ದ್ವೇಷ ಬಿಡು ಪ್ರೀತಿ ಮಾಡು

ಶಿರಹಟ್ಟಿ: ಜೀವನವೆಂಬುದು ಒಂದು ತೆರೆದಿಟ್ಟ ಪುಸ್ತಕ. ಅದರ ಮೊದಲ ಮತ್ತು ಕೊನೆಯ ಪುಟಗಳು ಹುಟ್ಟು, ಸಾವಿಗೆ ಸಂಬಂಧಿಸಿದ್ದವು. ಹೀಗೆ ಹುಟ್ಟು ಸಾವುಗಳ ಮಧ್ಯೆ ಇರುವ ಬಾಳ ಪುಟಗಳನ್ನು ಸಾರ್ಥಕಗೊಳಿಸಬೇಕಾದರೆ ದ್ವೇಷ ಬಿಟ್ಟು, ಪ್ರೀತಿಯಿಂದ ಬದುಕುವುದನ್ನು ಕಲಿಯಬೇಕು ಎಂದು ಫಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.

ಫಕೀರೇಶ್ವರ ಮಠದ ಜಾತ್ರೆ ಅಂಗವಾಗಿ ಭಕ್ತರಿಂದ ನಡೆದ ತುಲಾಭಾರ ಸ್ವೀಕರಿಸಿ ಅವರು ಅಶೀರ್ವಚನ ನೀಡಿದರು. ‘ಸುಂದರವಾದ ಮನೆ ಎಷ್ಟೋ ಜನ ಕಟ್ಟುತ್ತಾರೆ. ಆದರೆ ಆ ಮನೆಯಲ್ಲಿ ಹೇಗೆ ಬದುಕಿ ಬಾಳ ಬೇಕು ಎಂಬುದನ್ನು ಕಲಿಯುವುದಿಲ್ಲ. ಅರಿತು ಬಾಳಿದರೆ ಬಾಳು ಬಂಗಾರ, ಮರೆತು ಬಾಳಿದರೆ ಜೀವನ ಅಂಧಕಾರ. ಅದಕ್ಕೆ ಸಾತ್ವಿಕ ಬದುಕಿನೊಂದಿಗೆ ಹೃದಯಶ್ರೀಮಂತಿಕೆ ಗುಣ ಬೆಳೆಸಿಕೊಂಡು ಭಕ್ತಿ ಮಾರ್ಗದಲ್ಲಿ ನಡೆದು ದಾನ ಧರ್ವದಿಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಜೀವನ್ಮುಕ್ತಿ ಪಡೆಯಲು ಸಾಧ್ಯ’ ಎಂದರು.

ಅಗಡಿ ಅಕ್ಕಿಮಠದ ಶ್ರೀಗುರುಲಿಂಗಸ್ವಾಮಿಗಳು ಮಾತನಾಡಿ, ಕಾಲ ಬದಲಾದಂತೆ ಭಕ್ತರ ಮನಸ್ಸುಗಳು ಬದಲಾಗುತ್ತಿವೆ. ಅದರಲ್ಲೂ ಮಿತಿಮೀರಿದ ಮೊಬೈಲ್ ಬಳಕೆ ಮನುಷ್ಯನ ಮನ ಪರಿವರ್ತನೆಗೆ ಕಾರಣವಾಗಿದೆ ಎಂದರು. ಹಾಸ್ಯ ಚಟಾಕಿ ಹಾರಿಸಿದ ಶ್ರೀಗಳು, ‘ಇತ್ತೀಚಿಗೆ ಮಠದ ಭಕ್ತೆಯೊಬ್ಬಳು ಮೊಬೈಲ್ ಮೂಲಕ ಸಂರ್ಪಸಿ ಅಜ್ಜಾರ ಮಠಕ್ಕೆ ನೈವೇದ್ಯ ಸಲ್ಸಾಕ್ ಕರಿಗಡಬು ಮಾಡಿ ನಿಮ್ಮ ವಾಟ್ಸ್ ಆಪ್​ಗೆ ಕಳಿಸೀನಿ. ಓಪನ್ ಮಾಡಿ ನೋಡಿ ಅದನ್ನ ಸ್ವೀಕಾರ ಮಾಡ್ರಿ ಅಂತಾ ಹೇಳಿದ್ರು.. ಮುಂದೊಂದು ದಿನ ಮಠಾಧೀಶರು ತಮ್ಮ ಪಾದಗಳ ಫೋಟೊವನ್ನು ವಾಟ್ಸ್ ಅಪ್​ನ್ಯಾಗ ಹಾಕಿ ನಿಮ್ಗ ಆಶೀರ್ವಾದ ಮಾಡೀವ ನೋಡ್ರಿ ಅನ್ನೊ ಪರಿಸ್ಥಿತಿ ಬಂದ್ರೂ ಅಚ್ಚರಿ ಪಡಬೇಕಾಗಿಲ್ಲ’ ಎಂದರು.

