ಧರಣಿ ಕೈಬಿಟ್ಟ ರೈತ ಕುಟುಂಬಸ್ಥರು

ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ
ಸಾಲಬಾಧೆಯಿಂದ 2 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮೇಶ್ವರ ಮತ್ತು ರಾಮಗೇರಿ ಗ್ರಾಮದ ರೈತರಿಬ್ಬರಿಗೆ ಇದುವರೆಗೂ ಸರ್ಕಾರದಿಂದ ಪರಿಹಾರ ಬಂದಿರದ ಕಾರಣ ಪರಿಹಾರಕ್ಕಾಗಿ ಆಗ್ರಹಿಸಿ ಶುಕ್ರವಾರ ರೈತ ಕುಟುಂಬದವರು ತಹಸೀಲ್ದಾರ್ ಕಚೇರಿಯ ಮುಂದೆ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಶನಿವಾರ ತಹಸೀಲ್ದಾರ್​ಗೆ ಮನವಿ ನೀಡುವ ಮೂಲಕ ಕೈಬಿಟ್ಟರು.

ಶನಿವಾರ ಧರಣಿ ನಿರತ ರೈತ ಕುಟುಂಬದವರಿಗೆ ತಹಸೀಲ್ದಾರ್, ಕೃಷಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯವರು ಇದೀಗ ಚುನಾವಣೆ ಸಮಯವಾಗಿದ್ದು ಒಂದಿಷ್ಟು ಕಾಲಾವಕಾಶ ಕೊಡಿ ಎಂದು ಕೇಳಿದರು. ಆಗ ರೈತನ ಪತ್ನಿ ರತ್ನವ್ವ ಮಾಗಡಿ, ಆನಂದ ಬಿಶೆಟ್ಟಿ, ರೈತ ಮುಖಂಡ ಶಿವು ಕಟಗಿ ಅವರು ತಮಗೆ ನ್ಯಾಯಯುತವಾಗಿ ಕೊಡಬೇಕಾದ ರೈತ ಆತ್ಮಹತ್ಯೆ ಪರಿಹಾರ ಏಕೆ ಕೊಡುತ್ತಿಲ್ಲ. ಆ ಕುರಿತು ಸ್ಪಷ್ಟವಾದ ಕಾರಣವನ್ನು ಲಿಖಿತವಾಗಿ ಸಂಬಂಧಪಟ್ಟ ಕೃಷಿ ಇಲಾಖೆ, ಜಿಲ್ಲಾಧಿಕಾರಿಗಳಿಂದ ಕೊಡಿಸಬೇಕು ಇಲ್ಲದಿದ್ದರೆ ಮತ್ತೇ ಅನಿರ್ದಿಷ್ಠಾವಧಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿ ಸತ್ಯಾಗ್ರಹವನ್ನು ಕೊನೆಗೊಳಿಸಿದರು.

ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಅವರು ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸೋಮನಗೌಡ ಪಾಟೀಲ, ಪಿಎಸ್​ಐ ವಿಶ್ವನಾಥ ಚೌಗುಲೆ, ಇತರರಿದ್ದರು.

Leave a Reply

Your email address will not be published. Required fields are marked *