ಧನವಂತರ ಆಯ್ಕೆಯೇ ಹೈಡ್ರಾಮಕ್ಕೆ ಕಾರಣ

ಚಿಕ್ಕಬಳ್ಳಾಪುರ:  ಚುನಾವಣೆಯಲ್ಲಿ ಜನಪರ ಕಾಳಜಿಯ ವ್ಯಕ್ತಿಗಳ ಬದಲಿಗೆ ಹಣ ಬಲದ ಮತ್ತು ಸ್ವಹಿತಾಸಕ್ತಿಯ ನಾಯಕರು ಆಯ್ಕೆಯಾಗುತ್ತಿರುವುದೇ ರೆಸಾರ್ಟ್ ರಾಜಕಾರಣ ಮತ್ತು ರಾಜೀನಾಮೆ ಡ್ರಾಮಾಗೆ ಪ್ರಮುಖ ಕಾರಣ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್​ಐ) ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ‘ರಾಜಕೀಯದ ವ್ಯಾಪಾರೀಕರಣ ಮತ್ತು ದೇಶದ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಧನವಂತರಿಗೆ ಚುನಾವಣೆಯಲ್ಲಿ ಮಣೆ ಹಾಕಲಾಗುತ್ತಿದೆ. ಶಾಸಕರಾಗಿ ಆಯ್ಕೆಯಾದವರು ಜನರ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರದೆ, ಸ್ವಲಾಭದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸತತ ಬರಗಾಲದಿಂದ ರಾಜ್ಯದ ಜನ ಮೇವಿನ ಕೊರತೆ, ಕುಡಿಯುವ ನೀರಿನ ಹಾಹಾಕಾರಕ್ಕೆ ತತ್ತರಿಸಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ 4 ವರ್ಷದಲ್ಲಿ ದೇಶದಲ್ಲಿ ನಿರುದ್ಯೋಗ ಸಂಖ್ಯೆ ಶೇ.4.5 ಹೆಚ್ಚಾಗಿದ್ದು ಗ್ರಾಮೀಣ ಅನಕ್ಷರಸ್ಥರು ಉದ್ಯೋಗಕ್ಕಾಗಿ ಗುಳೆ ಹೊರಟಿದ್ದಾರೆ. ಆದರೆ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಡಿವೈಎಫ್​ಐ ಜಿಲ್ಲಾಧ್ಯಕ್ಷ ಬಿ.ಎಂ. ಹೇಮಚಂದ್ರ ಆರೋಪಿಸಿದರು.

ಭಾರತ ಹಲವು ಭಾಷೆ, ಸಂಸ್ಕೃತಿ, ಧರ್ಮ ಮತ್ತು ಜಾತಿಗಳನ್ನು ತನ್ನೊಳಗೆ ಪೋಷಿಸಿದೆ. ಸಂವಿಧಾನದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ, ಏಕಪಕ್ಷೀಯ ಮತ್ತು ಸರ್ವಾಧಿಕಾರ ಧೋರಣೆಗಳು ಹೆಚ್ಚಾಗುತ್ತಿದ್ದು, ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಯ, ಜಿಲ್ಲಾ ಕಾರ್ಯದರ್ಶಿ ಮಧು ಮತ್ತಿತರರು ಇದ್ದರು.

ಸ್ವಾರ್ಥಕ್ಕೆ ರಾಜೀನಾಮೆ:  ಸ್ವಾರ್ಥಕ್ಕಾಗಿ ಕೆಲ ಶಾಸಕರು ರಾಜೀನಾಮೆ ನೀಡಿ, ಐಷಾರಾಮಿ ರೆಸಾರ್ಟ್​ಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಇವರೇನು ರೈತರ ಆತ್ಮಹತ್ಯೆ, ನಿರುದ್ಯೋಗ ಮತ್ತು ಜನರ ಸಮಸ್ಯೆ ನಿವಾರಣೆಗೆ ರಾಜೀನಾಮೆ ನೀಡಿಲ್ಲ ಎಂಬುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮನವಿ ಮಾಡಿದರು.

Leave a Reply

Your email address will not be published. Required fields are marked *