ಕುಂದಗೋಳದ ಬಸವಣ್ಣದೇವರು, ಸದಾಶಿವಪೇಟೆಯ ಶಿವಲಿಂಗ ದೇವರು, ವಡವಡಗಿಯ ಚಂದ್ರಶೇಖರ ಶ್ರೀಗಳು, ತೇಲಸಂಗದ ವೀರೇಶ್ವರ ದೇವರು, ಇಳಕಲ್​ನ ಬಸವಚೇತನ ಸ್ವಾಮೀಜಿ, ಎಸ್.ಜಿ. ಹಿರೇಮಠ, ಎಸ್.ಎಂ. ಶಿವಯೋಗಿಮಠ, ವೈ.ಎಸ್. ಪಾಟೀಲ, ಡಿ.ಎನ್. ಡಬಾಲಿ, ಸಿ.ಸಿ. ನೂರಶೆಟ್ಟರ, ಬಸವಣ್ಣೆಪ್ಪ ತುಳಿ, ಸಿ.ವಿ. ಮತ್ತಿಗಟ್ಟಿ ಇತರರು ಇದ್ದರು. ಬಿ.ಎಸ್. ಹಿರೇಮಠ ಸ್ವಾಗತಿಸಿದರು. ಎಚ್.ಎಂ. ದೇವಗಿರಿ ನಿರೂಪಿಸಿದರು.

ಮಠದಲ್ಲಿ ಕಡುಬಿನ ಕಾಳಗ

ಶಿರಹಟ್ಟಿ: ಫಕೀರೇಶ್ವರ ಸಂಸ್ಥಾನಮಠದ ಜಾತ್ರೆ ಅಂಗವಾಗಿ ಭಾನುವಾರ ಮಠದ ಆವರಣದಲ್ಲಿ ಕಡುಬಿನ ಕಾಳಗ ಜರುಗಿತು.

ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀಮಠದ ಪೀಠಾಧ್ಯಕ್ಷ ಫಕೀರಸಿದ್ಧರಾಮ ಸ್ವಾಮೀಜಿ ಆಶ್ವಾರೂಢರಾಗಿ ಕಡುಬಿನ ಕಾಳಗದ ಬೆಲ್ಲ ಎಸೆಯುವ ಕಾರ್ಯಕ್ಕೆ ಚಾಲನೆ ನೀಡಿದರು. ಶ್ರೀಮಠದ ಆವರಣದಲ್ಲಿನ 12 ಗದ್ದುಗೆಗಳ ಸುತ್ತ ಪ್ರದಕ್ಷಿಣೆ ಹಾಕುತ್ತ ಬೆಲ್ಲದ ಚೂರುಗಳನ್ನು ಭಕ್ತರಿಗೆ ವಿತರಿಸಿದರು.

ಕಡುಬಿನ ಕಾಳಗ ಉತ್ಸವದಲ್ಲಿ ಶ್ರೀಗಳ ಮುಂದೆ ಅಲಂಕೃತ ಆನೆ ಹೆಜ್ಜೆ ಹಾಕುತ್ತ ಸಾಗಿದರೆ, ಹಿಂದೆ ಬಂಡಿಯಲ್ಲಿ ನಗಾರಿ ನಿನಾದ, ಜಾಂಜ್, ಡೊಳ್ಳು ಕುಣಿತ ಉತ್ಸವಕ್ಕೆ ಮೆರುಗು ನೀಡಿದವು. ಐದು ಸುತ್ತಿನ ಪ್ರದಕ್ಷಿಣೆ ಮುಗಿಯುತ್ತಿದ್ದಂತೆ ಶ್ರೀಗಳಿಗೆ ಗುಲಾಲ್ ಎರಚುವ ಮೂಲಕ ಕಡುಬಿನ ಕಾಳಗ ಸಂಪನ್ನಗೊಂಡಿತು. ವಿವಿಧ ಮಠಾಧೀಶರು, ಮುಖಂಡ ಡಿ.ಎನ್.ಡಬಾಲಿ, ವೈ.ಎಸ್. ಪಾಟೀಲ, ಸಿ.ಸಿ. ನೂರಶೆಟ್ಟರ, ಎಚ್. ಡಿ. ಮಾಗಡಿ, ಎಚ್.ಎಂ.ದೇವಗಿರಿ. ಬಸವಣ್ಣೆಪ್ಪ ತುಳಿ ಇತರರಿದ್ದರು.

Leave a Reply

Your email address will not be published. Required fields are marked *