ಅರಸೀಕೆರೆ: ಸಲ್ಲದ ಕಾರಣ ಮುಂದಿಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ, ತಾಲೂಕಿನ ಜಾವಗಲ್ ಹೋಬಳಿ ಧನಂಜಯಪುರ ಗ್ರಾಮದಲ್ಲಿ ಗುರುವಾರ ರೈತರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಉಂಡಿಗನಾಳು, ಬಂದೂರು, ನೇರ‌್ಲಿಗೆ ಸೇರಿದಂತೆ ಕೆಲ ಹಳ್ಳಿಗಳ ರೈತರು ಹತ್ತಾರು ವರ್ಷಗಳಿಂದ ಭೂ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಮುನ್ಸೂಚನೆ ನೀಡದ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಬಿಟ್ಟುಕೊಡುವಂತೆ ನೋಟಿಸ್ ನೀಡುತ್ತಿರುವುದು ಅಕ್ಷಮ್ಯ. ಅಧಿಕಾರಿಗಳ ನಡೆ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ. ನೋಟಿಸ್ ಕೊಡುವುದನ್ನು ತಕ್ಷಣವೇ ನಿಲ್ಲಸಬೇಕು ಎಂದು ಆಗ್ರಹಿಸಿದರು.
ಫೆ.20ರಂದು ಬೆಂಗಳೂರು ಚಲೋ ಪಾದಯಾತ್ರೆಗೆ ಕರೆ ನೀಡಲಾಗಿದೆ. ಮಾ.1ರಂದು ಅರಣ್ಯ ಭವನಕ್ಕೆ ತೆರಳಿ ಇಲಾಖೆಯ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಅಮಿತ್ ಅವರಿಗೆ ಮನವಿ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಜಿಲ್ಲಾ ಸಂಚಾಲಕ ಅಯೂಬ್ ಪಾಷಾ, ಜವನಳ್ಳಿ ನಿಂಗಪ್ಪ, ವಕೀಲ ವೆಂಕಟೇಶ್, ಶಾಂತಮ್ಮ, ಏಜಾಜ್ ಪಾಷಾ ಸೇರಿ ಹಲವರು ನೇತೃತ್ವ ವಹಿಸಿದ್ದರು.