ದೌರ್ಜನ್ಯ ಎಸಗಿದರ ಬಂಧನಕ್ಕೆ ಪಟ್ಟು

ರಾಮನಗರ: ಮಾಗಡಿಯ ನಾಗಶೆಟ್ಟಿಹಳ್ಳಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದರವನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಜಿಲ್ಲಾ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ನಾಗಶೆಟ್ಟಿಹಳ್ಳಿಯ ಗುರುಬಸವಯ್ಯ, ಗ್ರಾಪಂ ಸದಸ್ಯ ರುದ್ರಾರಾಧ್ಯ ದೌರ್ಜನ್ಯ ಎಸಗಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಗ್ರಾಮದ ದಲಿತರ ಸ್ಥಿತಿ ಚಿಂತಾಜನಕವಾಗಿದೆ. 40 ವರ್ಷಗಳ ಹಿಂದೆ ಸರ್ಕಾರ ದಲಿತರಿಗೆ ನೀಡಿದ್ದ ನಿವೇಶನಗಳನ್ನು ಸವರ್ಣೀಯರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ಸವರ್ಣೀಯರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ದಲಿತ ಮಹಿಳೆಯರು ವಶಪಡಿಸಿಕೊಂಡಿರುವ ಸ್ವತ್ತನ್ನು ವಿಚಾರಿಸಲು ತೆರಳಿದ ಸಂದರ್ಭದಲ್ಲಿ ಗುರುಬಸವಯ್ಯ ಮತ್ತು ರುದ್ರಾರಾಧ್ಯ ಮಹಿಳೆಯರ ಬಳೆ ಒಡೆದು ಹಾಕಿ, ಅವಾಚ್ಯ ಪದಗಳಿಂದ ನಿಂದಿಸಿ, ಸೀರೆ ಹಿಡಿದು ಎಳೆದಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನಿರ್ಬಂಧದ ಬೆದರಿಕೆ: ಗ್ರಾಪಂ ಸದಸ್ಯ ರುದ್ರಾರಾಧ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ದಲಿತರಿಗೆ ಕುಡಿಯುವ ನೀರು ಬಿಡುವುದಿಲ್ಲ. ಗ್ರಾಮದ ಯಾವುದೇ ಅಂಗಡಿಯಲ್ಲಿ ಪದಾರ್ಥ ಕೊಂಡುಕೊಳ್ಳಲು ನಿರ್ಬಂಧ ಹೇರುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಇವರ ವಿರುದ್ಧ ಮಾಗಡಿ ಠಾಣೆಯಲ್ಲಿ ದೂರು ನೀಡಲು ಹೋದರೆ, ನಮಗಿಂತ ಮುಂಚಿತವಾಗಿ ಗುರುಬಸವಯ್ಯ ಮತ್ತು ತಂಡದವರು ನಾಗಶೆಟ್ಟಿಹಳ್ಳಿ ದಲಿತರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿ ಎಸ್.ಜಿ. ವನಜಾ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್.ಪ್ರಶಾಂತ್​ಗೆ ಮನವಿ ಸಲ್ಲಿಸಿದರು. ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳಾದ ಗೋವಿಂದರಾಜು, ನರಸಿಂಹಮೂರ್ತಿ, ಯಶೋಧ, ಜಾಣಕುಮಾರ್, ಗೋವಿಂದಪ್ಪ, ಶ್ರೀನಿವಾಸ್, ತಿಮ್ಮಯ್ಯ, ಕುಮಾರಸ್ವಾಮಿ, ಸುಕನ್ಯಾ, ರೇಷ್ಮತಾಜ್, ವೆಂಕಟೇಶ್, ಲಕ್ಷ್ಮೀದೇವಿ ಹಾಗೂ ತರರು ಇದ್ದರು.