ದೊರೆಗೆ ಮನವಿ ಸಲ್ಲಿಸಲು ಮುಗಿಬಿದ್ದ ಜನ

ಚನ್ನಪಟ್ಟಣ: ಅಧಿಕಾರಕ್ಕೆ ಬಂದ ವರ್ಷದ ಬಳಿಕ ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರದ ಹಳ್ಳಿಗಳಿಗೆ ಸೋಮವಾರ ತೆರಳಿ ಜನರ ಕುಂದುಕೊರತೆ ಆಲಿಸಿದರು. ಇಗ್ಗಲೂರು ಬ್ಯಾರೇಜ್​ನಲ್ಲಿ ಸಿ ಮತ್ತು ಸಿ.2 ಯೋಜನೆಗಳ ಪುನಶ್ಚೇತನ ಕಾಮಗಾರಿಗಳಿಗೆ ಬೆಳಗ್ಗೆ 9 ಗಂಟೆಗೆ ಚಾಲನೆ ನೀಡಲಿರುವುದಾಗಿ ಕಾರ್ಯಕ್ರಮದ ಪಟ್ಟಿಯಲ್ಲಿ ತಿಳಿಸಲಾಗಿತ್ತಾದರೂ ಸಿಎಂ ಆಗಮಿಸಿದ್ದು ಮಧ್ಯಾಹ್ನ 1.30ಕ್ಕೆ. ನಾಲ್ಕೂವರೆ ಗಂಟೆ ತಡವಾಗಿ ಆಗಮಿಸಿದ ಸಿಎಂಗಾಗಿ ಅಧಿಕಾರಿಗಳು ಕಾಯ್ದು ಬಸವಳಿದರು. ತಾಲೂಕಿಗೆ 11 ಗಂಟೆಗೆ ಆಗಮಿಸಿದರಾದರೂ ಪ್ರತಿ ಗ್ರಾಮದಲ್ಲಿ ಜನತೆ ಅಡ್ಡಗಟ್ಟಿ ಮನವಿ ಸಲ್ಲಿಸಿದ್ದರಿಂದ ನಿಗದಿತ ಕಾರ್ಯಕ್ರಮಕ್ಕೆ ಆಗಮಿಸುವುದು ತಡವಾಯಿತು. ಅಕ್ಕೂರು ಗ್ರಾಮದ ಜನತಾದರ್ಶನ ಕಾರ್ಯಕ್ರಮ 10 ಗಂಟೆಗೆ ನಿಗದಿಯಾಗಿತ್ತಾದರೂ ಕಾರ್ಯಕ್ರಮ ಆರಂಭಗೊಂಡಾಗ ಮಧ್ಯಾಹ್ನ 3 ಗಂಟೆ ದಾಟಿತ್ತು.

ಸಿಎಂಗೇ ಅಹವಾಲು ಸಲ್ಲಿಸಲು ಪಟ್ಟು : ಜನತಾದರ್ಶನ ಹಿನ್ನೆಲೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಸಲು ಕೌಂಟರ್​ಗಳನ್ನು ತೆರೆಯಲಾಗಿತ್ತಾದರೂ, ಜನತೆ ಖುದ್ದು ಮುಖ್ಯಮಂತ್ರಿಗೇ ಅರ್ಜಿ ನೀಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ವಾಗ್ವಾದ ನಡೆಯಿತು. ನಂತರ ಜನತಾದರ್ಶನದ ಕೌಂಟರ್​ನಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಎರಡೆರಡು ಸ್ವೀಕೃತಿಗಳನ್ನು ನೀಡಿ, ಒಂದನ್ನು ತಮ್ಮ ಬಳಿ ಇರಿಸಿಕೊಂಡು ಇನ್ನೊಂದನ್ನು ಮುಖ್ಯಮಂತ್ರಿಗಳಿಗೆ ನೀಡುವಂತೆ ತಿಳಿಸಲಾಯಿತು. ಇದಕ್ಕೂ ಮೊದಲು ಗ್ರಾಪಂ ಮಟ್ಟದಲ್ಲಿ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತಾದರೂ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ನೀಡಿರಲಿಲ್ಲ.

1,001 ಈಡುಗಾಯಿ ಒಡೆದ ಅಭಿಮಾನಿಗಳು: ಕುಮಾರಸ್ವಾಮಿ ಸಿಎಂ ಆದರೆ ಸಾಮಂದಿಪುರ ಬಸವೇಶ್ವರ ದೇವಾಲಯದ ಮುಂದೆ ಅವರೆದುರೇ 1,001 ಈಡುಗಾಯಿ ಒಡೆಯುವುದಾಗಿ ಗ್ರಾಮಸ್ಥರು ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ಗ್ರಾಮಕ್ಕೆ ಕರೆತಂದು ಅವರ ಎದುರೇ ಈಡುಗಾಯಿ ಒಡೆದು ಹರಕೆ ತೀರಿಸಿದರು.

ತಂದೆ ಪ್ರತಿಮೆ ವೀಕ್ಷಣೆ: ಸಾಮಂದಿಪುರ ಗ್ರಾಮದ ಜನತೆ ಸ್ಥಾಪಿಸಿರುವ 7 ಅಡಿ ಎತ್ತರದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಮೆಯನ್ನು ವೀಕ್ಷಿಸಿದ ಕುಮಾರಸ್ವಾಮಿ, ನಮ್ಮ ಕುಟುಂಬದ ಮೇಲಿನ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಿಎಂಗೆ ಹಳ್ಳ ಗುಂಡಿಗಳ ಸ್ವಾಗತ: ತಾಲೂಕಿನ ಹಳ್ಳಿಗಳಿಗೆ ತೆರಳಿದ ಸಿಎಂ ಕುಮಾರಸ್ವಾಮಿ ಅವರಿಗೆ ಸ್ವಕ್ಷೇತ್ರದ ಹಳ್ಳ ಗುಂಡಿಯಿಂದ ಕೂಡಿರುವ ರಸ್ತೆಗಳು ಸ್ವಾಗತ ಕೋರಿದವು. ಸಿಎಂ ಬರುವ ದಾರಿಯಲ್ಲಿ ಮುಜುಗರ ಆಗಬಾರದು ಎಂದು ಅಧಿಕಾರಿಗಳು ರಾತ್ರೋರಾತ್ರಿ ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಮಾಡಿದ್ದರು. ಕೆಲವೆಡೆ ಮಣ್ಣು ಹಾಕಿ ಮುಚ್ಚಿದ್ದರಿಂದ ಸಿಎಂ ಆಗಮನದ ವೇಳೆ ರಸ್ತೆಯುದ್ದಕ್ಕೂ ಧೂಳು ಎದ್ದಿತ್ತು.

80 ಸಾವಿರ ರೂ. ಕಳ್ಳರ ಪಾಲು: ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆಡಿಎಸ್ ಮುಖಂಡರು, ಸಾರ್ವಜನಿಕರು ಕಳ್ಳರ ಕರಾಮತ್ತಿನಿಂದಾಗಿ ಹಣ ಕಳೆದುಕೊಳ್ಳಬೇಕಾಯಿತು. ಇಗ್ಗಲೂರು ಬ್ಯಾರೇಜ್ ಬಳಿ ಗುಡಿ ಸರಗೂರು ಗ್ರಾಮದ ಕೃಷ್ಣ ಎಂಬುವರು 25 ಸಾವಿರ ರೂ., ಸೋಗಾಲ ದೊಡ್ಡಿ ಬಸವರಾಜು ಎಂಬುವರು 15 ಸಾವಿರ ರೂ., ಹಾಗಲಹಳ್ಳಿ ಶಿವಲಿಂಗ ಎಂಬುವರು 40 ಸಾವಿರ ರೂ. ಕಳೆದುಕೊಂಡರು.

ರಾತ್ರಿವರೆಗೆ ಮುಂದುವರಿದ ಜನತಾದರ್ಶನ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನತಾದರ್ಶನ ಕಾರ್ಯಕ್ರಮ ರಾತ್ರಿ 9 ಗಂಟೆಯವರೆಗೆ ಮುಂದುವರಿಯಿತು. ಅಕ್ಕೂರು ಕಾರ್ಯಕ್ರಮ ಮುಗಿದ ಬಳಿಕ ಕೋಡಂಬಹಳ್ಳಿಗೆ ತೆರಳಿ ಜನತಾದರ್ಶನ ನಡೆಸಿದರು. ನಂತರ ಹೊಂಗನೂರು ಜಿಪಂ ವ್ಯಾಪ್ತಿಯಲ್ಲಿ ಜನತಾದರ್ಶನ ನಡೆಸಿದರು.

ಜಿಲ್ಲಾಧಿಕಾರಿ ಪೇಚಾಟ: ಸಿಎಂ ಕಾರ್ಯಕ್ರಮ ಸಾಕಷ್ಟು ತಡವಾಗಿತ್ತು. ಸಾಮಂದಿಪುರದ ಮುಖಂಡರೊಬ್ಬರು ನಮ್ಮ ಮನೆಗೆ ಸಿಎಂ ಬರಲೇಬೇಕು ಎಂದು ಪಟ್ಟು ಹಿಡಿದರು. ಕುಮಾರಸ್ವಾಮಿ ನಯವಾಗಿ ತಿರಸ್ಕರಿಸುತ್ತಿದ್ದರು. ಆದರೆ ಮುಖಂಡರು ಪಟ್ಟು ಬಿಡಲೇ ಇಲ್ಲ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಏಯ್… ಸುಮ್ನೆ ಬಿಡ್ರಪ್ಪಾ.., ಅಲ್ಲಿ ಸಾವಿರಾರು ಜನ ಕಾಯ್ತಾ ಕೂತಿದ್ದಾರೆ…, ಸುಮ್ನೆ ಹುಡುಗಾಟ ಆಡಬೇಡಿ ಎಂದು ಮನವೊಲಿಸಿದರು. ಮಾರ್ಗದುದ್ದಕ್ಕೂ ಅಭಿಮಾನಿಗಳ ಒತ್ತಡದ ನಡುವೆ ಮುಖ್ಯಮಂತ್ರಿಯನ್ನು ಜನರಿಂದ ಬಿಡಿಸಿ ವೇದಿಕೆ ಕಾರ್ಯಕ್ರಮಕ್ಕೆ ಕರೆದೊಯ್ಯುವಲ್ಲಿ ಪೊಲೀಸರು, ಜಿಲ್ಲಾಡಳಿತ ಹೈರಾಣಾಗಿ ಹೋದರು.

Leave a Reply

Your email address will not be published. Required fields are marked *