ದೌರ್ಜನ್ಯ ಕಾಯ್ದೆಯಡಿ 63 ಪ್ರಕರಣ ದಾಖಲು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಅಕ್ಟೋಬರ್ 2018 ರಿಂದ ಡಿಸೆಂಬರ್ 2018 ರವರೆಗೆ 63 ಪ್ರಕರಣ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೆ 63ರಲ್ಲಿ 19 ಪ್ರಕರಣಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ. ಒಟ್ಟು 23 ಸಂತ್ರಸ್ತರು ಪರಿಹಾರ ಧನ ಪಡೆದಿದ್ದಾರೆ. 12 ಪ್ರಕರಣಗಳಿಗೆ ಪರಿಹಾರ ಧನ ವಿತರಿಸಲು ಕ್ರಮ ವಹಿಸಲಾಗಿದೆ. 6 ಪ್ರಕರಣಗಳು ಪರಿಹಾರಧನ ಮಂಜೂರಾತಿಗೆ ಬಾಕಿ ಉಳಿದಿವೆ. 26 ಪ್ರಕರಣಗಳು ಪೊಲೀಸ್ ಇಲಾಖೆಯಿಂದ ದೋಷಾರೋಪಣ ಪಟ್ಟಿ ಬರಲು ಬಾಕಿ ಇವೆ ಎಂದರು.

ಪರಿಶಿಷ್ಟ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನವಿಗಳನ್ನು ಸಲ್ಲಿಸಿದಾಗ ಅಧಿಕಾರಿಗಳು ಪರಿಶೀಲಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು. ಬಹುತೇಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ನೀಡುವಂತೆ ಅರ್ಜಿಗಳು ಬಂದಿವೆ. ಕಂದಾಯ ಭೂಮಿ ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಿ ಸ್ಮಶಾನಕ್ಕೆ ಭೂಮಿ ನೀಡುವಂತೆ ತಹಸೀಲ್ದಾರ್​ಗೆ ತಿಳಿಸಿದರು.

ಸಮಿತಿ ಸದಸ್ಯ ರೇಣಾಕರಾಧ್ಯ ಮಾತನಾಡಿ, ದಲಿತರಿಗೆ ಫಾರಂ ನಂ. 53, 53(ಎ) ಮತ್ತು 94(ಸಿ) ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ಕೊಡಬೇಕೆಂದು ಸರ್ಕಾರ ನಿರ್ಣಯ ಮಾಡಿದೆ. ಆದರೆ ಅಧಿಕಾರಿಗಳು ನೀಡಿರುವುದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಕುರಿತು ಭೂಮಿ ಮಂಜೂರು ಮಾಡಿಕೊಡುವಂತೆ ಚಿಕ್ಕಮಗಳೂರಿನ ಉಪವಿಭಾಗಾಧಿಕಾರಿಗೆ ತಿಳಿಸಲಾಗಿದೆ ಎಂದರು.

ಕಡೂರು ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 5 ಲಕ್ಷ ರೂ. ವರೆಗಿನ ಕಾಮಗಾರಿಯನ್ನು ನೀಡುತ್ತಿಲ್ಲ. ಸರ್ಕಾರದ ಆದೇಶವನ್ನು ಕಡೆಗಣಿಸಲಾಗಿದೆ ಎಂದು ಸದಸ್ಯರು ದೂರಿದಾಗ ಕಡೂರು ತಾಪಂ ಕಾರ್ಯನಿರ್ವಾಹಣಾಧಿಕಾರಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

Leave a Reply

Your email address will not be published. Required fields are marked *