ಧರ್ಮಗ್ರಂಥ ಪಠಣದಿಂದ ಶಾಂತಿ, ನೆಮ್ಮದಿ

ಶಿಗ್ಗಾಂವಿ: ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ ಗುರುಲಿಂಗ, ಜಂಗಮರಿಂದ ಸಂಸ್ಕಾರಗೊಂಡು ಪ್ರಸಾದ ರೂಪ ತಾಳುತ್ತದೆ. ಮನಃಶುದ್ಧಿಗಾಗಿ, ಶಾಂತಿ, ನೆಮ್ಮದಿಗಾಗಿ ಧರ್ಮಗ್ರಂಥ ಪಠಣ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬಿಸನಳ್ಳಿ ಗ್ರಾಮದ ಕಲ್ಮೇಶ್ವರ ಯುವಕ ಸಂಘದ ವತಿಯಿಂದ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃ, ಸಂಗೀತ ಮತ್ತು ಯೋಗ ಪಾಠಶಾಲೆ ಆವರಣದಲ್ಲಿ ಮಂಗಳವಾರ ಸಂಜೆ ಜರುಗಿದ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನೆಪಾಠ, ಮನೆ ಆಹಾರ ಮನಶುದ್ಧಿ ಮಾಡುತ್ತದೆ. ಸಂಸ್ಕಾರದಿಂದ ತಯಾರಿಸಿದ ಪದಾರ್ಥಗಳು ನಮ್ಮ ಸಂಸ್ಕಾರಗಳನ್ನು ವೃದ್ಧಿಸುತ್ತದೆ. ಧರ್ವಚರಣೆ ಪರಿಪಾಲನೆ ಮಾಡಿದಾಗ ಪರಮಾತ್ಮನ ಆಶೀರ್ವಾದ ಪಡೆಯಲು ಸಾಧ್ಯ. ಧರ್ಮ ನಂಬಿದಾಗ ಆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಬೊಮ್ಮಾಯಿ, ಮನುಕುಲದ ಸರ್ವಾಂಗೀಣ ಏಳಿಗೆಯನ್ನು ಸಿದ್ಧಾಂತ ಶಿಖಾಮಣಿ ಗ್ರಂಥ ಒಳಗೊಂಡಿದ್ದು, ಅದರ ಅಧ್ಯಯನದಿಂದ ಮನುಷ್ಯ ದೇವಮಾನವನಾಗುತ್ತಾನೆ. ಜೀವನದ ಮೌಲ್ಯಗಳ ಉತ್ತುಂಗಕ್ಕಾಗಿ ಸಿದ್ಧಾಂತ ಶಿಖಾಮಣಿ ಗ್ರಂಥ ಓದುವುದು ಅವಶ್ಯವಾಗಿದೆ ಎಂದರು.

ಅರಿವು ಮೂಡಿದಾಗ ಮಾತ್ರ ಬದುಕು ಯಾಶಸ್ವಿಯಾಗಲು ಸಾಧ್ಯವಿದೆ. ದೇಹ, ಮನಸ್ಸು ಒಂದಾದರೆ ಮಾತ್ರ ಅಮೃತ ಘಳಿಗೆ ಬರಲು ಸಾಧ್ಯವಿದೆ. ಹೀಗಾಗಿ ದೇಹ, ಮನಸ್ಸು ಬೇರೆಯಾಗಬಾರದು. ಧರ್ಮಗ್ರಂಥ ಪಾರಾಯಣ ಮಾಡುವ ಮೂಲಕ ಬದುಕು ಪಾವನ ಮಾಡಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಶೀಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ರಾಣೆಬೆನ್ನೂರ ಶಿವಯೋಗಿ ಸ್ವಾಮೀಜಿಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿದರು.ಶಾಸ್ತ್ರಿ ನಾಗಯ್ಯ ಹಿರೇಮಠ ಅವರಿಗೆ ವೇದರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಂಕಾಪುರ ರೇವಣಸಿದ್ಧೇಶ್ವರ ಸ್ವಾಮೀಜಿ, ಶಿಗ್ಗಾಂವಿ ಸಂಗನಬಸವ ಶ್ರೀಗಳು, ಹೋತನಹಳ್ಳಿ ಶಂಭುಲಿಂಗ ಶ್ರೀಗಳು, ಹಿರೇಮಣಕಟ್ಟಿ ವಿಶ್ವಾರಾಧ್ಯ ಶ್ರೀಗಳು, ಕೂಡಲದ ಗುರುಮಹೇಶ್ವರ ಶ್ರೀಗಳು, ಗುಳೇದಗುಡ್ಡದ ನೀಲಕಂಠ ಶ್ರೀಗಳು, ಲಿಂಗಸೂಗುರು ಅಮರೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಪಾಠಶಾಲೆ ಉಪಾಧ್ಯಕ್ಷ ಶಂಭಣ್ಣ ಮಾಮ್ಲೇಪಟ್ಟಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಅರಣ್ಯ ಅಧಿಕಾರಿ ನಾಗಶೆಟ್ಟಿ, ಮುಖಂಡರಾದ ಕಲ್ಲಪ್ಪ ಆಜೂರ, ವೀರೇಶ ಆಜೂರ, ಉಮೇಶ ಅಂಗಡಿ, ದೇವಣ್ಣ ಚಾಕಲಬ್ಬಿ, ವಿಶ್ವನಾಥ ಹರವಿ, ಗದಿಗೆಪ್ಪ ಶೆಟ್ಟರ, ಗುರುಶಾಂತಪ್ಪ ನರೆಗಲ್ಲ, ನೀಲಕಂಠಪ್ಪ ನರೆಗಲ್ಲ, ಗಂಗಮ್ಮ ದೇಸಾಯಿ ಇದ್ದರು.

ಶಿವನಗಾಂವದಿಂದ ಶಿಗ್ಗಾಂವಿ: ಶಿವನಗಾಂವ, ಇಂದು ಶಿಗ್ಗಾವಿಯಾಗಿದ್ದು, ಇಲ್ಲಿನ ಭಕ್ತ ಸಮೂಹಕ್ಕೆ ಅನುಕೂಲವಾಗುವಂತೆ ಬೃಹದಾಕಾರದ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಅವಶ್ಯವಾಗಿದೆ. ಈ ಕ್ಷೇತ್ರ ಮುಂದೆ ಎರಡನೇ ಕಾಶಿ ಕ್ಷೇತ್ರವಾಗಲಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.