ದ್ರೌಪದಮ್ಮ ಕರಗ ಮಹೋತ್ಸವ ಸಂಪನ್ನ

ಚಿಕ್ಕಬಳ್ಳಾಪುರ:  ನಗರದಲ್ಲಿ ದ್ರೌಪದಮ್ಮ ಹೂವಿನ ಕರಗ ಮಹೋತ್ಸವವು ವಿಶೇಷ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಮಹೋತ್ಸವ ಪ್ರಯುಕ್ತ ಬಾಪೂಜಿ ನಗರದಲ್ಲಿರುವ ಮಹೇಶ್ವರಮ್ಮ ದೇವಾಲಯದಲ್ಲಿ ದ್ರೌಪದಮ್ಮ ಕರಗ ಮಹೋತ್ಸವ ಸಮಿತಿ ಹಾಗೂ ಅರುಂಧತಿ ಹರಿಜನ ಅಭಿವೃದ್ಧಿ ಸಂಘದಿಂದ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ರಾತ್ರಿ 10.30ಕ್ಕೆ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ಹೊರಬಂದ ಕರಗದ ಪೂಜಾರಿ ಹೊಸೂರಿನ ಪುಟ್ಟಮ್ಮ, ದೇವಾಲಯ ಮುಂಭಾಗ ತಮಟೆ ವಾದನಕ್ಕೆ ನೃತ್ಯ ಪ್ರದರ್ಶಿಸಿದರು. ಭಾನುವಾರ ಬೆಳಗ್ಗೆವರೆಗೂ ಹೂವಿನ ಕರಗ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ಬಜಾರ್ ರಸ್ತೆ, ಬಾಪೂಜಿ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮರಳು ಸಿದ್ದೇಶ್ವರಸ್ವಾಮಿ ದೇವಾಲಯ ಬಳಿ ವಾದ್ಯ ಗೋಷ್ಠಿ ಆಯೋಜಿಸಲಾಗಿತ್ತು. ಆಟೋ ಚಾಲಕರು, ಸಂಘ-ಸಂಸ್ಥೆಗಳ ಮುಖಂಡರು ವಿವಿಧೆಡೆ ಅನ್ನ ಸಂತರ್ಪಣೆ ಕೈಗೊಂಡಿದ್ದರು. ಮಹೋತ್ಸವದಲ್ಲಿ ರಾಜ್ಯ ಮತ್ತು ನೆರೆ ರಾಜ್ಯಗಳ ಕಲಾ ತಂಡಗಳು ಪಾಲ್ಗೊಂಡಿದ್ದವು.

ಮಹೋತ್ಸವಕ್ಕೆ ಮಹೇಶ್ವರಮ್ಮ ದೇವಾಲಯ ಬಳಿ ದ್ರೌಪದಮ್ಮ ಕರಗ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ.ಶಿವಾನಂದ್ ಚಾಲನೆ ನೀಡಿದರು. ಸಮಿತಿ ಸಂಚಾಲಕ ಎಂ.ಎಸ್.ಸಂದೀಪ್ ಚಕ್ರವರ್ತಿ, ಶ್ರೀಮಾತಾ ಮಹೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಕಸ್ತೂರಿ ಶಿವಾನಂದ್, ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಜಂಟಿ ಕಾರ್ಯದರ್ಶಿ ಬಿ.ವಿ.ವೆಂಕಟೇಶ್, ಕಾರ್ಯದರ್ಶಿ ಸಿ.ಎನ್.ಮುರಳಿಮೋಹನ್, ಸದಸ್ಯರಾದ ಎನ್.ಮುರಳಿ, ಎಚ್.ಮಹಾದೇವ್, ಸಿ.ಎನ್.ಕೇಶವಮೂರ್ತಿ, ಗಂಜೂರು ನಾರಾಯಣಪ್ಪ, ಮುನಿರಾಜು, ರವಿಕುಮಾರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *