ದೋಸ್ತಿಗಳ ಫೈಟ್ ಕಮಲವೂ ಟೈಟ್

ಮಾರ್ಥಂಡ ಜೋಶಿ ಬಸವಕಲ್ಯಾಣ
ಇಲ್ಲಿಯ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಿದ್ದಿಗೆ ಬಿದ್ದಿವೆ. ದೋಸ್ತಿ ಪಕ್ಷಗಳು ಪರಸ್ಪರ ಮೇಲುಗೈ ಸಾಧಿಸುವುದಕ್ಕೆ ತೊಡೆ ತಟ್ಟಿ ನಿಂತಿದ್ದು, ರಾಜಕೀಯ ಬಲ ಪ್ರದರ್ಶನಕ್ಕೆ ಕಣ ಸಿದ್ಧವಾಗಿದೆ.
31 ವಾರ್ಡ್​ಗಳಿಗೆ ಮೇ 29ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್-31, ಬಿಜೆಪಿ-29, ಜೆಡಿಎಸ್-27, ಬಿಎಸ್ಪಿ-5, ಎಂಐಎಂ-20, ಡಬೂ್ಲೃಪಿಐ-2 ಮತ್ತು 14 ಪಕ್ಷೇತರ ಸೇರಿ ಒಟ್ಟು 128 ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ವಾರ್ಡ್​ 14ರಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಬಿದ್ದಿದೆ. ಕೆಲ ಕ್ಷೇತ್ರಗಳಲ್ಲಿ ಮೂವರಿದ್ದರೆ, ಉಳಿದ ಕ್ಷೇತ್ರಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಲೋಕ ಸಮರ ನಂತರ ನಗರದಲ್ಲಿ ಲೋಕಲ್ ವಾರ್ ಸಂಚಲನ ಶುರುವಾಗಿದೆ.
ನಗರಸಭೆಯಲ್ಲಿ ಪ್ರಭುತ್ವ ಸ್ಥಾಪಿಸುವುದು ಕಾಂಗ್ರೆಸ್ಗೆ ಪ್ರತಿಷ್ಠೆಯಾದರೆ, ನೆಲೆ ಉಳಿಸಿಕೊಳ್ಳಲು ಜೆಡಿಎಸ್ ಸೆಣಸಬೇಕಿದೆ. ಕಳೆದ ಸಲ ಒಂದೂ ಸ್ಥಾನ ಗೆಲ್ಲದ ಬಿಜೆಪಿ ಈ ಬಾರಿ ಖಾತೆ ತೆರೆಯುವ ಜತೆಗೆ ತನ್ನ ಶಕ್ತಿ ತೋರಿಸುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ನಗರಸಭೆಯಲ್ಲಿ ತನ್ನ ಬಲ ವೃದ್ಧಿಗೆ ಮುಂದಾಗಿರುವ ಎಂಐಎಂ ಸ್ಪರ್ಧೆ ಕದನ ಕುತೂಹಲ ಹೆಚ್ಚಿಸಿದೆ. ಕಳೆದ ಬಾರಿ 7ರಲ್ಲಿ ಸ್ಪರ್ಧಿಸಿ 3ರಲ್ಲಿ ಗೆಲುವು ಕಂಡಿದ್ದ ಎಂಐಎಂ ಪ್ರಸಕ್ತ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪ್ರಮುಖ ಪಕ್ಷಗಳಿಗೆ ಸೆಡ್ಡು ಹೊಡೆಯಲು ಯತ್ನಿಸುತ್ತಿದೆ. ಕಾಂಗ್ರೆಸ್ಗೆ ಶಾಸಕ ಬಿ.ನಾರಾಯಣರಾವ್ ಅವರ ಸಾರಥ್ಯವಿದೆ. ಇವರ ನೇತೃತ್ವದಲ್ಲಿ ಕೈ ಪಡೆ ಚುನಾವಣೆಗೆ ಸಕಲ ಸಿದ್ಧತೆ ನಡೆಸಿದ್ದು, ನಗರಸಭೆ ಚುಕ್ಕಾಣಿ ಹಿಡಿಯಲು ತಂತ್ರ ಹೆಣೆಯುತ್ತಿದೆ. ಬಿಜೆಪಿಯಲ್ಲಿ ಸಾರಥಿಗಳ ಕೊರತೆ ಕಾಡುತ್ತಿದೆ. ಕೆಲ ವಾರ್ಡ್​ ಟಿಕೆಟ್​ಗಾಗಿ ಸಲ ಪೈಪೋಟಿ ನಡೆದು ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದೆ. ಮಾಜಿ ಶಾಸಕ ಮಲ್ಲಿಕಾಜರ್ುನ ಖೂಬಾ ಕ್ಷೇತ್ರದಿಂದ ದೂರವೇ ಉಳಿದಿದ್ದಾರೆ. ಮಾಜಿ ಶಾಸಕ ಎಂ.ಜಿ.ಮುಳೆ ಇತರರು ಜೆಡಿಎಸ್ಗೆ ಶಕ್ತಿ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ.

ಕಾಡುತ್ತಿದೆ ನಾಯಕತ್ವ ಕೊರತೆ: ಕಾಂಗ್ರೆಸ್ ಬಿಟ್ಟರೆ ಜೆಡಿಎಸ್ ಹಾಗೂ ಬಿಜೆಪಿಗೆ ನಾಯಕತ್ವದ ಕೊರತೆ ಕಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡ ಮಲ್ಲಿಕಾರ್ಜುನ ಖೂಬಾ ವರ್ಷದಿಂದ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಕಳೆದ ಸಲ ಜೆಡಿಎಸ್ನಿಂದ ಸ್ಪರ್ಧಿಸಿ ಸೋತ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸಹ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಾಜಿ ಶಾಸಕ ಎಂ.ಜಿ.ಮುಳೆ ಹಾಗೂ ಕೆಲ ಪ್ರಮುಖರು ಇಲ್ಲಿದ್ದರೂ ಚುನಾವಣೆ ಗಂಭೀರ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಕಾಂಗ್ರೆಸ್ ಪರ ಶಾಸಕ ಬಿ. ನಾರಾಯಣರಾವ್ ವಿವಿಧ ವಾರ್ಡ್​ ಸಂಚಾರ ಆರಂಭಿಸಿದ್ದಾರೆ. ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದೊದ್ದೀನ್ ಓವೈಸಿ ಎರಡು ಪ್ರಚಾರ ಸಭೆ ನಡೆಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಕಾಂಗ್ರೆಸ್ಗೆ ಹೋಲಿಸಿದರೆ ಬಿಜೆಪಿಗೆ ಪ್ರಬಲ ನಾಯಕತ್ವವಿಲ್ಲ. ಪಕ್ಷದ ಪ್ರಮುಖರ ನಡುವೆ ಸಮನ್ವಯತೆ ಕೊರತೆ ಇದೆ. ಕಾರ್ಯಕರ್ತರ ಬಲದ ಮೇಲೆ ಪಕ್ಷ ಹಲವೆಡೆ ಪ್ರಬಲ ಸ್ಪಧರ್ೆಗೆ ಸಿದ್ಧತೆ ನಡೆಸಿದೆ. ಈ ಚುನಾವಣೆಯಲ್ಲೂ ಮೋದಿ ಹವಾ ಕೆಲಸ ಮಾಡಲಿದೆ ಎಂಬ ನಂಬಿಕೆಯಿಂದ ಕಾರ್ಯಕರ್ತರು ದುಡಿಯುತ್ತಿದ್ದಾರೆ. 5 ವಾರ್ಡ್​ಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎರಡು ವಾರ್ಡ್​ಗಳಲ್ಲಿ ಡಬೂ್ಲೃಪಿಐ ಅಭ್ಯರ್ಥಿ ಕಣಕ್ಕಿಳಿದಿದ್ದು, ಖಾತೆ ತೆರೆಯಲು ಯತ್ನಿಸುತ್ತಿದೆ. ಕೆಲ ವಾರ್ಡ್​ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪ್ರಬಲರಾಗಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಪ್ರಚಾರ ನಡೆಸುತ್ತ ಕಣಕ್ಕೆ ರಂಗೇರಿಸಿದ್ದಾರೆ.
18 ಮುಸ್ಲಿಂರಿಗೆ ಕೈ ಮನ್ನಣೆ: 31 ವಾರ್ಡ್​ಗಳ ಪೈಕಿ 15 ವಾರ್ಡ್​ಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯವಿದೆ. ಆದರೆ ಶಾಸಕ ಬಿ. ನಾರಾಯಣರಾವ್ ಅವರು 18 ವಾರ್ಡ್​ಗಳಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವೊದಗಿಸಿದೆ. ಈ ಸಮುದಾಯದ ಮತಗಳು ಕಾಂಗ್ರೆಸ್ಗೆ ಶಕ್ತಿ ನೀಡುತ್ತ ಬಂದಿವೆ. ಹೀಗಾಗಿ ಇವರ ಜತೆ ಇತರರ ಮತ ಸೆಳೆದು ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯಲು ಶಾಸಕರು ತಂತ್ರ ರೂಪಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 40 ವರ್ಷಗಳ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದ್ದು, ಈ ಸಮುದಾಯ ಕೈಗೆ ಬಲ ನೀಡಿತ್ತು ಎನ್ನವುದು ಗಮನಾರ್ಹ. ಈ ಕಾರಣಕ್ಕಾಗಿ ಶಾಸಕರು ಸಮುದಾಯಕ್ಕೆ ಸಿಂಹಪಾಲು ಟಿಕೆಟ್ ನೀಡಿ ಅವರ ಒಲವು ಗಟ್ಟಿಗೊಳಿಸಲು ಯತ್ನಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಇದೇ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಎಂಐಎಂ ಸಹ ಈ ಬಾರಿ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಕೆಲವು ವಾರ್ಡ್​ಗಳಲ್ಲಿ ಅಲ್ಪಸಂಖ್ಯಾತರ ಮತಗಳ ವಿಭಜನೆಗೆ ಕಾರಣ ಆಗುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಪಾಳಯದಲ್ಲಿ ಇದು ಒಂದಿಷ್ಟು ತಳಮಳಕ್ಕೆ ಕಾರಣವಾಗಿದೆ.

ಅಧಿಕಾರಕ್ಕಾಗಿ ನಾನಾ ಕಸರತ್ತು : ಕಾಂಗ್ರೆಸ್, ಬಿಜೆಪಿಯಲ್ಲಿ ಕೆಲವೆಡೆ ಟಿಕೆಟ್ ಹಂಚಿಕೆಯಲ್ಲಿ ಎಡವಟ್ಟಾಗಿದೆ. ಟಿಕೆಟ್ ವಂಚಿತರಲ್ಲಿ ಕೆಲವರು ಬೇರೆ ಪಕ್ಷದಿಂದ ಕಣಕ್ಕೆ ಇಳಿದರೆ ಮತ್ತೆ ಕೆಲವರು ಪಕ್ಷೇತರರಾಗಿ ಕಣಕ್ಕಿಳಿದು ಬಂಡಾಯ ಬಿಸಿ ಮುಟ್ಟಿಸಲು ಮಂದಾಗಿರುವುದು ಉಭಯ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ 11 ಸ್ಥಾನ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್-7, ಬಿಎಸ್ಆರ್ ಕಾಂಗ್ರೆಸ್ 6, ಕೆಜೆಪಿ, ಎಂಐಎಂ ತಲಾ 3 ಸ್ಥಾನ ಪಡೆದಿದ್ದವು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಜಿಪಿ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ಪ್ರಮುಖ ಪಕ್ಷಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಕಸರತ್ತು ನಡೆದಿರುವುದು ಕಣಕ್ಕೆ ರಂಗೇರಿಸಿದೆ.

Leave a Reply

Your email address will not be published. Required fields are marked *