ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ಧರ್ಮದ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಾಗಿದೆ ಎಂದರು.
ಜಾತ್ರೆಗಳು ಸಮಾಜದಲ್ಲಿ ಐಕ್ಯತೆ, ಸಹೋದರತೆ, ಪರಸ್ಪರ ಸಹಕಾರದ ಗುಣಗಳು ಬೆಳೆಸುತ್ತವೆ. ದೈವಭಕ್ತಿ ಮಾನವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ನಿತ್ಯ ಎಲ್ಲರೂ ಪೂಜೆ, ಧ್ಯಾನ ಮಾಡಬೇಕು. ಅಷ್ಟಾವರಣ, ಪಂಚಾಚಾರ್ಯಗಳ ಆಶಯದಂತೆ ಬದುಕು ಸಾಗಿಸಬೇಕು. ಸ್ವಾರ್ಥ, ದ್ವೇಷ, ಅಸೂಯೆ ಬದುಕನ್ನು ಅವನತಿಯತ್ತ ಒಯ್ಯುತ್ತದೆ. ಗುರುವಿನಲ್ಲಿ ಅದಮ್ಯ ಭಕ್ತಿ, ನಿಷ್ಠೆ ಬೆಳೆಸಿಕೊಳ್ಳಬೇಕು. ತಂದೆ-ತಾಯಿಯೇ ನಿಜವಾದ ಕಣ್ಣಿಗೆ ಕಾಣುವ ದೇವರು. ಅವರನ್ನು ಯಾವತ್ತೂ ಕೀಳಾಗಿ ಕಾಣಬಾರದು. ಅವರ ಸೇವೆ ದೇವರ ಸೇವೆಗೆ ಸಮ. ಹಲಬರ್ಗಾ ಶ್ರೀಗಳು ಶ್ರಮಜೀವಿಗಳು. ಇದಕ್ಕಾಗಿಯೇ ಶ್ರೀಮಠದಿಂದ ನಾನಾ ಸತ್ಕಾರ್ಯ ನಡೆದಿವೆ ಎಂದರು.
ಜಾತ್ರೆಯ ರೂವಾರಿ, ರಾಚೋಟೇಶ್ವರ ಮಠದ ಪೀಠಾಧಿಪತಿ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ಜಾತ್ರೆ ನಿಮಿತ್ತ 11 ದಿನದ ಗ್ರಾಮದಲ್ಲಿ ಹಬ್ಬದ ವಾತಾವರಣವೇ ಕಂಡಿತು. ಹೆಚ್ಚು ಜನ ಪಾಲ್ಗೊಂಡು ಗುರು ಭಕ್ತಿ, ದೈವ ಭಕ್ತಿ ಹೆಚ್ಚಿಸಿಕೊಂಡಿದ್ದಾರೆ. ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸುವುದರಿಂದ ಎಲ್ಲ ಕಷ್ಟ ದೂರಾಗುತ್ತವೆ ಎಂದು ಹೇಳಿದರು.ಶ್ರೀ ಶಂಭುಲಿಂಗ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಗ್ರಾಪಂ ಅಧ್ಯಕ್ಷೆ ರಾಚಮ್ಮಾ ಮೂಲಗೆ, ಪ್ರಮುಖರಾದ ಶಿವರಾಜ ಮೂಲಗೆ, ದತ್ತಾತ್ರಿ ಮೂಲಗೆ, ವೈಜಿನಾಥ ಮೂಲಗೆ, ರಮೇಶ ಪ್ರಭಾ, ಪಪ್ಪು ಪಾಟೀಲ್ ಖಾನಾಪುರ, ನಾರಾಯಣ ಜಿ., ಶಿವಕುಮಾರ ಬಿರಾದಾರ, ರಾಜಕುಮಾರ ಚಲವಾ, ರಮೇಶ ಪಾಟೀಲ್ ಕರಡ್ಯಾಳ, ಗಣೇಶ ಪಾಟೀಲ್, ಅನೀಲ ದಾಡಗೆ, ವೀರಶೆಟ್ಟಿ ಪಾಟೀಲ್, ಮಾರುತಿ ಪ್ರಭಾ, ಮಲ್ಲಿಕಾಜರ್ುನ ಚಲವಾ, ನೂರಂದಪ್ಪ ಪ್ರಭಾ, ಶರಣಪ್ಪ ಶಿವಣಗೆ, ರಾಜು ಕುಂಬಾರ, ಶಿವಕುಮಾರ ಗುಮ್ತಾ, ವಿನಾಯಕ ಪಾಟೀಲ್, ಶಿವಶಂಕರ ಪ್ರಭಾ, ಮಹೇಶ ಸ್ವಾಮಿ, ಶಾಮಣ್ಣಾ ಬಿರಾದಾರ ಇತರರಿದ್ದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿ, ವಂದಿಸಿದರು.

ಅದ್ದೂರಿ ಪಲ್ಲಕ್ಕಿ ಮೆರವಣಿಗೆ: ಶ್ರೀಶೈಲ ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಪುರ ಪ್ರವೇಶ, ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ನಿಂದ ಆರಂಭವಾದ ಮೆರವಣಿಗೆ ಪ್ರಮುಖ ವೃತ್ತಗಳ ಮೂಲಕ ಸಾಗಿ ರಾಚೋಟೇಶ್ವರ ಮಠಕ್ಕೆ ಆಗಮಿಸಿ ಸಮಾವೇಶಗೊಂಡಿತು. ಕುಂಭ ಕಳಶ, ಆರತಿ, ಭಜನೆ, ಡೊಳ್ಳು ಸೇರಿ ಸಾಂಸ್ಕೃತಿಕ ವೈಭವದೊಂದಿಗೆ ಮೆರವಣಿಗೆ ಭವ್ಯವಾಗಿ ನಡೆಯಿತು. ಹಲಬರ್ಗಾ ಸೇರಿ ಸುತ್ತಲಿನ ಗ್ರಾಮಗಳ ಅಪಾರ ಸಂಖ್ಯೆ ಜನ ಪಾಲ್ಗೊಂಡರು. ಶ್ರೀಗಳ ಹಾಗೂ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಜೈಘೋಷಗಳು ಮಾರ್ದನಿಸಿದವು. ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ಅವರು ಮೆರವಣಿಗೆಯ ಮುಂದೆ ಹೆಜ್ಜೆ ಹಾಕುತ್ತ ಎಲ್ಲರಿಗೂ ಜೋಶ್ ತುಂಬಿದರು. ಭಕ್ತಿಭಾವದಿಂದ ಮೆರವಣಿಗೆ ನಡೆಯಿತು.

Leave a Reply

Your email address will not be published. Required fields are marked *