ಮಂಗಳೂರು/ಉಡುಪಿ: ಕೇರಳದಲ್ಲಿ ಮತ್ತೆ ನಿಫಾ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಯಾವುದೇ ರೋಗಿಗಳಲ್ಲಿ ನಿಫಾ ಲಕ್ಷಣ ಕಂಡುಬಂದರೆ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ಇಲಾಖೆಯಿಂದ ಜಿಲ್ಲೆಯ ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕೇರಳದಿಂದ ಮಂಗಳೂರಿಗೆ ಹೋಗುವ-ಬರುವವರ ಸಂಖ್ಯೆ ಹೆಚ್ಚಿರುವುದು, ಅದರಲ್ಲೂ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆತರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕೇರಳದಿಂದ ಮಂಗಳೂರಿಗೆ ಬರುವ ಬಹುತೇಕ ಮಂದಿ ರೈಲಿನಲ್ಲೇ ಆಗಮಿಸುತ್ತಾರೆ. ಜ್ವರ ಅಥವಾ ಇತರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಬಂದಲ್ಲಿ ಸೂಕ್ತ ತಪಾಸಣೆ ನಡೆಸಬೇಕು. ಸಿಬ್ಬಂದಿ ಕೊರತೆ ಇದ್ದಲ್ಲಿ ರೋಗಿಗಳನ್ನು ವೆನ್ಲಾಕ್ ಆಸ್ಪತ್ರೆಗೂ ಶಿಾರಸು ಮಾಡಬಹುದು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಪ್ರವೀಣ್ ತಿಳಿಸಿದ್ದಾರೆ.
ನಿಫಾ ವೈರಸ್ ಪ್ರಮುಖವಾಗಿ ಬಾವಲಿ, ಹಂದಿಗಳಿಂದ ಹರಡುತ್ತದೆ. ಇತರ ಸಾಕುಪ್ರಾಣಿಗಳ ಮೂಲಕವೂ ಹರಡುವ ಸಾಧ್ಯತೆ ಇರುತ್ತದೆ. ರೋಗ ತಗಲಿರುವ ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ ರೋಗ ಹರಡುವ ಸಾಧ್ಯತೆ ಇರುವುದರಿಂದ ಅತಿ ಎಚ್ಚರಿಕೆ ಅವಶ್ಯವಾಗಿದೆ.
ಪ್ರಾಣಿಗಳು ಕಚ್ಚಿ ಬಿಟ್ಟ ಹಣ್ಣು ತಿನ್ನದಿರಿ
ಬಾವಲಿಗಳು ನಿಫಾ ವೈರಸ್ನ ಸಾಮಾನ್ಯ ವಾಹಕಗಳು ಎನ್ನಲಾಗಿದ್ದು, ಬಾವಲಿಗಳು ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿ ಬಿದ್ದ ಹಣ್ಣುಗಳನ್ನು ಮನುಷ್ಯರು ತಿಂದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ಕಚ್ಚಿದ ಗುರುತುಗಳಿರುವ ಹಲಸು, ಮಾವು, ಪೇರಳೆಯಂತಹ ಹಣ್ಣುಗಳನ್ನು ತಿನ್ನಬಾರದು.
ಲಕ್ಷಣಗಳೇನು?
ಮೆದುಳೂತ, ಜ್ವರ, ವಾಂತಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಈ ವೈರಸ್ ಹರಡುವಲ್ಲಿ ಕಾರಣವಾಗಿವೆ. ಅತ್ಯಧಿಕ ವೇಗದಲ್ಲಿ ಹರಡುವ ವೈರಸ್ ಇದಾಗಿದ್ದು, ರೋಗಿಯು 24 ಗಂಟೆಯೊಳಗೆ ಕೋಮಾಕ್ಕೆ ತೆರಳುವ ಸಾಧ್ಯತೆಗಳೂ ಇವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.
ನಿಫಾ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಈ ಬಗ್ಗೆ ಜಾಗ್ರತೆ, ನಿಗಾ ವಹಿಸುವಂತೆ ಎಲ್ಲ ವೈದ್ಯರಿಗೆ ಸೂಚನೆ ನೀಡಲಾಗಿದೆ. ಶೀತ, ಜ್ವರ ಸಮಾನ್ಯವಾಗಿ ಕಂಡು ಬರುತ್ತದೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು, ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮರದಿಂದ ಕೆಳಗೆ ಬಿದ್ದ ಹಣ್ಣು, ಹಂಪಲು ತಿನ್ನಕೂಡದು.
– ವಾಸುದೇವ್ ಉಪಾಧ್ಯ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ, ಆರೋಗ್ಯ ಇಲಾಖೆ, ಉಡುಪಿಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ನಿಫಾ ಪ್ರಕರಣ ಇದ್ದಲ್ಲಿ ತಕ್ಷಣವೇ ವರದಿ ಮಾಡಲು ಸೂಚಿಸಲಾಗಿದೆ. ಯಾವುದೇ ಪ್ರಕರಣ ಈ ವರೆಗೆ ವರದಿಯಾಗಿಲ್ಲ.
– ಡಾ.ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.